Site icon Vistara News

Anekal News : ನೇಣು ಬಿಗಿದುಕೊಂಡ ಪತಿ; ತುಂಬು ಗರ್ಭಿಣಿ ಅನಾಥೆ

yogesh

ಆನೇಕಲ್: ಆ ಕುಟುಂಬಸ್ಥರು ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿತ್ತು. ಆದರೆ ಮನೆ ಮಗನ ದುಡುಕಿನ ನಿರ್ಧಾರಕ್ಕೆ ಕಣ್ಣು ಬಿಡದ ಮಗುವು ತಂದೆಯನ್ನು ಕಳೆದುಕೊಂಡರೆ, ಇತ್ತ ಪತ್ನಿ ಒಬ್ಬಂಟಿಯಾಗಿದ್ದಾಳೆ. ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೊಬ್ಬ ನೇಣಿಗೆ (Self Harming) ಶರಣಾಗಿರುವ ಘಟನೆ ಆನೇಕಲ್ ಪಟ್ಟಣದ (Anekal News) ಭೋವಿ ಕಾಲೋನಿಯಲ್ಲಿ ನಡೆದಿದೆ. ಯೋಗೇಶ್ (29) ಆತ್ಮಹತ್ಯೆ ಮಾಡಿಕೊಂಡವನು.

ಯೋಗೇಶ್ ಕಳೆದೊಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದ. ಪತ್ನಿ 8 ತಿಂಗಳ ಗರ್ಭಿಣಿಯಾಗಿದ್ದಳು, ಹೀಗಾಗಿ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಮೂರು ವರ್ಷದ ಹಿಂದೆ ಯೋಗೇಶ್ ಸಹೋದರ ಶಿವಕುಮಾರ್ ಮೃತಪಟ್ಟಿದ್ದ. ಹೀಗಾಗಿ ಇಡೀ ಕುಟುಂಬದ ಜವಾಬ್ದಾರಿ ಯೋಗೇಶ್ ಮೇಲಿತ್ತು.

ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದ ಯೋಗೇಶ್‌ಗೆ ಮನೆ ಜವಾಬ್ದಾರಿ ಹೊರಲು ಕಷ್ಟವಾಗಿತ್ತು. ಇತ್ತೀಚೆಗೆ ಹಣಕಾಸಿನ ಸಮಸ್ಯೆಯಿಂದಾಗಿ ಮನನೊಂದಿದ್ದ ಎನ್ನಲಾಗಿದೆ. ಹೀಗಾಗಿ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ರೂಮಿನ ಫ್ಯಾನ್‌ಗೆ ನೇಣು ಬೀಗಿದುಕೊಂಡು ಮೃತಪಟ್ಟಿದ್ದಾನೆ.

ರೂಮಿನ ಬಾಗಿಲು ಹಾಕಿಯೇ ಇದ್ದರಿಂದ ಅನುಮಾನಗೊಂಡ ಕುಟುಂಬಸ್ಥರು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road Accident : ಯಮನಂತೆ ಬಂದ ಕಾರಿಗೆ ಬಾಲಕ ಸಾವು; ತಂದೆ- ಮಗಳು ಗಂಭೀರ

ಆತ್ಮಹತ್ಯೆಗೆ ಅವಕಾಶ ಕೊಡಿ ಎಂದು ಸುಪ್ರೀಂ ಕೋರ್ಟ್ ಸಿಜೆಗೆ ಪತ್ರ ಬರೆದ ಉ.ಪ್ರ ನ್ಯಾಯಾಧೀಶೆ!

