ಬೆಂಗಳೂರು/ಮೈಸೂರು: ಬೆಂಗಳೂರಿನ ಶಿವಾಜಿನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ (Shivajinagar police station) ಎಸ್.ಡಿ. ಲಕ್ಷ್ಮಿನರಸಿಂಹ ಅವರಿಗೆ ಸ್ಪಂದನ ಸಾಂಸ್ಕೃತಿಕ ಪರಿಷತ್ತು ರಾಜ್ಯಮಟ್ಟದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಸಾಂಸ್ಕೃತಿಕ ನಗರಿ ಮೈಸೂರನ್ನು ಕೇಂದ್ರವನ್ನಾಗಿಸಿಕೊಂಡು ಕಳೆದ ಎರಡು ದಶಕಗಳಿಂದ ವೈವಿಧ್ಯಮಯ ಸಾಹಿತ್ಯಾತ್ಮಕ ಹಾಗೂ ಸಾಂಸ್ಕೃತಿಕ ಕಾರ್ಯಚಟುವಟಿಕೆಯನ್ನು ಕ್ರಿಯಾಶೀಲವಾಗಿ ಸ್ಪಂದನ ಸಾಂಸ್ಕೃತಿಕ ಪರಿಷತ್ತು ಸಂಘಟಿಸುತ್ತಾ ಬಂದಿದೆ. ಅಲ್ಲದೆ, ಸಾರ್ವಜನಿಕ ಆಡಳಿತ ಸೇವಾ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಮತ್ತು ಮಾಡಿರುವ ಆಮೂಲ್ಯ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಾಜಿನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಎಸ್.ಡಿ. ಲಕ್ಷ್ಮಿನರಸಿಂಹ ಅವರನ್ನು ಆಯ್ಕೆ ಮಾಡಿ ಅಭಿನಂದಿಸಲಾಗಿದೆ.
ಏಪ್ರಿಲ್ 7ರಂದು ಮೈಸೂರಿನ ವಿಜಯನಗರದ ಜಿಲ್ಲಾ ಸಾಹಿತ್ಯ ಭವನದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪಂಪ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಡಾ.ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿದೆ. ಇನ್ನು ರಾಜ್ಯ ಮಟ್ಟದ ಯುಗಾದಿ ಕಾವ್ಯ ಸಂಭ್ರಮದಲ್ಲಿ ಖ್ಯಾತ ಕವಯಿತ್ರಿ ಹಾಗೂ ಸಪ್ತ ಮಹಾಕಾವ್ಯ ಕರ್ತೃ ಡಾ. ಲತಾ ರಾಜಶೇಖರ್ ಅವರಿಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಜತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಆರು ಮಂದಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಮಾಜಮುಖಿ ಪ್ರಶಸ್ತಿ ಹಾಗೂ ಆರು ಮಂದಿಗೆ ಯುವ ಚೇತನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.