ಬೆಂಗಳೂರು: ನಗರದ ವಿವಿಧೆಡೆ ಸೋಮವಾರ ರಾತ್ರಿ ವರುಣ (Bengaluru Rain) ಆರ್ಭಟಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯಿಂದ ರಸ್ತೆಗಳು ಸೇರಿ ನಗರದ 33 ಸ್ಥಳಗಳು ಜಲಾವೃತಗೊಂಡಿದ್ದು, 16 ಮರಗಳು ನೆಲಕ್ಕುರುಳಿವೆ. ಇದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿ ವಾಹನ ಸವಾರರು ಪರದಾಡಬೇಕಾಯಿತು.
ಬೆಂಗಳೂರಿನ ಓಕಳೀಪುರಂ, ಮಲೇಶ್ವರಂ, ರಾಜಾಜಿನಗರ, ಮೆಜೆಸ್ಟಿಕ್, ರೇಸ್ ಕೋರ್ಸ್, ಕೆ.ಆರ್.ಮಾರ್ಕೆಟ್, ಮತ್ತಿಕೆರೆ, ಕತ್ತರಿಗುಪ್ಪೆ, ಆನೇಕಲ್, ಎಲೆಕ್ಟ್ರಾನಿಕ್ ಸಿಟಿ ಸೇರಿ ವಿವಿಧೆಡೆ ಮಳೆ ಅಬ್ಬರಿಸಿದೆ. ಓಕಳೀಪುರಂನ ರಾಜೀವ್ ಗಾಂಧಿ ಅಷ್ಟಪಥ ಅಂಡರ್ ಪಾಸ್ ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು.
ಮೈಸೂರು ರಸ್ತೆಯ ಬ್ಯಾಟರಾಯನಪುರ, ಜೆಸಿ ನಗರದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಮಲ್ಲೇಶ್ವರ, ಬಸವನಗುಡಿ, ಕತ್ತರಿಗುಪ್ಪೆ ಸರ್ಕಲ್, ರಾಜಾಜಿನಗರ ಭಾಷ್ಯಂ ಸರ್ಕಲ್ ಬಳಿ ಸೇರಿದಂತೆ 16 ಕಡೆ ಮರಗಳು ನೆಲಕ್ಕುರುಳಿವೆ. ಅದೃಷ್ಟವಾಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಭಾರಿ ಗಾಳಿ ಮಳೆಗೆ ಹಾರಿದ ಅಂಗಡಿಗಳ ಹೊದಿಕೆ, ಶೀಟ್‌ಗಳು
ಆನೇಕಲ್: ಭಾರಿ ಗಾಳಿ ಮಳೆಯಿಂದ ಹೂ ಮತ್ತು ಹಣ್ಣಿನ ಅಂಗಡಿಗಳ ಹೊದಿಕೆ ಮತ್ತು ಶೀಟ್‌ಗಳು ಹಾರಿದ ಘಟನೆ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆಯಿತು. ಚಂದಾಪುರ ಪುರಸಭೆ ಕಚೇರಿ ಮುಂದೆ ನೋಡ ನೋಡುತ್ತಿದ್ದಂತೆ ಅಂಗಡಿಗಳ ಶೀಟ್‌ಗಳು ಹಾರಿ ಹೋದವು. ಜತೆಗೆ ಹೂವು, ಹಣ್ಣು ನೀರುಪಾಲಾಗಿದ್ದರಿಂದ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತ ಧಾರಕಾರ ಮಳೆ ಸುರಿಯಿತು.