ಬೆಂಗಳೂರು: ನವರಸ ನಾಯಕ ಜಗ್ಗೇಶ್ (Jaggesh) ಅವರಿಗೂ ಬೆಂಗಳೂರಿನ ಮಳೆ ಅವಾಂತರ (Bengaluru Rains) ತಟ್ಟಿದೆ. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಜಗ್ಗೇಶ್ ಅವರ ಕಾರು ಮುಳುಗಡೆಯಾಗಿದೆ.
ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಸ್ನೇಹಿತನ ಮನೆಯ ಸೆಲ್ಲರ್‌ನಲ್ಲಿ ತಮ್ಮ ಬಿಎಂಡಬ್ಲ್ಯು5 ಕಾರನ್ನು ನಿಲ್ಲಿಸಿದ್ದು, ಅಲ್ಲಿಗೆ ಮಳೆ ನೀರು ನುಗ್ಗಿದೆ. ಕಾರು ನೀರಿನಲ್ಲಿ ಮುಳುಗಡೆಯಾಗಿದೆ. ತಮ್ಮ ಮನೆಯ ರಿಪೇರಿ ಕಾರ್ಯ ಹಿನ್ನೆಲೆಯಲ್ಲಿ ಸ್ನೇಹಿತನ ಮನೆಯಲ್ಲಿ ಜಗ್ಗೇಶ್ ಕಾರು ನಿಲ್ಲಿಸಿದ್ದರು. ಸ್ನೇಹಿತ ಮುರಳಿ ಎಂಬವರ ಮನೆಯ ಸೆಲ್ಲರ್‌ನಲ್ಲಿದ್ದ ಜಗ್ಗೇಶ್ ಕಾರಿನ ಒಳಗೆ ನೀರು ತುಂಬಿದ್ದು, ಪ್ರಮುಖ ಭಾಗಗಳು ಹಾಳಾಗಿರುವ ಸಾಧ್ಯತೆ ಇದೆ. 5 ಹೆಚ್‌ಪಿ ಮೋಟಾರ್ ಬಳಸಿ ನೀರು ಹೊರ ಹಾಕುವ ಕೆಲಸ ನಡೆಯುತ್ತಿದೆ.
ಭಾನುವಾರದ ಮಳೆಗೆ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಮಳೆ ನೀರು ನುಗ್ಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿನ ಪೀಠೋಪಕರಣಗಳಿಗೆ, ಫ್ರಿಡ್ಜ್, ವಾಷಿಂಗ್ ಮಷಿನ್ ಸೇರಿ ಹಲವು ಉಪಕರಣಗಳಿಗೆ ಹಾನಿಯಾಗಿದೆ. ಮನೆಯಲ್ಲಿದ್ದ ಬಟ್ಟೆ, ಧಾನ್ಯಗಳಿಗೂ ಹಾನಿಯಾಗಿದೆ.
ನಿನ್ನೆ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ಮಳೆ ಕಾಟದಿಂದ ಬೇಸತ್ತು ಮನೆ ಮಾಲೀಕರು ಕಣ್ಣೀರು ಹಾಕಿದ್ದಾರೆ. ನಿನ್ನೆ ಬಿಬಿಎಂಪಿಗೆ ಕರೆ ಮಾಡಿದರೆ ಯಾರೂ ಸಹಾಯಕ್ಕೆ ಬಂದಿಲ್ಲ ಎಂದು ಸಂತ್ರಸ್ತ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಣೇಶ ಬ್ಲಾಕ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ರಸ್ತೆಗೆ ಬಿದ್ದಿದ್ದ ಮಣ್ಣನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡುತ್ತಿದ್ದಾರೆ.
ಇದನ್ನೂ ಓದಿ: Karnataka Rain: ಸಿಡಿಲು ಬಡಿದು ಚಿತ್ರದುರ್ಗದಲ್ಲಿ ಮಹಿಳೆ ಸಾವು, 5ಕ್ಕೆ ಏರಿದ ಮಳೆ ಸಾವಿನ ಸಂಖ್ಯೆ