ಬೆಂಗಳೂರು: ಇಲ್ಲಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ (Bengaluru News) ದೇವಿನಗರದಲ್ಲಿ ಕಳೆದ ಮಾರ್ಚ್ 29ರಂದು ಕಾರೊಂದರಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ಸಜೀವ ದಹನವಾಗಿದ್ದ. ಇದೀಗ ಒಳ ಉಡುಪಿನಿಂದ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಸೊಳ್ಳೆ ಬತ್ತಿಯಿಂದಾಗಿ ಜೀವಕ್ಕೆ ಕುತ್ತು ಬಂದಿದೆ ಎಂದು ತಿಳಿದು ಬಂದಿದೆ. ವಿನೋದ್ ಮೃತ ದುರ್ದೈವಿ ಆಗಿದ್ದಾನೆ.
ಮದ್ಯ ವ್ಯಸನಿಯಾಗಿದ್ದ ವಿನೋದ್ ಮದುವೆಯಾಗಿ ಪತ್ನಿಯಿಂದ ದೂರವಾಗಿ, ದೊಡ್ಡಬೊಮ್ಮಸಂದ್ರದಲ್ಲಿದ್ದ ತನ್ನ ತಾಯಿ ಕಾಂತಾ ಜತೆಗೆ ವಾಸವಿದ್ದ. ಕುಡಿತದ ದಾಸನಾಗಿದ್ದ ಈತ ಎಲ್ಲೆಂದರಲ್ಲಿ ಕುಡಿದು ಮಲಗುತ್ತಿದ್ದ. ಹೀಗೆ ಆ ದಿನವೂ ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟ್‌ನಲ್ಲಿ ಕ್ಲೋಸ್ ಆಗಿದ್ದ ಗ್ಯಾರೇಜ್ ಬಳಿ ಇದ್ದ ಫೋರ್ಡ್ ಕಾರೊಳಗೆ ಮಲಗಿದ್ದ. ಆದರೆ ಕೆಲವೇ ನಿಮಿಷಗಳಲ್ಲಿ ಕಾರಿನ ಇಂಜಿನ್ ಭಾಗದಲ್ಲಿ ಕಾಣಿಸಿಕೊಂಡ ಸಣ್ಣ ಬೆಂಕಿ ಏಕಾಏಕಿ ಆವರಿಸಿ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿತ್ತು.
ಕಾರಿಗೆ ಬೆಂಕಿ ಬಿದ್ದಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದಾಗ ಹಿಂಬದಿ ಸೀಟ್‌ನಲ್ಲಿ ವ್ಯಕ್ತಿಯೊಬ್ಬ ಸುಟ್ಟು ಕರಕಲಾಗಿದ್ದು ತಿಳಿದಿತ್ತು. ತನಿಖೆಗಿಳಿದ ಪೊಲೀಸರಿಗೆ ಮೃತಪಟ್ಟವನು ವಿನೋದ್ ಎಂದು ತಿಳಿದು ಬಂದಿದ್ದು, ಸ್ಕ್ರಾಪ್ ಕಾರಿನಲ್ಲಿ ಸೊಳ್ಳೆ ಬತ್ತಿ ಹಚ್ಚಿಕೊಂಡು ಮಲಗಿದ್ದೆ ಪ್ರಾಣಕ್ಕೆ ಕುತ್ತು ತಂದಿತ್ತು. ಸೊಳ್ಳೆ ಬತ್ತಿಯಿಂದ ಬೆಂಕಿ ತಗುಲಿ ಸಜೀವ ದಹನವಾಗಿದ್ದ. ಮೃತನ ಅರ್ಧ ಸುಟ್ಟ ಚಡ್ಡಿಯನ್ನು ತಾಯಿ ಮತ್ತು ಸಹೋದರಿ ಗುರುತಿಸಿದ್ದಾರೆ.
ಮನೆಯಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದು ಮಹಿಳೆ ದುರ್ಮರಣ
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಮನೆಯಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದು ಮಹಿಳೆಯೊಬ್ಬರು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಾವಿತ್ರಮ್ಮ (50) ಎಂಬ ಮಹಿಳೆಯೇ ಕುಸಿದ ಗೋಡೆಯ ಕಲ್ಲುಗಳಡಿ ಸಿಲುಕಿ ಪ್ರಾಣ ಕಳೆದುಕೊಂಡ ದುರ್ದೈವಿ.
ತೀರಾ ಬಡವರಾಗಿರುವ ಸಾವಿತ್ರಮ್ಮ ಜೀವನದ ಆಸರೆಯಾಗಿ, ಬದುಕುವುದಕ್ಕಾಗಿ ಶೆಡ್ ರೀತಿಯಲ್ಲಿ ಸಣ್ಣ ಮನೆಯೊಂದನ್ನು ಕಟ್ಟಿಕೊಂಡಿದ್ದರು. ಆದರೆ, ದುರದೃಷ್ಟಕ್ಕೆ ಆ ಮನೆಯೇ ಅವರಿಗೆ ಮುಳುವಾಯಿತು. ಶೆಡ್‌ನ ಗೋಡೆ ಕುಸಿದು ಅದರ ಇಟ್ಟಿಗೆಗಳು ಅವರ ಮೇಲೆ ಬಿದ್ದು ಅವರು ಒದ್ದಾಡಿದ್ದಾರೆ.
ಮನೆಯ ಒಳಗಡೆ ಮಲಗಿದ್ದ ವೇಳೆ ಇದ್ದಕ್ಕಿದ್ದಂತೆಯೇ ಗೋಡೆ ಕುಸಿತ ಸಂಭವಿಸಿದೆ, ತಕ್ಷಣ ಅಕ್ಕಪಕ್ಕದವರು ಗೋಡೆ ಕೆಳಗೆ ಸಿಲುಕಿದ್ದ ಸಾವಿತ್ರಮ್ಮನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ಅವರು ದಾರಿ ಮಧ್ಯೆ ಪ್ರಾಣ ಕಳೆದುಕೊಂಡರು.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಗ್ರಾಮದಲ್ಲಿ ನಡೆದಿರುವ ಈ ಘಟನೆಗೆ ಸಂಬಂಧಿಸಿ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.