Site icon Vistara News

Prayoga : ಹೈಸ್ಕೂಲ್‌ ವಿದ್ಯಾರ್ಥಿಗಳನ್ನು ವಿಜ್ಞಾನಿಗಳಾಗಿಸಲು ವಿಶೇಷ ಪ್ರಯೋಗ, ಏನಿದು?

prayoga

ಬೆಂಗಳೂರು: ಇತ್ತೀಚೆಗೆ ಭಾರತದ ಚಂದ್ರಯಾನ 2 ಜಗತ್ತಿನ ಗಮನ ಸೆಳೆದಾಗ ಮತ್ತೊಂದು ಸಂಗತಿಯೂ ಬೆಳಕಿಗೆ ಬಂದಿತ್ತು. ಇಸ್ರೊದ ಹಲವಾರು ವಿಜ್ಞಾನಿಗಳು ಕನ್ನಡ ಮಾಧ್ಯಮದಲ್ಲಿ ಓದಿದವರಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ದಿನ ಮೈಲಿಗಟ್ಟಲೆ ನಡೆದು ಶಾಲೆಯ ವಿದ್ಯಾಭ್ಯಾಸವನ್ನು ಕೈಗೊಂಡಿದ್ದರು. ಕಷ್ಟಪಟ್ಟು ವಿಜ್ಞಾನಿಗಳಾಗಿ ಭವಿಷ್ಯ ರೂಪಿಸಿಕೊಂಡಿದ್ದರು. ಆದರೆ ಈಗಲೂ ಗ್ರಾಮೀಣ ಪ್ರದೇಶದಲ್ಲಿ, ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ವಿಜ್ಞಾನಿಗಳನ್ನಾಗಿಸಲು ಉಚಿತವಾಗಿ ತರಬೇತಿ ನೀಡಿದರೆ ಎಷ್ಟು ಒಳ್ಳೆಯದು ಎನ್ನುತ್ತೀರಾ. ರಾಜ್ಯದಲ್ಲಿ ಅಂಥ ಅತ್ಯಂತ ಅಪರೂಪದ ಪ್ರಯೋಗ (Prayoga) ನಡೆಯುತ್ತಿದೆ!

ಪೇಟೆಂಟ್‌ ಹಂತ ಪಡೆಯುವ ಸಾಧ್ಯತೆ: ಬೆಂಗಳೂರಿನ ಪ್ರಯೋಗ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್, ಕನಕಪುರ ರಸ್ತೆಯಲ್ಲಿರುವ ತನ್ನ ಕೇಂದ್ರದಲ್ಲಿ ನಾನಾ ಪ್ರೌಢ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉಚಿತವಾಗಿ ವೈಜ್ಞಾನಿಕ ಸಂಶೋಧನೆಗಳ ಬಗ್ಗೆ ತರಬೇತಿ ಒದಗಿಸುತ್ತದೆ. ಮಕ್ಕಳ ಕೆಲವು ಸಂಶೋಧನೆಗಳು ಪೇಟೆಂಟ್‌ ಪಡೆಯುವ ಹಂತಕ್ಕೂ ಅಭಿವೃದ್ಧಿಯಾಗಿವೆ. ಪ್ರಯೋಗ ಸಂಸ್ಥೆಯ ಅನ್ವೇಷಣಾ 2023 ಕಾರ್ಯಕ್ರಮದ ಎರಡನೆಯ ಆವೃತ್ತಿ ಇತ್ತೀಚೆಗೆ ನಡೆಯಿತು. ಬೆಂಗಳೂರಿನ ವಿವಿಧ ಶಾಲೆಗಳ 9 ಮತ್ತು ಅದಕ್ಕಿಂತ ಮೇಲ್ಪಟ್ಟ ತರಗತಿಗಳ 14 ವಿದ್ಯಾರ್ಥಿಗಳು 5 ವೈಜ್ಞಾನಿಕ ಸಂಶೋಧನೆಗಳನ್ನು ಪ್ರದರ್ಶಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾರ್ವಜನಿಕ ಬೋಧನಾ ಆಯುಕ್ತರಾದ ಕಾವೇರಿ ಬಿ.ಬಿ ಅವರು ಮಾತನಾಡಿ, “ ಯುವ ಸಂಶೋಧಕರು ವಿಶ್ವಾಸದಿಂದ ತಮ್ಮ ಸಂಶೋಧನೆಗಳನ್ನು ಪ್ರಸ್ತುತಪಡಿಸಿರುವುದನ್ನು ನೋಡಿ ಸಂತೋಷವಾಗಿದೆ. ವಿಜ್ಞಾನ ಸಂಶೋಧನೆಯನ್ನು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಮತ್ತು ಸಮಾಜದ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರಿಗೆ ಕೊಂಡೊಯ್ಯುವ ಪ್ರಯೋಗದ ಉಪಕ್ರಮ ಸ್ವಾಗತಾರ್ಹ ಎಂದರು.

