Site icon Vistara News

Bengaluru Roads: ರಸ್ತೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸಚಿವ ಮನವಿ; ದರಿದ್ರ ನಾಲಾಯಕ್‌ ಸರ್ಕಾರ ಎಂದ ಅಶೋಕ್!

Bengaluru Roads

ಬೆಂಗಳೂರು: ಸಚಿವರು ಸೂಚಿಸಿದರೆ ಯಾವುದೇ ಕೆಲಸ, ನಿಗದಿತ ಅವಧಿಯೊಳಗೆ ತ್ವರಿತವಾಗಿ ಮುಗಿಯುತ್ತದೆ. ಆದರೆ, ರಾಜಧಾನಿ ರಸ್ತೆಗಳ (Bengaluru Roads) ದುಸ್ಥಿತಿ ನೋಡಿ ದುರಸ್ತಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರೇ ಮನವಿ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಇದು ಸರ್ಕಾರದ ಅಸಹಾಯಕತೆಯೋ? ಅಥವಾ ಸಚಿವರ ಅಸಹಾಯಕತೆಯೋ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಹೌದು, ನಗರದ ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡ್‌ನ ಸರ್ವಿಸ್ ರಸ್ತೆಯನ್ನು ದುರಸ್ತಿ ಮಾಡುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೊವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. ಬಿಬಿಎಂಪಿ ಆಯುಕ್ತರು ಅಥವಾ ಬಿಎಂಆರ್‌ಸಿಎಲ್‌ ಎಂಡಿ ಯಾರಾದರೂ ಆಗಲಿ, ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಿ, ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ ಎಂದು ಸಚಿವರು ಮನವಿ ಮಾಡಿದ್ದಾರೆ.

ರಸ್ತೆ ಗುಂಡಿ ಮುಚ್ಚುವಂತೆ ಸಾಮಾಜಿಕ ಜಾಲತಾಣದ ಮೂಲಕ ಅಧಿಕಾರಿಗಳಿಗೆ ಸಚಿವರು ಮನವಿ ಮಾಡಿರುವುದರಿಂದ ಇದು ಸರ್ಕಾರದ ಅಸಹಾಯಕತೆಯೋ? ಅಥವಾ ಸಚಿವರ ಅಸಹಾಯಕತೆಯೋ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಅತ್ತ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಾಷಣ ಮಾಡುತ್ತಾರೆ. ಇತ್ತ ನೇರವಾಗಿ ಡಿ.ಕೆ.ಶಿವಕುಮಾರ್‌ಗೆ ಹೇಳಲಾಗದೆ, ಬಿಡಲಾಗದೇ ಸಚಿವರು ಒದ್ದಾಡುತ್ತಿದ್ದಾರೆ. ಮತ್ತೊಂದೆಡೆ ಸಾರ್ವಜನಿಕರ ಸಮಸ್ಯೆ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಕಣ್ಣೆತ್ತಿ ನೋಡುತ್ತಿಲ್ಲ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.

ಕಂದಾಯ ಸಚಿವ ಕೃಷ್ಣ ಭೈರೇಗೌಡ ರಸ್ತೆ ಸರಿಪಡಿಸಿಲು ಅಧಿಕಾರಿಗಳಿಗೆ ಮನವಿ ಮಾಡಿರುವುದರ ಬಗ್ಗೆ ವಿಪಕ್ಷ ನಾಯಕ ಆರ್‌.ಅಶೋಕ್‌ ಪ್ರತಿಕ್ರಿಯಿಸಿದ್ದು, ಸಚಿವರೇ ಅಧಿಕಾರಿಗಳನ್ನು ಬೇಡಿಕೊಳ್ಳುತ್ತಿರುವುದನ್ನು ನೋಡಿದರೆ, ಇದು ಎಂತಹ ದರಿದ್ರ ನಾಲಾಯಕ್ ಸರ್ಕಾರ ಎಂಬುದು ಸ್ಪಷ್ಟವಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಸರ್ಕಾರದ ವಿರುದ್ಧ ಆರ್‌.ಅಶೋಕ್‌ ವಾಗ್ದಾಳಿ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕಂದಾಯ ಸಚಿವರು ಮತ್ತು ಬ್ಯಾಟರಾಯನಪುರ ಶಾಸಕರಾದ ಕೃಷ್ಣ ಭೈರೇಗೌಡರು ಅತ್ಯಂತ ಅಸಹಾಯಕರಾಗಿ ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ರಸ್ತೆ ಗುಂಡಿ ಮುಚ್ಚುವಂತೆ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೊಳ್ಳುವುತ್ತಿರುವುದನ್ನು ನೋಡಿದರೆ, ಈ ಕಾಂಗ್ರೆಸ್‌ ಸರ್ಕಾರ, ಎಂತಹ ದರಿದ್ರ ನಾಲಾಯಕ್ ಸರ್ಕಾರ ಎಂಬುದು ಸ್ಪಷ್ಟವಾಗುತ್ತದೆ.

