ಬೆಂಗಳೂರು: ಇಲ್ಲಿನ ಶಿವಾನಂದ ಸರ್ಕಲ್ ಮೇಲ್ಸೇತುವೆ ಬಳಿಯ ಸರ್ವಿಸ್ ರಸ್ತೆ (Bengaluru Pothole) ಕುಸಿದಿದೆ. ಘಟನೆ ನಡೆದು 15 ದಿನಗಳು ಕಳೆದರೂ ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಾಗಿದ್ದಾರೆ. ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಲೇ ರಸ್ತೆ ಕುಸಿದಿದೆ ಎಂದು ಸ್ಥಳೀಯರ ಆರೋಪಿಸಿದ್ದು, ರಸ್ತೆ ದುರಸ್ತಿ ಮಾಡದ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಿಡಿಕಾರಿದ್ದಾರೆ.
ಬಿಡಬ್ಲ್ಯು ಎಸ್ಎಸ್‌ಬಿ ಈ ಸ್ಥಳದಲ್ಲಿ ಪೈಪ್ ಕಾಮಗಾರಿ ನಡೆಸಿತ್ತು. ಆದರೆ ಒಂದೆಡೆ ನೀರು ತುಂಬಿ ರಸ್ತೆ ಕುಸಿದಿದೆ. ಸ್ಥಳೀಯರು ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜವಾಗಿಲ್ಲ. ಇದು ನಮಗೆ ಬರುವುದಿಲ್ಲವೆಂದು ಬಿಡಬ್ಲ್ಯುಎಸ್ಎಸ್‌ಬಿ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಸ್ತೆ ಗುಂಡಿಗೆ ಬಿದ್ದು 15 ದಿನದಲ್ಲಿ ಸರಿ ಸುಮಾರು 5-8 ಜನರು ಗಾಯಗೊಂಡಿದ್ದಾರೆ. ಇದನ್ನು ಕಂಡ ಸ್ಥಳೀಯರು ಗುಂಡಿಯನ್ನು ಕಲ್ಲು ಮತ್ತು ಟಯರ್‌ನಿಂದ ಮುಚ್ಚುವ ಪ್ರಯತ್ನ ಮಾಡಿದ್ದಾರೆ. ಬಿಬಿಎಂಪಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: P K Rosy: ಮೊದಲ ದಲಿತ ಅಭಿನೇತ್ರಿ ಪಿ.ಕೆ. ರೋಸಿಗೆ ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್
ಇತ್ತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಶೇಷ ಆಯುಕ್ತರ ಸೂಚನೆ ಮೇರೆಗೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.