ಬೆಂಗಳೂರು: ಸೇಫ್ ಸಿಟಿ, ಗಾರ್ಡನ್ ಸಿಟಿ, ಐಟಿಬಿಟಿ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲ ಹೆಸರು, ಖ್ಯಾತಿಯನ್ನು ಪಡೆದುಕೊಂಡಿದ್ದ ನಮ್ಮ ಬೆಂಗಳೂರು ಈಗ ಸ್ವಿಮ್ಮಿಂಗ್ ಪೂಲ್ ಸಿಟಿ, ರಿವರ್ ಸಿಟಿ, ಐಲ್ಯಾಂಡ್ ಸಿಟಿ (Bengaluru Rain News) ಎಂದೆಲ್ಲಾ ಉಪನಾಮಗಳಿಂದ ಕರೆಸಿಕೊಳ್ಳುತ್ತಿದೆ.
ರಾಜಧಾನಿಯ ಎಲ್ಲಿ ನೋಡಿದರೂ ನೀರು ನೀರು ನೀರು…!!! ಇಂಥ ಒಂದು ದುಸ್ಥಿತಿ ನಿರ್ಮಾಣವಾಗಿದ್ದರ ಬಗ್ಗೆ ಬೆಂಗಳೂರಿಗರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಹುಟ್ಟೂರಿನಿಂದ ಇಲ್ಲಿ ಬಂದು ಬದುಕು ಕಟ್ಟಿಕೊಂಡಿರುವ ಅನೇಕರು ಅವೈಜ್ಞಾನಿಕ ನಗರ ನಿರ್ಮಾಣಕ್ಕೆ ಕಿಡಿಕಾರಿದ್ದಾರೆ.
ಈ ಬಗ್ಗೆ ಈ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ, ಫೋಟೊಗಳ ಸಹಿತ ದುಸ್ಥಿತಿಯನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತಿದ್ದಾರೆ. ಈ ಮೂಲಕ ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಿದ್ದ ಬೆಂಗಳೂರು ನಗರ ಮಳೆ ಬಂದಾಗ ಆನ್ ಸೇಫ್ ಎಂಬಂತೆ ಬಿಂಬಿತವಾಗುತ್ತಿದೆ.
ನಗರದ ಔಟರ್ ರಿಂಗ್ ರೋಡ್ ಅನ್ನು ಔಟರ್ ʻರಿವರ್ʼ ರೋಡ್ ಎಂದು ಕರೆದಿರುವ ಸ್ಥಳೀಯರು, ಸರ್ಕಾರದ ಮೌನಕ್ಕೆ ಆಕ್ರೋಶಿಸಿದ್ದಾರೆ. ರಸ್ತೆಗಳಲ್ಲಿ ಮೊಣಕಾಲು ಮಟ್ಟಕ್ಕೆ ನೀರು ನಿಂತಿದ್ದು ಜನರು ಹೊರಗೆ ಹೋಗಲಾರದೇ ಒಳಗೆ ಬರಲು ಆಗದ ಸ್ಥಿತಿ ನಿರ್ಮಾಣವಾಗಿದೆ.
ವಿಕ್ರಮ್ ಸಂಪತ್ ಎಂಬುವವರು ಟ್ವೀಟ್ ಮೂಲಕ ಮಳೆ ವಾರ್ ನಡೆಸಿದ್ದಾರೆ. ಕಳೆದ ರಾತ್ರಿ ನಗರದಲ್ಲಿ ಅಪ್ಪಳಿಸಿದ ಭಾರಿ ಮಳೆಯಿಂದ ಬೆಂಗಳೂರಿನ ಹಲವಾರು ಭಾಗಗಳು ಜಲಾವೃತಗೊಂಡಿವೆ. ಇಲ್ಲಿಯವರೆಗೆ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ಸುಂದರ ನಗರಕ್ಕೆ ದುಃಖವು ಕೊನೆಗೊಳ್ಳುವುದಿಲ್ಲ. ಆಡಳಿತದ ಸಂಪೂರ್ಣ ಕೊರತೆ ಮತ್ತು ವ್ಯಾಪಕ ಭ್ರಷ್ಟಾಚಾರದಿಂದ ಹೃದಯ ವಿದ್ರಾವಕವಾಗಿದೆ. ಸುರಕ್ಷಿತವಾಗಿರಿ ಬೆಂಗಳೂರಿಗರೇ ಎಂದು ಟ್ವೀಟ್ ಮೂಲಕ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.