ಸಚಿವ ಕೃಷ್ಣಬೈರೇಗೌಡ ಅವರೇ, ಆದೇಶ ಮಾಡಿ ಕೆಲಸ ಮಾಡಿಸಬೇಕಾದ ಸ್ಥಾನದಲ್ಲಿರುವ ತಾವು, ಬಿಬಿಎಂಪಿ ಅಧಿಕಾರಿಗಳಿಗೆ ಇಷ್ಟೊಂದು ಅಸಹಾಯಕರಾಗಿ ಅಂಗಲಾಚುತ್ತಿದ್ದೀರಲ್ಲ, ಬೆಂಗಳೂರು ಅಭಿವೃದ್ಧಿ ಸಚಿವರು ತಮ್ಮ ಕೆಲಸ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಡುತ್ತಿದ್ದೀರೋ? ಅಥವಾ ಇದು ಡಿಸಿಎಂ ಅವರ ವಿರುದ್ಧ ಬಹಿರಂಗ ಬಂಡಾಯದ ಮುನ್ಸೂಚನೆಯೋ ಎಂದು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ತಮ್ಮ ಸಂಪುಟದಲ್ಲಿ ಸಚಿವರ ಮಧ್ಯೆ ಪರಸ್ಪರ ಒಂದು ಸ್ವಲ್ಪವೂ ತಾಳಮೇಳವಿಲ್ಲವೇ? ಒಬ್ಬ ಸಚಿವರು ಮತ್ತೊಬ್ಬ ಸಚಿವರ ಕರೆ ಸ್ವೀಕರಿಸುವುದಿಲ್ಲವೇ? ನಿಮ್ಮ ಸರ್ಕಾರದಲ್ಲಿ ಏನಾಗುತ್ತಿದೆ ಎಂದು ಅಶೋಕ್‌ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | Bomb Threat: ಅಸ್ಸಾಂನ 19 ಕಡೆಗಳಲ್ಲಿ ಬಾಂಬ್‌ ಇರಿಸಿ, ಬಳಿಕ ನಿಷ್ಕ್ರೀಯಗೊಳಿಸುವಂತೆ ಮನವಿ ಮಾಡಿದ ಉಲ್ಫಾ ಉಗ್ರರು

ಮುಂದಿನ ವರ್ಷ ಅದ್ಧೂರಿಯಾಗಿ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ; ಸಿದ್ದರಾಮಯ್ಯ

ಬೆಂಗಳೂರು: ಮುಂದಿನ ವರ್ಷದಿಂದ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಜಯಂತ್ಯುತ್ಸವ (Sangolli Rayanna Jayanthi) ಹಾಗೂ ಪುಣ್ಯತಿಥಿಯಂದು ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಪ್ರಯುಕ್ತ ಇಂದು ನಗರದ ಮೆಜೆಸ್ಟಿಕ್ ಸಮೀಪದ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಸಂಗೊಳ್ಳಿ ರಾಯಣ್ಣನವರು ಸ್ವಾತಂತ್ರ್ಯೋತ್ಸವ ದಿನವಾದ ಆಗಸ್ಟ್ 15 ರಂದು ಜನಿಸಿದ್ದು, ಅವರು ಗಣರಾಜ್ಯೋತ್ಸವ ದಿನವಾದ ಜನವರಿ 26 ರಂದು ಹುತಾತ್ಮರಾದದ್ದು ವಿಶಿಷ್ಟ. ಮಹಾನ್ ರಾಷ್ಟ್ರಪ್ರೇಮಿ ಸಂಗೊಳ್ಳಿ ರಾಯಣ್ಣನವರ ಬದುಕು ನಮಗೆಲ್ಲರಿಗೂ ಸ್ಫೂರ್ತಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದನ್ನೂ ಓದಿ: SBI Lending rate: SBI ಲೆಂಡಿಂಗ್‌ ದರದಲ್ಲಿ ಮತ್ತೆ ಏರಿಕೆ; ದುಬಾರಿಯಾಗಲಿದೆ EMI

ಕಾರ್ಯಕ್ರಮದಲ್ಲಿ ನಿಡುಮಾಮಿಡಿ ಶ್ರೀಗಳು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ. ರೇವಣ್ಣ, ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Exit mobile version