ಪ್ರೊ.ಪಿ.ಆರ್ ಕೃಷ್ಣಸ್ವಾಮಿ ಮಾತನಾಡಿ, “ ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆ ಮನುಷ್ಯನ ವಂಶವಾಹಿಗಳಲ್ಲಿದೆ. ಇದಕ್ಕೆ ಬೇಕಾಗಿರುವುದು ಅನ್ವೇಷಣಾ ಪ್ರವೃತ್ತಿ ಮತ್ತು ವಿಭಿನ್ನವಾಗಿ ಯೋಚಿಸುವ ಸಾಮರ್ಥ್ಯ. ಆರ್ಥಿಕವಾಗಿ ಹಿಂದುಳಿದ ಮತ್ತು ಅವಕಾಶ ವಂಚಿತ ಪ್ರದೇಶಗಳಿಂದ ಬಂದಿರುವ ವಿದ್ಯಾರ್ಥಿಗಳ ಉತ್ಸಾಹ ಗಮನಿಸಿದರೆ, ಸಂಶೋಧನೆಯ ಕ್ಷೇತ್ರದಲ್ಲಿ ಭಾರತದ ಭವಿಷ್ಯ ಬಹಳ ಉಜ್ವಲವಾಗಿದೆ ಎಂದು ನಾನು ಹೇಳಬಲ್ಲೆ ಎಂದು ಹೇಳಿದರು.
ಪ್ರಯೋಗ ಸಂಸ್ಥೆಯ ಮುಖ್ಯ ಮಾರ್ಗದರ್ಶಕ ಡಾ. ಎಚ್. ಎಸ್. ನಾಗರಾಜ ಮಾತನಾಡಿ, ವಿಶ್ವದರ್ಜೆಯ ಸಂಶೋಧಕರು ಮತ್ತು ಚಿಂತನಶೀಲ ನಾಯಕರುಗಳಾಗಬಲ್ಲ ವಿದ್ಯಾರ್ಥಿಗಳನ್ನು ಭಾರತ ಹೊಂದಿದೆ. ಅವರು ಅತ್ಯಂತ ಸಮರ್ಥ ವಿಜ್ಞಾನಿಗಳಾಗಿ ರೂಪುಗೊಳ್ಳಲು ನಾವು ಅವರ ಸಾಮರ್ಥ್ಯಗಳನ್ನು ಗುರುತಿಸಿ ಪೋಷಿಸಬೇಕು. ವಿಶ್ವದ ಕೆಲವೇ ದೇಶಗಳಲ್ಲಿ ವಿದ್ಯಾರ್ಥಿಗಳು ಸ್ವತಂತ್ರ ಸಂಶೋಧನಾ ಯೋಜನೆಗಳಲ್ಲಿ ಭಾಗವಹಿಸಲು ಅವಕಾಶಗಳನ್ನು ಒದಗಿಸಲಾಗುತ್ತದೆ. ಈ ನಿಟ್ಟಿನಲ್ಲಿ ನಗರ ಪ್ರದೇಶಗಳಿಂದ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳಿಂದ, ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಸಂಶೋ ಧನಾ ಅವಕಾಶಗಳನ್ನು ವಿಸ್ತರಿಸುವ ಸಂಸ್ಥೆಗಳಲ್ಲಿ ಪ್ರಯೋಗವೂ ಒಂದಾಗಿದೆ ಎಂದು ತಿಳಿಸಿದರು. ಪ್ರಯೋಗ ಸಂಸ್ಥೆ ಅಭಿವೃದ್ಧಿಪಡಿಸಿರುವ 50 ಸರ್ಕಾರಿ ಶಾಲೆಗಳು ಸೇರಿದಂತೆ 70 ಶಾಲೆಗಳಿಗೆ ಒದಗಿಸಲಾಗುವ ವಿಶೇಷ ವಿಜ್ಞಾನ ಪ್ರಯೋಗಾಲಯ ಸಾಮಗ್ರಿಗಳನ್ನು (Lab Solutions) ಅನಾವರಣಗೊಳಿಸಲಾಯಿತು. ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ ಸುಮಂಗಲಾ ಭಾಗವಹಿಸಿದ್ದರು.

ಏನಿದು ಪ್ರಯೋಗ ಸಂಸ್ಥೆ? ರಾಜ್ಯದ ಸರ್ಕಾರಿ ಹಾಗೂ ಹಿಂದುಳಿದ ಶಾಲೆಗಳಲ್ಲಿನ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆ, ಸೃಜನಶೀಲತೆಗೆ ಉತ್ತೇಜನ ನೀಡಲು ಹಾಗೂ ಭವಿಷ್ಯದ ವಿಜ್ಞಾನಿಗಳನ್ನಾಗಿಸಲು ಅತ್ಯಾಧುನಿಕ ತರಬೇತಿಯನ್ನು ಪ್ರಯೋಗ ಸಂಸ್ಥೆ ಉಚಿತವಾಗಿ ನೀಡುತ್ತದೆ. ಐಐಎಸ್ಸಿ ಸೇರಿದಂತೆ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಹಾಗೂ ಹಿರಿಯ ವಿಜ್ಞಾನಿಗಳು ಇಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವುದು ವಿಶೇಷ.

Exit mobile version