Site icon Vistara News

Anekal News : ಯುವತಿ ಕೈ ಬಲಿ ಪಡೆದ ಅಕ್ರಮ ಡ್ರೈ ಕ್ಲೀನಿಂಗ್ ಕಾರ್ಖಾನೆ; ಚಿಕಿತ್ಸೆ ಕೊಡಿಸದೆ ಮಾಲೀಕ ಎಸ್ಕೇಪ್‌

anekla news

ಬೆಂಗಳೂರು ಗ್ರಾಮಾಂತರ: ಆಕೆ ಬಡ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗಳು. ಅನಾರೋಗ್ಯದಿಂದ ಬಳಲುತ್ತಿರುವ ಅಪ್ಪ-ಅಮ್ಮನಿಗೆ ಆಕೆಯೇ ಆಧಾರವಾಗಿದ್ದಳು. ಒಪ್ಪೊತ್ತಿನ ಊಟಕ್ಕಾಗಿ 21 ವರ್ಷದ ಯುವತಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ತಿಂಗಳು ಕಳೆಯುವಷ್ಟರಲ್ಲಿ ಮಾಲೀಕರ ನಿರ್ಲಕ್ಷ್ಯಕ್ಕೆ ಕೈ ಕಳೆದುಕೊಂಡು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾಳೆ. ಬೆಂಗಳೂರು ಹೊರವಲಯದ ಆನೇಕಲ್ (Anekal News) ತಾಲೂಕಿನ ಸಿ.ಕೆ ಪಾಳ್ಯದಲ್ಲಿ ಇಂತಹದೊಂದು ಮನಕಲುಕುವ ಘಟನೆ ನಡೆದಿದೆ.

ಅನಾರೋಗ್ಯ ಪೀಡಿತ ‌ಪೋಷಕರ ಪಾಲನೆ ಜವಾಬ್ದಾರಿ ಹೊತ್ತಿದ್ದ ಗಾಯಾಳು ಸುಮಿತ್ರಾ ಒಂದೂವರೆ ತಿಂಗಳ ಹಿಂದೆ ವಿ.ಕೆ.ಆರ್ ಡ್ರೈ ಕ್ಲೀನರ್ ಕಾರ್ಖಾನೆಗೆ ಕೆಲಸಕ್ಕೆ ಸೇರಿದ್ದಳು. ತಿಂಗಳು ಕಳೆದರು ಸಂಬಳ ಕೊಡದ ಕಾರಣಕ್ಕೆ ಇನ್ನೂ 15 ದಿನಗಳು ನೋಡಿ, ಕೆಲಸ ಬಿಟ್ಟು ಬಿಡುವ ನಿರ್ಧಾರ ಮಾಡಿದ್ದಳು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ಬಟ್ಟೆ ಐರನ್ ಮಾಡುವ ಮೆಷಿನ್‌ಗೆ ಸಿಲುಕಿದ ಸುಮಿತ್ರಾ ಬಲಗೈ ಕಳೆದುಕೊಂಡಿದ್ದಳು.

ತನಗೆ ಐರನ್ ಮೆಷಿನ್ ಅಪರೇಟ್ ಮಾಡಲು ಬರುವುದಿಲ್ಲ ಎಂದರು ಬಿಡದೇ ಮಾಲೀಕಿ ರಂಜಿತಾ ಒತ್ತಾಯಿಸಿದ್ದರು. ಐರನ್ ಮೆಷಿನ್‌ನಲ್ಲಿ ಬಟ್ಟೆ ಕೊಡಲು ಹೋಗಿ ಕೈ ಸಿಲುಕಿತ್ತು. ಕಾರ್ಖಾನೆಯಲ್ಲಿ ಒಬ್ಬಳೇ ಇದ್ದ ಕಾರಣಕ್ಕೆ ಕಿರುಚಾಡಿದರೂ ಯಾರೂ ನೆರವಿಗೆ ಬರಲಿಲ್ಲ. ಒಂದು ಗಂಟೆ ಬಳಿಕ ಕೂಗಾಟ ಕೇಳಿ ಪಕ್ಕದ ಕಾರ್ಖಾನೆಯವರು ನೆರವಿಗೆ ಧಾವಿಸಿದ್ದರು. ಆದರೆ ಅಷ್ಟೊತ್ತಿಗಾಗಲೇ ಕೈ ಬಹುತೇಕ ಸುಟ್ಟು ಹೋಗಿತ್ತು ಎಂದು ಗಾಯಾಳು ಸುಮಿತ್ರಾ ಕಣ್ಣೀರು ಹಾಕಿದ್ದಾಳೆ.

