Site icon Vistara News

Bengaluru Rain : ಅಂಡರ್‌ಪಾಸ್‌ ದುರಂತಕ್ಕೆ ಎಚ್‌ಡಿಕೆ ಆಕ್ರೋಶ; ಮಳೆ ಬಂದರೆ ಸಾವೇ ಗತಿಯಾ?

bengaluru-rain: How lives you want? HDk questions administration after young lady death

bengaluru-rain: How lives you want? HDk questions administration after young lady death

ಬೆಂಗಳೂರು: ರಾಜಧಾನಿಯಲ್ಲಿ ಕೆಲವೇ ನಿಮಿಷಗಳಷ್ಟು ಹೊತ್ತು ಸುರಿದ ಭಾರಿ ಮಳೆಯಿಂದಾಗಿ‌ (Bengaluru rain) ಭಾರಿ ಅವಾಂತರ ಸೃಷ್ಟಿಯಾಗಿರುವುದು ಮತ್ತು ವಿಧಾನಸೌಧ ಸಮೀಪದ ಕೆ.ಆರ್‌. ಸರ್ಕಲ್‌ (KR Circle Underpass) ಬಳಿಯ ಅಂಡರ್‌ಪಾಸ್‌ನಲ್ಲಿ ಕಾರೊಂದು ಸಿಕ್ಕಿಬಿದ್ದು, ಅದರೊಳಗೆ ಸಿಲುಕಿ ಇನ್ಫೋಸಿಸ್‌ ಉದ್ಯೋಗಿ (Infosys employee) ಯುವತಿ ಬಾನುರೇಖಾ (22) ಮೃತಪಟ್ಟಿರುವ ಘಟನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಭಾರಿ ಆಕ್ರೋಶಗೊಂಡಿದ್ದಾರೆ. ಬೆಂಗಳೂರಿನಲ್ಲಿ ಮಳೆ ಬಂದರೆ ಸಾವೇ ಗತಿಯಾ? ಅಧಿಕಾರಿಗಳು ಯಾಕಿಷ್ಟು ನಿರ್ಲಕ್ಷ್ಯ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಘಟನೆಯ ಬಳಿಕ ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಆಡಳಿತ ವ್ಯವಸ್ಥೆ ತುರ್ತು ಕ್ರಮಗಳನ್ನು ತೆಗೆದುಕೊಂಡು ಇಂಥ ಘಟನೆಗಳು ಮರುಕಳಿಸದಂತೆ ಮಾಡಬೇಕು ಎಂದು ಹೇಳಿದರು.

ಅವರು ಟ್ವೀಟ್‌ನಲ್ಲಿ ಹೇಳಿದ್ದೇನು?

ಬಿಬಿಎಂಪಿ ನಿರ್ಲಕ್ಷ್ಯದ ಪರಮಾವಧಿ

ಬೆಂಗಳೂರು ನಗರದಲ್ಲಿ ಇಂದು ಸುರಿದ ಭಾರೀ ಮಳೆಯಿಂದ ಕೆ.ಆರ್.ವೃತ್ತದ ಅಂಡರ್ ಪಾಸ್ ನಲ್ಲಿ ಮಳೆನೀರಿಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಎಂಬ ಯುವತಿ ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ರಭಸ ಮಳೆಯ ಮುನ್ನೆಚ್ಚರಿಕೆ ಇದ್ದರೂ ಬಿಬಿಎಂಪಿ ಆಡಳಿತ ಎಚ್ಚೆತ್ತುಕೊಳ್ಳದೇ ಇರುವುದು ನಿರ್ಲಕ್ಷ್ಯದ ಪರಮಾವಧಿ.

ಎಚ್ಚೆತ್ತುಕೊಳ್ಳಲು ಪ್ರಾಣ ಬಲಿಯೇ ಬೇಕಾ?

