ಬೆಂಗಳೂರು: ಕಳೆದ ಮಾರ್ಚ್ 10ರ ರಾತ್ರಿ ಕೋರಮಂಗಲದ (Kormangala) ರೇಣುಕಾ ರೆಸಿಡೆನ್ಸಿಯ 4ನೇ ಮಹಡಿಯಿಂದ ಬಿದ್ದು ಗಗನಸಖಿಯೊಬ್ಬಳು ಮೃತಪಟ್ಟಿದ್ದಳು. ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಾಯಿ ಪ್ರಿಯಕರನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ.
ಹಿಮಾಚಲ ಪ್ರದೇಶ ಮೂಲದವಳಾದ ಅರ್ಚನಾ ಧೀಮನ್ (28) ಪ್ರತಿಷ್ಠಿತ ಏರ್‌ಲೈನ್ಸ್‌ನಲ್ಲಿ ಗಗನಸಖಿ (Air hostess) ಆಗಿ ಕೆಲಸ ಮಾಡಿಕೊಂಡಿದ್ದಳು. ತನ್ನ ಗೆಳೆಯ ಆದೇಶ್‌ನನ್ನು ಭೇಟಿ ಮಾಡಲು ದುಬೈನಿಂದ ಬೆಂಗಳೂರಿಗೆ ಬಂದಿದ್ದವಳು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿತ್ತು.
ಈ ಘಟನೆ ಸಂಬಂಧ ಅರ್ಚನಾ ಧೀಮನ್ ತಾಯಿ ಭಾನುವಾರ (ಮಾ.12) ಪ್ರಿಯಕರ ಆದೇಶ್ ವಿರುದ್ಧ ದೂರು ನೀಡಿದ್ದಾರೆ. ನನ್ನ ಮಗಳನ್ನು ಕೊಲ್ಲುವ ಉದ್ದೇಶದಿಂದಲೇ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ತಳ್ಳಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅರ್ಚನಾ ಧೀಮನ್ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ಆದೇಶ್‌ನನ್ನು ಬಂಧಿಸಿದ್ದಾರೆ.
ಇನ್ನು ದುಬೈನಿಂದ ಬೆಂಗಳೂರಿಗೆ ನಾಲ್ಕು ದಿನಗಳ ಹಿಂದೆಯೇ ಬಂದು ಗೆಳೆಯನೊಂದಿಗೆ ತಂಗಿದ್ದಳು ಎಂದು ತಿಳಿದು ಬಂದಿದೆ. ಪೊಲೀಸರು ಹೇಳುವ ಪ್ರಕಾರ ಅರ್ಚನಾ ಬಾಲ್ಕನಿ ಹೊರಗೆ ಕುಳಿತುಕೊಳ್ಳಲು ಬಂದಾಗ ಕಾಲು ಜಾರಿ ಅಪಾರ್ಟ್‌ಮೆಂಟ್‌ನಿಂದ ಬಿದ್ದಿರಬಹುದೆಂದು ಶಂಕಿಸಿದ್ದಾರೆ. ಈ ಘಟನೆ ನಡೆದ ಸಮಯದಲ್ಲಿ ಅರ್ಚನಾ ಧೀಮನ್ ಮತ್ತು ಆದೇಶ್ ಮದ್ಯ ಸೇವಿಸಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಈ ಆಯಾಮದಲ್ಲೂ ತನಿಖೆಯನ್ನು ಮುಂದುವರಿಸಿದ್ದಾರೆ.
ಡೇಟಿಂಗ್ ಆ್ಯಪ್ ಮೂಲಕ ಪರಿಚಯ
ಡೇಟಿಂಗ್ ಆ್ಯಪ್ (Dating App) ಮೂಲಕ ಪರಿಚಯವಾಗಿದ್ದ ಈ ಜೋಡಿ ಕಳೆದ ಆರು ತಿಂಗಳಿಂದ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಇಬ್ಬರಲ್ಲಿ ಕೆಲವು ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಂಡಿದ್ದು, ಆಗಾಗ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇನ್ನು ಘಟನೆ ನಡೆದಾಗ ಖುದ್ದು ಆದೇಶ್ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿದ್ದಾನೆ. ತೀವ್ರ ರಕ್ತಸ್ರಾವಗೊಂಡಿದ್ದ ಅರ್ಚನಾಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸದ್ದ ಎಂದು ಹೇಳಲಾಗಿದೆ. ಆದರೆ ಅಲ್ಲಿ ವೈದ್ಯರು ಆಕೆ ಅದಾಗಲೇ ಮೃತಪಟ್ಟಿದ್ದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾನೆ.
ಇದನ್ನೂ ಓದಿ: H3N2 Virus: ಎಚ್3ಎನ್2 ವೈರಸ್‌ನ ಮೂಲ ಪತ್ತೆಗಾಗಿ ಕ್ಲಿನಿಕಲ್ ಆಡಿಟ್‌ಗೆ ಮುಂದಾದ ಆರೋಗ್ಯ ಇಲಾಖೆ
ಇವರಿಬ್ಬರ ಪ್ರೀತಿ ಪೋಷಕರಿಗೂ ಗೊತ್ತಿತ್ತು
ಆದೇಶ್‌ನೇ ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿದ್ದಾಗಿ ಆರೋಪಿಸಿರುವ ಅರ್ಚನಾ ಪೋಷಕರಿಗೆ, ಇವರಿಬ್ಬರ ಪ್ರೀತಿಯ ವಿಷಯ ತಿಳಿದಿತ್ತು ಎನ್ನಲಾಗಿದೆ. ಸದ್ಯ ಅರ್ಚನಾಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಪೊಲೀಸರು ವರದಿಗಾಗಿ ಕಾಯುತ್ತಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