Site icon Vistara News

Bengaluru Rain: ಬೆಂಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ; ರಸ್ತೆಗಳು ಜಲಾವೃತ, ಹಲವೆಡೆ ಸಂಚಾರ ಅಸ್ತವ್ಯಸ್ತ

Bengaluru Rain

ಬೆಂಗಳೂರು: ರಾಜಧಾನಿಯಲ್ಲಿ ಭಾನುವಾರವೂ ಮಳೆ ಆರ್ಭಟ (Bengaluru Rain) ಮುಂದುವರಿಯಿತು. ನಗರದ ಹಲವೆಡೆ ಸುರಿದ ಧಾರಾಕಾರ ಮಳೆಯಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದರಿಂದ ಸಂಚಾರ ಅಸ್ತವ್ಯಸ್ತವಾಯಿತು. ಇದರಿಂದ ವಾಹನ ಸವಾರರು ಪರದಾಡಿದರು.

ಚಿಕ್ಕಪೇಟೆ, ಮೆಜೆಸ್ಟಿಕ್, ಯಲಹಂಕ, ಯಶವಂತಪುರ, ಲಗ್ಗೆರೆ, ರಾಜಾಜಿನಗರದಲ್ಲಿ ಭಾರಿ ಮಳೆಯಾಯಿತು. ಕಸ್ತೂರಿ ನಗರ ಕಡೆಯಿಂದ ಎಂಎಂಟಿ ಜಂಕ್ಷನ್ (ಕೆ.ಆರ್.ಪುರ) ಕಡೆಗೆ ಹೋಗುವ ಮಾರ್ಗದಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ವೈಟ್‌ಫೀಲ್ಡ್‌, ಮಹದೇವಪುರ ಮತ್ತು ಕೆ.ಆರ್.ಪುರ ಕಡೆಗೆ ನಿಧಾನಗತಿಯ ವಾಹನ ಸಂಚಾರ ಕಂಡುಬಂದಿತು.

ಇನ್ನು ಪೈಪ್‌ಲೈನ್ ಮುಖ್ಯ ರಸ್ತೆಯ ಕಮಲಾ ನಗರದಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಪಾದಾಚಾರಿಗಳು ಮತ್ತು ವಾಹನ ಸವಾರರು ರಸ್ತೆ ದಾಟಲು ಪರದಾಡಬೇಕಾಯಿತು. ರಸ್ತೆಗಳು ಜಲಾವೃತವಾಗಿದ್ದರಿಂದ ರಾಮಮೂರ್ತಿ ನಗರ – ಟಿನ್ ಫ್ಯಾಕ್ಟರಿ ರಸ್ತೆ, ಸಂಜಯನಗರ ಕ್ರಾಸ್ – ವಿಮಾನ ನಿಲ್ದಾಣ ರಸ್ತೆ, ಹುಣಸಮಾರನಹಳ್ಳಿ ಸರ್ವಿಸ್ ರಸ್ತೆ, ಬಿಇಎಲ್‌ನಿಂದ ಹೆಬ್ಬಾಳ ಮಾರ್ಗ, ಅನಿಲ್ ಕುಂಬ್ಳೆ ಜಂಕ್ಷನ್-ಬಿಆರ್ವಿ ಜಂಕ್ಷನ್ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು.

ಕೆರೆಯಂತಾದ ದೇವನಹಳ್ಳಿಯ ಸರ್ಕಲ್

ದೇವನಹಳ್ಳಿ: ಪಟ್ಟಣದ ಸುತ್ತಮುತ್ತಲ ಪ್ರದೇಶದಲ್ಲಿ ಧಾರಕಾರ ಮಳೆ ಸುರಿದಿದೆ. ನಿರಂತರ ಒಂದು ಗಂಟೆ ಸುರಿದ ಮಳೆಗೆ ಪಟ್ಟಣದ ಹೊರವಲಯದ ಬೈಪಾಸ್‌ನ ಕೆಂಪೇಗೌಡ ಸರ್ಕಲ್‌ ಕೆರೆಯಂತೆ ಬದಲಾಗಿತ್ತು. ಸುಮಾರು ಮೂರು ಅಡಿಗಿಂತ ಹೆಚ್ಚು ನೀರು ನಿಂತಿದ್ದರಿಂದ ವಾಹನ ಸವಾರರು ಮುಂದೆ ಹೋಗಲು ಹೈರಾಣಾದರು.

