Site icon Vistara News

Hindustan Aeronautics Ltd: ನಕಲಿ ದಾಖಲೆ ಮೂಲಕ ಎಚ್‌ಎಎಲ್‌ ಭೂಮಿ ಗುತ್ತಿಗೆ, 7 ಮಂದಿ ಬಂಧನ

Rs 6800 crore Agreement with HAL for 70 pilot training aircraft

ಬೆಂಗಳೂರು: ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (Hindustan Aeronautics Ltd- HAL) ಒಡೆತನದಲ್ಲಿರುವ ೮೩೩ ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ನಕಲು ಮಾಡಿದ ಆರೋಪದ ಮೇಲೆ ೭ ಮಂದಿಯನ್ನು ಬಂಧಿಸಲಾಗಿದೆ. ಸೃಷ್ಟಿಸಲಾಗಿದ್ದ ನಕಲಿ ದಾಖಲೆಗಳ ನೆರವಿನಿಂದ ಭೂಮಿಯ ಕೆಲವು ಭಾಗವನ್ನು ಗುತ್ತಿಗೆ ನೀಡಿ, ಇದಕ್ಕಾಗಿ ಒಂದು ಕೋಟಿ ರೂ. ಹಣವನ್ನೂ ಆರೋಪಿಗಳು ಪಡೆದಿದ್ದರು ಎಂದು ಎಚ್‌ಎಎಲ್‌ ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಬೆಂಗಳೂರಿನ ವಿಕ್ಟೋರಿಯಾ ಬಡಾವಣೆಯಲ್ಲಿ ರಿಯಲ್‌ ಎಸ್ಟೇಟ್‌ ಕಚೇರಿ ಹೊಂದಿದ್ದ ಸುರೇಶ್‌ ಜೈನ್‌ ಎಂದು ಗುರುತಿಸಲಾಗಿದೆ. ಆತನ ಸಹವರ್ತಿಗಳಾಗಿದ್ದ ಸಯ್ಯದ್‌ ಮುನಾವರ್‌ ಅಲಿಯಾಸ್‌ ಮುನಾವರ್‌ ಸಬ್ರಿ, ಸಯ್ಯದ್‌ ಅಫ್ರೋಜ್‌, ರಾಜ್‌ ಕುಮಾರ್‌, ಶ್ರೀನಿವಾಸ ಮೂರ್ತಿ, ವೈಜಯಂತ್ ಮತ್ತು ಪ್ರತಾಪ್‌ ಸಹ ಬಧಿತರಾಗಿದ್ದಾರೆ. ಈ ಎಲ್ಲರೂ ರಿಯಲ್‌ ಎಸ್ಟೇಟ್‌ ಕೆಲಸದಲ್ಲೇ ತೊಡಗಿದ್ದವರು.

ಕಳೆದ ಫೆಬ್ರವರಿ ೧ರಂದು, ಎಚ್‌ಎಎಲ್‌ನ ಹೆಚ್ಚುವರಿ ಜನರಲ್‌ ಮ್ಯಾನೇಜರ್‌ ಸುರೇಶ್‌ ಅಬ್ಬೋಜು ಈ ಕುರಿತು ಪ್ರಕರಣವೊಂದನ್ನು ದಾಖಲಿಸಿ, ಎಚ್‌ಎಎಲ್‌ ಒಡೆತನದ ಭೂಮಿಯನ್ನು ಕೆಲವರು ಗುತ್ತಿಗೆ ನೀಡಿ ಹಣವನ್ನು ಪಡೆದಿದ್ದಾರೆ ಎಂದು ದೂರಿದ್ದರು. ಡಿಸಿಪಿ (ವೈಟ್‌ಫೀಲ್ಡ್‌) ಎಸ್‌. ಗಿರೀಶ್‌ ಅವರು ಈ ಕುರಿತ ತನಿಖೆಗಾಗಿ ಐವರು ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿದ್ದರು.

ಸುರೇಶ್‌ ಜೈನ್‌ ಮತ್ತು ಬಿನಿಶ್‌ ಥಾಮಸ್‌ನನ್ನು ಈ ಪ್ರಕರಣದ ಮುಖ್ಯ ಆರೋಪಿಗಳಾಗಿ ಪೊಲೀಸರು ಗುರುತಿಸಿದ್ದಾರೆ. ಜೈನ್‌ನನ್ನು ಈಗಾಗಲೇ ಬಂಧಿಸಲಾಗಿದ್ದು, ಥಾಮಸ್‌ಗಾಗಿ ಶೋಧ ನಡೆದಿದೆ. ವಿಕ್ಟೋರಿಯಾ ಬಡಾವಣೆಯಲ್ಲಿರುವ ಜೈನ್‌ ಕಚೇರಿಯ ಮೇಲೂ ದಾಳಿ ನಡೆಸಿರುವ ಪೊಲೀಸರು ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Aero India 2023 : ತುಮಕೂರಿನ ಎಚ್‌ಎಎಲ್‌ ಘಟಕದಲ್ಲಿ 40 ಹೆಲಿಕಾಪ್ಟರ್‌ ಉತ್ಪಾದನೆಗೆ ಸಿದ್ಧತೆ

“ತಮಗೆ ಎಚ್‌ಎಎಲ್‌ ತನ್ನ ಭೂಮಿಯನ್ನ ಗುತ್ತಿಗೆ ನೀಡಿದೆ ಎಂಬಂತೆ ನಕಲಿ ದಾಖಲೆಗಳನ್ನು ಆರೋಪಿಗಳು ಸೃಷ್ಟಿಸಿದ್ದರು. ಈ ದಾಖಲೆಗಳನ್ನು ತೋರಿಸಿ ಅಮಾಯಕರನ್ನು ವಂಚಿಸುತ್ತಿದ್ದ ಬಂಧಿತರು, ಅವರ ವಹಿವಾಟಿಗಾಗಿ ಎಚ್‌ಎಎಲ್‌ ಭೂಮಿಯನ್ನು ಗುತ್ತಿಗೆ ನೀಡುವುದಾಗಿ ನಂಬಿಸಿ ಹಣ ಪಡೆದಿದ್ದರು. ಕೆಲವರು ಒಂದು ಕೋಟಿ ರೂ.ಗಳವರೆಗೂ ಈ ಜಾಲಕ್ಕೆ ಹಣ ನೀಡಿ ಮೋಸ ಹೋಗಿರುವ ಮಾಹಿತಿಯಿದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದೇವೆ” ಎಂದು ಡಿಸಿಪಿ ಗಿರೀಶ್‌ ತಿಳಿಸಿದ್ದಾರೆ.

Exit mobile version