ಅಂಡರ್ ಪಾಸ್ ಗಳಲ್ಲಿ ಕಸಕಡ್ಡಿ ತೆಗೆದು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕಾಗಿದ್ದ ಪಾಲಿಕೆ, ಮೈಮರೆತು ಕರ್ತವ್ಯಲೋಪ ಎಸಗಿದೆ. ಪ್ರತೀಸಲವೂ ಮಳೆ ಬಂದಾಗ ಅವಾಂತರ, ಪ್ರಾಣಹಾನಿ ಸಂಭವಿಸಿದ ಮೇಲೆ ಪಾಲಿಕೆ ಎಚ್ಚೆತ್ತುಕೊಳ್ಳುತ್ತದೆ, ಯಾಕೆ? ಮಳೆ ಬಂದರೆ ಜನರು ಸಾಯಲೇಬೇಕೆ?

ಅಂಡರ್‌ಪಾಸ್‌ನಲ್ಲಿ ವಾಹನ ಬಿಡಬಾರದು

ಭಾರೀ ಮಳೆ ಸುರಿಯುತ್ತಿದ್ದ ಅಪಾಯದ ಸಮಯದಲ್ಲಿ ವಾಹನ ಚಾಲಕರು ಅತ್ಯಂತ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡಿದ್ದನ್ನು ಕಂಡ ಮೇಲೂ ಚಾಲಕ ಕಾರನ್ನು ಅಂಡರ್ ಪಾಸ್ ಮೂಲಕ ಚಾಲನೆ ಮಾಡಬಾರದಿತ್ತು. ಸಂಚಾರಿ ಪೊಲೀಸರು ಮೊದಲೇ ಮುನ್ನೆಚ್ಚರಿಕೆ ನೀಡಬೇಕಿತ್ತು.

ಎಲ್ಲ ಅಂಡರ್‌ಪಾಸ್‌ಗಳನ್ನು ಪರಿಶೀಲಿಸಲು ಸಲಹೆ

ಬಿಬಿಎಂಪಿ ಅಧಿಕಾರಿಗಳು ಕೂಡಲೇ ನಗರದ ಉದ್ದಗಲಕ್ಕೂ ಎಲ್ಲಾ ಅಂಡರ್ ಪಾಸ್ ಗಳನ್ನು ವಿಸ್ತೃತವಾಗಿ ಪರಿಶೀಲಿಸಿ, ಕಸಕಡ್ಡಿ ವಿಲೇವಾರಿ ಮಾಡಿಸಿ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಇನ್ನೊಂದು ಪ್ರಾಣನಷ್ಟವೂ ಆಗುವುದಕ್ಕೆ ಅವಕಾಶ ನೀಡಬಾರದು.

ಸರ್ಕಾರ ಶಾಶ್ವತ ಪರಿಹಾರ ಒದಗಿಸಲಿ

ಮೃತ ನತದೃಷ್ಟ ಯುವತಿ ಕುಟುಂಬಕ್ಕೆ ಪರಿಹಾರ ನೀಡಿರುವುದು ಸ್ವಾಗತಾರ್ಹ. ಆದರೆ, ಇಂತಹ ದುರಂತಗಳು ಮರುಕಳಿಸದಂತೆ ರಾಜ್ಯ ಕಾಂಗ್ರೆಸ್‌ ಸರಕಾರ ಶಾಶ್ವತ ಪರಿಹಾರ ರೂಪಿಸಬೇಕು. ಅಂಡರ್ ಪಾಸ್, ರಸ್ತೆ, ಚರಂಡಿ, ಒಳಚರಂಡಿಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎನ್ನುವುದು ನನ್ನ ಆಗ್ರಹ.

ಇದನ್ನೂ ಓದಿ : Bengaluru Rain: ಮೃತ ಯುವತಿ ಕುಟಂಬಕ್ಕೆ 5 ಲಕ್ಷ ರೂ. ಪರಿಹಾರ; ಅವೈಜ್ಞಾನಿಕ ಅಂಡರ್ ಪಾಸ್‌ ಸರಿಪಡಿಸುತ್ತೇವೆ: ಸಿಎಂ ಸಿದ್ದರಾಮಯ್ಯ
ಇದನ್ನೂ ಓದಿ: Karnataka Rain: ಬಿರುಗಾಳಿ ಮಳೆ, ಮೂಡಿಗೆರೆಯಲ್ಲಿ ಸ್ಕೂಟರ್ ಮೇಲೆ ಮರ ಬಿದ್ದು ಸವಾರ ಸಾವು

Exit mobile version