ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬೆನ್ನಟ್ಟಿ, ಘಟನೆ ನಡೆದ 24 ಗಂಟೆಯೊಳಗೆ ಬಂಧಿಸಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಯಿತು. ವಿನಯ್ ಮತ್ತು ತ್ರಿಮೂರ್ತಿ(ಅಪ್ಪಾಜಿ) ಎಂಬ ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ. ದೊಡ್ಡಬಳ್ಳಾಪುರದ ಡಿಕ್ರಾಸ್ ಸಮೀಪದ ಹಳೇ ಪೆಟ್ರೋಲ್ ಬಂಕ್ ಬಳಿ ಕಾಲಿಗೆ ಗುಂಡು ಹಾರಿಸಲಾಯಿತು.
ಜನವರಿ 17 ರ ಮಧ್ಯಾಹ್ನ ಯುವಕರ ನಡುವೆ ಕ್ರಿಕೆಟ್ ವಿಚಾರಕ್ಕೆ ನಡೆದಿದ್ದ ಕಲಹ ಕೊಲೆಯಲ್ಲಿ ಅಂತ್ಯವಾಗಿತ್ತು. ನಡು ರಸ್ತೆಯಲ್ಲಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಭರತ್ ಮತ್ತು ಪ್ರತೀಕ್ ಎಂಬ ಇಬ್ಬರು ಯುವಕರನ್ನು ಚುಚ್ಚಿ ಕೊಲೆ ಮಾಡಲಾಗಿತ್ತು. ಸಚಿವ ಎಂಟಿಬಿ ನಾಗರಾಜ್ ಅವರು ಆರೋಪಿಗಳನ್ನು 24 ಗಂಟೆ ಒಳಗೆ ಬಂಧಿಸುತ್ತೇವೆ ಎಂದು ಭರವಸೆ ನೀಡಿದ್ದರು.
ದೊಡ್ಡಬೆಳವಂಗಲ ಪೋಲೀಸ್ ಠಾಣಾ ಇನ್ಸ್ಪೆಕ್ಟರ್ ಹರೀಶ್ ಮತ್ತು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಹರೀಶ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ರಾತ್ರಿ ವೇಳೆ ಬೀಟ್ ನಲ್ಲಿದ್ದ ಪೋಲೀಸರಿಗೆ ಖಚಿತ ಮಾಹಿತಿ ಲಭಿಸಿದ್ದರಿಂದ ಬಂಧಿಸಲು ಮುಂದಾದರು.ಆರೋಪಿಗಳು ಸ್ನೇಹಿತರ ಬಳಿ ಹಣ ತೆಗೆದುಕೊಳ್ಳಲು ಬಂದಾಗ ಸಿಕ್ಕಿಬಿದ್ದಿದ್ದಾರೆ.ಬಂಧಿಸಲು ಬಂದಾಗ ಪೋಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಆರೋಪಿಗಳು ಮುಂದಾದರು. ಆಗ ಕಾಲಿಗೆ ಗುಂಡು ಹಾರಿಸಲಾಯಿತು.