Site icon Vistara News

Bengaluru Rain: ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಿ ಯುವತಿ ಮೃತ್ಯು, ಆರು ಮಂದಿ ರಕ್ಷಣೆ; ಹೇಗಿತ್ತು ಕಾರ್ಯಾಚರಣೆ?

Rain Effect

Rain Effect

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯು (Bengaluru Rain) ಯುವತಿಯೊಬ್ಬಳ ಪ್ರಾಣಪಕ್ಷಿ ಹಾರಿ ಹೋಗುವಂತೆ ಮಾಡಿದೆ. ವರುಣನ ಅಬ್ಬರಕ್ಕೆ ಕೆ.ಆರ್ ಸರ್ಕಲ್​ನಲ್ಲಿ (Kr circle Underpass) ಕಾರೊಂದು ಮುಳುಗಡೆಯಾಗಿದೆ. ಈ ವೇಳೆ ಕಾರಿನಲ್ಲಿ ಸಿಲುಕಿದ್ದ ಇಡೀ ಕುಟುಂಬವನ್ನು ರಕ್ಷಣೆ ಮಾಡಲಾಯಿತಾದರೂ, ಯುವತಿಯೊಬ್ಬಳು ಮೃತಪಟ್ಟಿದ್ದಾಳೆ. ಭಾನುರೇಖಾ (22) ಮೃತ ದುರ್ದೈವಿ.

ಕಾರಿನಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯಾಚರಣೆ

ಪ್ರವಾಸಕ್ಕೆಂದು ಆಂಧ್ರ ಪ್ರದೇಶದ ಆರು ಮಂದಿಯನ್ನೊಳಗೊಂಡ ಕುಟುಂಬದವರು ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ನಗರದ ಹಲವು ಕಡೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ದಿಡೀರನೆ ಧಾರಾಕಾರ ಮಳೆ ಆರಂಭವಾಗಿದೆ. ಇತ್ತ ಕೆಆರ್​ ಸರ್ಕಲ್​​ ಬಳಿಯ ಅಂಡರ್ ಪಾಸ್​ನಲ್ಲಿ 7 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿತ್ತು. ಇದರ ಅರಿವು ಇರದೆ ಕಬ್ಬನ್​ ಪಾರ್ಕ್​​ ಕಡೆಯಿಂದ ಬರುತ್ತಿದ್ದ ಕಾರು ಅಲ್ಲಿಗೆ ಹೋಗಿದ್ದರಿಂದ ಮಳೆ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂದು ಹೇಳಲಾಗಿದೆ.

ನೀರಲ್ಲಿ ಮುಳುಗಿದ್ದ ಮಹಿಳೆಯರನ್ನು ರಕ್ಷಣೆ ಮಾಡುತ್ತಿರುವ ಸಿಬ್ಬಂದಿ

ಈ ವೇಳೆ ಏಕಾಏಕಿ ಮಳೆ ನೀರಿನಲ್ಲಿ ಕಾರು ಮುಳುಗಡೆಯಾಗಿದೆ. ನೀರನಲ್ಲಿ ಕಾರು ಮುಳುಗಿದ್ದರಿಂದ ಬಾಗಿಲು ಲಾಕ್‌ ಆಗಿದೆ. ಆಗ ಕಾರಿನಲ್ಲಿದ್ದವರು ಕೂಗಿಕೊಂಡಿದ್ದು, ರಸ್ತೆಯಲ್ಲಿದ್ದ ಸಾರ್ವಜನಿಕರು ಸಹಾಯಕ್ಕೆ ಮುಂದಾಗಿದ್ದಾರೆ.

ನೀರಲ್ಲಿ ಕಾರು ಮುಳುಗಡೆ

ತಕ್ಷಣ ತಡ ಮಾಡದ ಕೆಲವರು ನೀರಿನಲ್ಲಿ ಈಜಿಗೊಂಡೇ ಕಾರಿನ ಹತ್ತಿರ ಹೋಗಿ ಬಾಗಿಲು ತೆರೆಯಲು ನೋಡಿದ್ದಾರೆ. ಆದರೆ, ಆ ವೇಳೆ ನೀರಿನೊಳಗೆ ಇದ್ದರಿಂದ ಕಾರಿನ ಡೋರ್‌ ತೆಗೆಯಲು ಸಾಧ್ಯವಾಗಿಲ್ಲ. ಹೀಗಾಗಿ ಕಾರಿನ ಮುಂಭಾಗದ ಗ್ಲಾಸ್​ ಒಡೆದು ಕಾರಿನಲ್ಲಿ ಸಿಲುಕಿದ್ದವರನ್ನು ಹೊರಕ್ಕೆ ತರುವ ಕೆಲಸವನ್ನು ಮಾಡಿದ್ದರು. ಒಟ್ಟು ನಾಲ್ವರು ಮಹಿಳೆಯರು ಸೇರಿದಂತೆ ಇಬ್ಬರು ಯುವಕರನ್ನು ರಕ್ಷಣೆ ಮಾಡಲಾಗಿದೆ. ಆದರೆ, ತೀವ್ರ ಅಸ್ವಸ್ಥಗೊಂಡಿದ್ದ ಯುವತಿ ಭಾನುರೇಖಾ ಆಸ್ಪತ್ರೆಗೆ ಹೋಗುವುದರೊಳಗೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈಜುಗೊಂಡು ಬಂದು ಕಾರಿನಲ್ಲಿದ್ದವರ ರಕ್ಷಣೆ ಮಾಡಿದ ಪೊಲೀಸರು, ಸಾರ್ವಜನಿಕರು