ಇದನ್ನೂ ಓದಿ: Actor Darshan: ಎರಡೇ ಎರಡೇಟು ಬಿಟ್ಟಿದ್ದೆ, ಹಿಂಗಾಗೋಯ್ತು ಸಾರ್‌! ಪೊಲೀಸರ ಮುಂದೆ ದರ್ಶನ್‌ ಹೇಳಿಕೆ!

ಚಿಕಿತ್ಸೆ ಕೊಡಿಸದೆ ಎಸ್ಕೇಪ್‌

ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮಾತಾಡಿದ್ದ ಮಾಲೀಕ ಅಭಿಷೇಕ್ ಕೆಲ ಹೊತ್ತಿನಲ್ಲಿಯೇ ಉಲ್ಟಾ ಹೊಡೆದಿದ್ದಾನೆ. ಐದು ಲಕ್ಷ ರೂ. ಕಟ್ಟಿದರೆ ಕೂಡಲೇ ಸರ್ಜರಿ ಮಾಡಿ ಯುವತಿ ಕೈ ಉಳಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಯುವತಿ ಪೋಷಕರನ್ನು ಯಾಮಾರಿಸಿ ಬಿಳಿ ಹಾಳೆ ಮೇಲೆ ಒತ್ತಾಯಪೂರ್ವಕವಾಗಿ ಸಹಿ ಮಾಡಿಸಿಕೊಂಡು, ಚಿಕಿತ್ಸೆ ಕೊಡಿಸದೇ ಪರಾರಿಯಾಗಿದ್ದಾನೆ. ಈ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ನಿರ್ಲಕ್ಷ್ಯ ಪ್ರಕರಣ ದಾಖಲಿಸಿ ಸುಮ್ಮನಾಗಿದ್ದಾರೆ. ಯುವತಿಗೆ ನ್ಯಾಯ ಕೊಡಿಸುವ ಗೋಜಿಗೆ ಹೋಗಿಲ್ಲ.‌

ಯುವತಿ ಸಹಾಯಕ್ಕೆ ಧಾವಿಸಿದ ಸನ್‌ ರೇ ಆಸ್ಪತ್ರೆ

ಸುಮಿತ್ರಾ ಕುಟುಂಬಸ್ಥರು ಕಡು ಬಡವರಾಗಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಗಳಿಗೆ ಚಿಕಿತ್ಸೆ ಕೊಡಿಸಲು ಆಗದೇ ಕಂಗಲಾಗಿದ್ದರು. ಇವರ ಸಂಕಷ್ಟಕ್ಕೆ ಸ್ಪಂದಿಸಿದ ಸನ್ ರೇ ಎಂಬ ಖಾಸಗಿ ಆಸ್ಪತ್ರೆ ವೈದ್ಯರು ಸಹಾಯಕ್ಕೆ ಧಾವಿಸಿದ್ದರು. ಸುಮಿತ್ರಾ ಪೋಷಕರಿಂದ ಯಾವುದೇ ಹಣ ಪಡಯದೇ ಚಿಕಿತ್ಸೆ ನೀಡಿದ್ದಾರೆ. ಕೈ ಕಳೆದುಕೊಂಡ ಯುವತಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾಳೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version