ಬೆಂಗಳೂರು: ಕೆಲಕಾಲ ಸುರಿದ ಭಾರಿ ಮಳೆಗೆ ರಾಜಧಾನಿಯ ಹಲವು ಪ್ರದೇಶಗಳು ನೀರಿನಿಂದ ಮುಳುಗಡೆಯಾಗಿವೆ. ಮಳೆ ನಿಂತರೂ ಮಳೆಯಿಂದ (Bengaluru Rain) ಆದ ಅವಾಂತರದಿಂದ ಹೊರ ಬರಲು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಲಾವೃತಗೊಂಡಿರುವ ಲೇಔಟ್‌ಗಳಲ್ಲಿ ಬುಧವಾರವೂ ಮೊಣಕಾಲಿನಷ್ಟು ನೀರು ನಿಂತಿದ್ದು, ನಿವಾಸಿಗಳು ಜಲದಿಗ್ಬಂಧನದಲ್ಲಿಯೇ ನರಕಯಾತನೆ ಅನುಭವಿಸುವಂತಾಯಿತು. ಲೇಔಟ್ ಒಳಗೆ ನಾಲ್ಕೈದು ಅಡಿಗಳಷ್ಟು ನೀರು ನಿಂತಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಎಸ್.ಡಿ.ಆರ್.ಎಫ್ ತಂಡ ಮೋಟಾರ್‌ಗಳ ಸಹಾಯದಿಂದ ನೀರನ್ನು ಹೊರಹಾಕುವ ಪ್ರಯತ್ನ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಪ್ರಮುಖವಾಗಿ ಮಹದೇಪುರ ವಿಧಾನಸಭಾ ಕ್ಷೇತ್ರದ ಸರ್ಜಾಪುರ ರಸ್ತೆಯಲ್ಲಿನ ರೈನ್‌ಬೋ ಲೇಔಟ್, ಕಂಟ್ರಿ ಸೈಡ್, ಗ್ರೀನ್ ವುಡ್, ಸನ್ನಿಬ್ರೋಕ್ಸ್ ಸೇರಿದಂತೆ ಹಲವು ಲೇಔಟ್‌ಗಳು ಜಲಾವೃತಗೊಂಡಿವೆ.
ಕೆಲವರು ಮನೆಗೆ ಬೀಗ ಹಾಕಿ ಸ್ನೇಹಿತರ, ಸಂಬಂಧಿಕರ ಮನೆಗಳಿಗೆ ಹಾಗೂ ಹೋಟೆಲ್ ರೂಮ್‌ಗಳಲ್ಲಿ ಉಳಿದುಕೊಂಡಿದ್ದರು. ಮಳೆ ಕಡಿಮೆ ಆದ ಕಾರಣ ಒಬ್ಬೊಬ್ಬರಾಗಿಯೇ ಕೈಯಲ್ಲಿ ಲಗೇಜ್ ಹಿಡಿದು ಮರಳಿ ಲೇಔಟ್‌ನಲ್ಲಿರುವ ತಮ್ಮ ಮನೆಗಳಿಗೆ ಆಗಮಿಸುತ್ತಿದ್ದಾರೆ. ಆದರೆ ನೀರು ಖಾಲಿಯಾಗದ ಹಿನ್ನೆಲೆ ಗೇಟ್ ಮುಂದೆಯೇ ಕಾಯುತ್ತಿರುವ ಪರಿಸ್ಥಿತಿ ಎದುರಾಗಿದೆ ಎಂದು ಕಂಟ್ರಿ ಸೈಡ್ ಲೇಔಟ್ ನಿವಾಸಿ ಮಾರ್ಟಿನ್ ಅಳಲು ತೋಡಿಕೊಂಡಿದ್ದಾರೆ.
ತೆಪ್ಪದ ಮೂಲಕ ಹೊರ ಬಂದ ನಿವಾಸಿಗಳು
ಜಲಾವೃತಗೊಂಡ ಲೇಔಟ್‌ಗಳಲ್ಲಿನ ನೀರು ಹೊರಹಾಕಲು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ನಡೆಸಿದರು. ಜೆಸಿಬಿ ಮೂಲಕ ಡ್ರೈನೇಜ್ ಓಪನ್ ಮಾಡಿ ನೀರು ಹೊರಹೋಗುವಂತೆ ಮಾಡಿದರು. ಡ್ರೈನೇಜ್‌ಗಳು ಇಲ್ಲದೆ ಇರುವ ಕಡೆಗಳಲ್ಲಿ ಮೋಟಾರ್ ಸಹಾಯದಿಂದ ನೀರನ್ನು ಹೊರಹಾಕಲಾಯಿತು.
ಇತ್ತ ಲೇಔಟ್‌ಗಳಲ್ಲಿಯೇ ಉಳಿದುಕೊಂಡಿದ್ದ ಕೆಲ ನಿವಾಸಿಗಳನ್ನು ತೆಪ್ಪದ ಮೂಲಕ ಕರೆತರುವ ಕೆಲಸವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಮಾಡುತ್ತಿದರು. ಕಂಟ್ರಿ ಸೈಡ್ ಲೇಔಟ್ ನಲ್ಲಿ ಸಾಕಷ್ಟು ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿತ್ತು.
ಸಹಜ ಸ್ಥಿತಿಯತ್ತ ಮರಳಲು ಇನ್ನೂ ಒಂದು ವಾರಗಳ ಕಾಲ ಕಾಯಲೇಬೇಕು. ಮನೆಯಲ್ಲಿನ ಕಾರು, ದ್ವಿಚಕ್ರ ವಾಹನ ಹಾಗೂ ವಸ್ತುಗಳೆಲ್ಲವೂ ನೀರು ಪಾಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದರು.
ಕಮಿಷನರ್ ಭೇಟಿ, ನಿವಾಸಿಗಳಿಂದ ತರಾಟೆ
ಜಲಾವೃತಗೊಂಡ ಲೇಔಟ್‌ಗಳ ಪರಿಶೀಲನೆಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೆಂಟ್ರಲ್ ಟೀಮ್ ಜತೆಗೆ ಭೇಟಿ ನೀಡಿದರು. ಅಲ್ಲಿದ್ದಂತಹ ಕೆಲ ನಿವಾಸಿಗಳಿಂದ ಕೇಂದ್ರ ತಂಡ ಮಾಹಿತಿ ಸಂಗ್ರಹಿಸಿಕೊಂಡು ಲೇಔಟ್ ಮತ್ತು ಅಪಾರ್ಟ್ಮೆಂಟ್‌ಗಳ ವಸ್ತುಸ್ಥಿತಿ ಪರಿಶೀಲನೆ ಮಾಡಿದರು. ಈ ವೇಳೆ, ಇಲ್ಲಿನ ಜನರು ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿದ್ದರೂ ಇದುವರೆಗೂ ಯಾರೊಬ್ಬರೂ ಸಹಕಾರ ನೀಡಿಲ್ಲ ಎಂದು ನಿವಾಸಿಯೊಬ್ಬರು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ | Rain News | ಉಕ್ಕಿ ಹರಿಯುತ್ತಿರುವ ಮಲಪ್ರಭಾ ಪ್ರಭಾವಕ್ಕೆ ಮುಳುಗಿದ ಸೇತುವೆ, ಭಾರಿ ಬೆಳೆ ಹಾನಿ