ಇನ್ಫೋಸಿಸ್‌ ಉದ್ಯೋಗಿಯಾಗಿದ್ದ ಭಾನುರೇಖಾ

ಭಾನುರೇಖಾ (22) ಇನ್ಫೋಸಿಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಭಾನುವಾರ ಆಗಿದ್ದರಿಂದ ಆಂಧ್ರಪ್ರದೇಶದಿಂದ ಬಂದಿದ್ದ ತನ್ನ ಕುಟುಂಬದವರೊಂದಿಗೆ ಬೆಂಗಳೂರಿನ ಸ್ಥಳಗಳನ್ನು ನೋಡಲು ತೆರಳಿದ್ದರು. ಇಸ್ಕಾನ್‌ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಕಬ್ಬನ್‌ ಪಾರ್ಕ್‌ ನೋಡಲೆಂದು ಬಂದಾಗ ಈ ದುರ್ಘಟನೆ ನಡೆದಿದೆ.

ಕಾರನ್ನು ಹೊರಗೆ ಎಳೆಯುತ್ತಿರುವ ಚಿತ್ರ

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ಆರೋಪ

ಕಾರಿನಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಬೆಂಗಳೂರಿನ ಸೇಂಟ್‌ ಮಾರ್ಥಾಸ್ ಆಸ್ಪತ್ರೆಯಲ್ಲಿ ಭಾನುರೇಖಾಳನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರು. ಆಸ್ಪತ್ರೆ ಸಿಬ್ಬಂದಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾಯುವಂತೆ ಮಾಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಅಂಡರ್‌ಪಾಸ್‌ನಲ್ಲಿ ಮುಳುಗಿದ ಕಾರು

ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ, ಪರಿಶೀಲನೆ

ಈ ವೇಳೆ ಕೆ.ಆರ್.‌ ಸರ್ಕಲ್‌ ಬಳಿ ಇರುವ ಅಂಡರ್‌ ಪಾಸ್‌ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿಂದ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಭೇಟಿ ನೀಡಿ ನಡೆದ ಸಂಗತಿಯನ್ನು ವಿಚಾರಿಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾರಿನ ಚಾಲಕ ಮಳೆ ಎಂಬ ಕಾರಣಕ್ಕೆ ಅಂಡರ್‌ ಪಾಸ್‌ ಕೆಳಗೆ ನಿಲ್ಲಿಸಿದ್ದಾನೆ. ಸಾಮಾನ್ಯವಾಗಿ ಮಳೆ ಬಂದಾಗ ಯಾರೂ ಅಂಡರ್‌ಪಾಸ್‌ನಲ್ಲಿ ಹೋಗುವುದಿಲ್ಲ. ಆದರೂ ಈ ಚಾಲಕ ಅಲ್ಲಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಹೀಗೆ ಹೋಗಬಾರದಿತ್ತು. ಈ ವೇಳೆ ನೀರು ತುಂಬಿ ಸಮಸ್ಯೆಯಾಗಿದೆ ಎಂದು ವಿವರಣೆ ನೀಡಿದ್ದಾರೆ.

ಅಂಡರ್‌ಪಾಸ್‌ನಲ್ಲಿ ಸಿಲುಕಿದ್ದ ಕಾರನ್ನು ಹೊರಗೆ ತೆಗೆದ ಚಿತ್ರಣ

ಅಂಡರ್‌ಪಾಸ್‌ನಲ್ಲಿ ಕಾರನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿಕೊಂಡು ಹೋಗದ ಕಾರಣ ಕಾರಿನೊಳಗೆ ನೀರು ತುಂಬಿಕೊಂಡಿದೆ. ಒಳಗಿದ್ದವರಿಗೆ ಬಾಗಿಲು ತೆಗೆಯಲೂ ಆಗದೇ ಒಳಗೆ ಸಿಲುಕಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗಿದ್ದ ಭಾನುರೇಖಾ ಗಂಭೀರವಾಗಿದ್ದಾರೆ. ಉಳಿದವರನ್ನು ರಕ್ಷಣೆ ಮಾಡಿ, ಭಾನುರೇಖಾ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆತರಲಾಯಿತಾದರೂ ಪರೀಕ್ಷೆ ಮಾಡುವುದರೊಳಗೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆಂದು ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾರಲ್ಲಿ ಸಿಲುಕಿದವರ ರಕ್ಷಣೆ ಮಾಡುತ್ತಿರುವ ಚಿತ್ರಣ

ಇದನ್ನೂ ಓದಿ: Weather Report: ಬೆಂಗಳೂರಲ್ಲಿ ಬಿರುಗಾಳಿ ಮಳೆ; ಅಂಡರ್‌ಪಾಸ್‌ನಡಿ ಸಿಲುಕಿ ಮಹಿಳೆ ಸಾವು, ಐವರು ಪಾರು

5 ಲಕ್ಷ ರೂಪಾಯಿ ಪರಿಹಾರ

ಮೃತ ಭಾನುರೇಖಾ ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಆಕೆಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು. ಅವರ ಕುಟುಂಬದವರಿಗೆ ಚಿಕಿತ್ಸೆಯ ಅಗತ್ಯವಿದ್ದರೆ ಸರ್ಕಾರದಿಂದ ಭರಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version