Site icon Vistara News

ಹೊಸದಾಗಿ ಡಾಂಬರು ಹಾಕಿದ ರಸ್ತೆ ಕುಸಿತ; ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ

ರಸ್ತೆ ಕುಸಿತ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಹಿನ್ನೆಲೆಯಲ್ಲಿ ನಗರದ ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್(ಬೇಸ್) ಕ್ಯಾಂಪಸ್ ಬಳಿ ಹೊಸದಾಗಿ ಡಾಂಬರೀಕರಣ ಮಾಡಿದ ರಸ್ತೆ ಕುಸಿದಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಪ್ರಾಥಮಿಕ ತನಿಖೆಯಿಂದ ಈ ಪ್ರದೇಶದಲ್ಲಿ ನೀರಿನ ಪೈಪ್ ಸೋರಿಕೆಯಿಂದ ರಸ್ತೆ ಕುಸಿದಿರುವುದು ಕಂಡು ಬಂದಿದೆ. 6 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ್ದ ರಸ್ತೆ ಕುಸಿದಿರುವ ಬಗ್ಗೆ ಸಮಗ್ರ ವರದಿ ನೀಡುವಂತೆ ಪ್ರಧಾನಿ ಕಚೇರಿ ರಾಜ್ಯಸರ್ಕಾರಕ್ಕೆ ಗುರುವಾರ ಸಂಜೆ ಸೂಚಿಸಿತ್ತು. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರಸ್ತೆ ಕುಸಿದಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

33 ಸಾವಿರ ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳ ಉದ್ಘಾಟನೆಗಾಗಿ ಜೂನ್‌ 20ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಅವರು ಸಾಗುವ ರಸ್ತೆಗಳ ಅಭಿವೃದ್ಧಿಗಾಗಿ 24 ಕೋಟಿ ರೂ.ಗಳನ್ನು ಬಿಬಿಎಂಪಿ ವೆಚ್ಚ ಮಾಡಿತ್ತು. ಜ್ಞಾನ ಭಾರತಿಯ ಬೇಸ್‌ ಕ್ಯಾಂಪಸ್‌ ಬಳಿ 6 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗಿತ್ತು. ಡಾಂಬರೀಕರಣವಾಗಿ ಒಂದು ವಾರವೂ ಆಗಿಲ್ಲ ಆಗಲೇ ರಸ್ತೆ ಕುಸಿತವಾಗಿದೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದರು. ಈ ವಿಷಯ ಪ್ರಧಾನಿ ಕಾರ್ಯಾಲಯಕ್ಕೆ ತಲುಪಿದ್ದರಿಂದ ರಾಜ್ಯ ಸರ್ಕಾರದಿಂದ ಸಮಗ್ರ ವರದಿ ಕೇಳಲಾಗಿದೆ.

ಈ ಪ್ರದೇಶದಲ್ಲಿ ನೀರಿನ ಪೈಪ್‌ಲೈನ್‌ ಸೋರಿಕೆಯಿಂದ ರಸ್ತೆ ಕುಸಿದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಜಲಮಂಡಳಿ ಕೆಲದಿನಗಳ ಹಿಂದೆ ರಸ್ತೆಯಲ್ಲಿ ಪೈಪ್‌ಲೈನ್‌ ಹಾಕಿದ್ದರು. ಅದರ ಮೇಲೆ ಬಿಬಿಎಂಪಿ ಅಧಿಕಾರಿಗಳು ಡಾಂಬರೀಕರಣ ಮಾಡಿಸಿದ್ದಾರೆ. ಭಾರ ತಾಳಲಾರದೆ ರಸ್ತೆ ಕುಸಿದಿದೆ. ಈಗ ಎರಡು ಇಲಾಖೆಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ವರದಿ ಬಂದಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಪ್ರತಿವಾರ 3,000 ರಸ್ತೆ ಗುಂಡಿ ಪ್ರತ್ಯಕ್ಷ: ಅಧಿಕಾರಿಗಳ ತಪ್ಪು ಮಾಹಿತಿ ಎಂದ ಬಿಬಿಎಂಪಿ

Exit mobile version