ಆನೇಕಲ್ ಭಾಗದಲ್ಲಿ ಮಳೆರಾಯನ ಸಿಂಚನ

ಆನೇಕಲ್: ಬೆಂಗಳೂರು ನಗರ ಹೊರವಲಯದ ಆನೇಕಲ್ ಭಾಗದಲ್ಲಿ ಮಳೆರಾಯನ ಸಿಂಚನ ಕಂಡುಬಂತು. ಆನೇಕಲ್, ಅತ್ತಿಬೆಲೆ, ಸರ್ಜಾಪುರ ಭಾಗದಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಇದನ್ನೂ ಓದಿ | Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ರಾಜ್ಯದ 17 ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಪೂರ್ವ ಮುಂಗಾರು ಚುರುಕುಗೊಂಡಿದ್ದು, 17 ಜಿಲ್ಲೆಗಳಿಗೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ‌ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆ ಸಾಧ್ಯತೆ ಇದೆ. ಹೀಗಾಗಿ ಮೀನುಗಾರರಿಗೆ ಸಮುದ್ರದಲ್ಲಿ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಕುಷ್ಟಗಿಯಲ್ಲಿ ಸಿಡಿಲು ಬಡಿದು ರೈತ ಸಾವು

ಕೊಪ್ಪಳ: ಸಿಡಿಲು ಬಡಿದು (Lightning strike) ರೈತ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಚನಾಳ ಗ್ರಾಮದಲ್ಲಿ ನಡೆದಿದೆ. ಉತ್ತಮ ಮಳೆ (Rain News) ಹಿನ್ನೆಲೆಯಲ್ಲಿ ಜಮೀನಿನಲ್ಲಿ ಬಿತ್ತನೆ ಸಲುವಾಗಿ ಕೃಷಿ ಚಟುವಟಿಕೆ ಮಾಡುತ್ತಿದ್ದಾಗ ಅವಘಡ ನಡೆದಿದ್ದು, ಈಶಪ್ಪ ಕಳಮಳ್ಳಿ (40) ಮೃತ ರೈತ.

ಮಳೆ ಬಂದ ಖುಷಿಯಲ್ಲಿ ಎತ್ತುಗಳೊಂದಿಗೆ ರೈತ ಭೂಮಿ ಹದ ಮಾಡುತ್ತಿದ್ದ. ಈ ವೇಳೆ ಸಿಡಿಲು ಬಡಿದು ರೈತ ಈಶಪ್ಪ ಕಳಮಳ್ಳಿ ಮೃತಪಟ್ಟಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ರೈತನ ಸಹೋದರ ಪಾರಾಗಿದ್ದಾನೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸಿಡಿಲು ಬಡಿದು ಯುವಕನಿಗೆ ಗಂಭೀರ ಗಾಯ

ಧಾರವಾಡ: ಸಿಡಿಲು ಬಡಿದು ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡದ ಮುಗದ ಗ್ರಾಮದ ಕೆರೆ ಬಳಿ ನಡೆದಿದೆ. ಇಂದು ಮಧ್ಯಾಹ್ನ ಸುರಿದ ಸಿಡಿಲು ಸಹಿತ ಮಳೆ ವೇಳೆ ಅವಘಡ ನಡೆದಿದೆ. ದಡ್ಡಿಕಮಲಾಪುರ ಗ್ರಾಮದ ನಿವಾಸಿ ರವಿ ಕೊರಮಡ್ಡಿ ಗಾಯಾಳು. ಇದೆ ವೇಳೆ ಸಿಡಿಲಿಗೆ ಎಮ್ಮೆ ಕರು ಬಲಿಯಾಗಿದೆ. ಗಂಭೀರ ಗಾಯಗೊಂಡ ಯುವಕನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

Exit mobile version