ಹೊಸದಿಲ್ಲಿ: ಹಿರಿಯ ನ್ಯಾಯಾಧೀಶರಿಂದ ಲೈಂಗಿಕ ಕಿರುಕುಳಕ್ಕೆ (physical abuse, Sexual harassment) ಒಳಗಾದ ಉತ್ತರ ಪ್ರದೇಶದ ಮಹಿಳಾ ನ್ಯಾಯಾಧೀಶರೊಬ್ಬರು, ತನಗೆ ಆತ್ಮಹತ್ಯೆಗೆ ಅನುಮತಿ ಕೊಡಿ ಎಂದು ಕೋರಿ ಸುಪ್ರೀಂ ಕೋರ್ಟ್‌ (Supreme court) ಮುಖ್ಯ ನ್ಯಾಯಮೂರ್ತಿ (Chief Justice of India – CJI) ಡಿ.ವೈ ಚಂದ್ರಚೂಡ್ (DY Chandrachud) ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತ ಸುದ್ದಿ ಹಾಗೂ ಬಹಿರಂಗ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಸಿಜೆಐ ಪ್ರಕರಣದ ಬಗ್ಗೆ ವರದಿ ಕೇಳಿದ್ದಾರೆ.

“ನನ್ನ ಜೀವನವನ್ನು ಗೌರವಯುತವಾಗಿ ಕೊನೆಗೊಳಿಸಲು ದಯವಿಟ್ಟು ನನಗೆ ಅನುಮತಿ ಕೊಡಿ. ನನ್ನ ಜೀವನವನ್ನು ʼಡಿಸ್‌ಮಿಸ್‌ʼ ಮಾಡಿ” ಎಂದು ಉತ್ತರ ಪ್ರದೇಶದ ಬಂಡಾದ ಮಹಿಳಾ ನ್ಯಾಯಾಧೀಶಶೆಯೊಬ್ಬರು ಮುಖ್ಯ ನ್ಯಾಯಾಧೀಶರನ್ನು ಉದ್ದೇಶಿಸಿ ಪತ್ರದಲ್ಲಿ ಬರೆದಿದ್ದಾರೆ. ಬಾರಾಬಂಕಿಯ ಜಿಲ್ಲಾ ನ್ಯಾಯಾಧೀಶರು ಮತ್ತು ಅವರ ಸಹಚರರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. “ನನಗೆ ತುಂಬಾ ಲೈಂಗಿಕ ಕಿರುಕುಳ ನೀಡಲಾಗಿದೆ. ನನ್ನನ್ನು ಸಂಪೂರ್ಣ ಕಸದಂತೆ ನಡೆಸಿಕೊಳ್ಳಲಾಗಿದೆ. ಇದರಿಂದ ನಾನೊಬ್ಬ ಕ್ರಿಮಿಯಂತೆ ಭಾಸವಾಗುತ್ತಿದೆ” ಎಂದು ಅವರು ವ್ಯಾಪಕವಾಗಿ ಪ್ರಸಾರವಾದ ಪತ್ರದಲ್ಲಿ ಹೇಳಿದ್ದಾರೆ.

ಇದಕ್ಕೆ ಸ್ಪಂದಿಸಿರುವ ಸಿಜೆಐ ಚಂದ್ರಚೂಡ್ ಅವರ ಸೂಚನೆಯ ಮೇರೆಗೆ ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್ ಅತುಲ್ ಎಂ. ಕುರ್ಹೇಕರ್ ಅವರು ಅಲಹಾಬಾದ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದು, ಮಹಿಳಾ ನ್ಯಾಯಾಧೀಶರ ಎಲ್ಲಾ ದೂರುಗಳ ಸ್ಥಿತಿಗತಿಯ ಬಗ್ಗೆ ಇಂದು ಬೆಳಿಗ್ಗೆ ವರದಿಯನ್ನು ಕೇಳಿದ್ದಾರೆ.

ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳೂ ಈ ಬಹಿರಂಗ ಪತ್ರದ ಬಗ್ಗೆ ಗಮನ ಹರಿಸಿದ್ದಾರೆ. 2023ರ ಜುಲೈಯಲ್ಲಿ ಹೈಕೋರ್ಟ್‌ನ ಆಂತರಿಕ ದೂರುಗಳ ಸಮಿತಿಗೆ ಈ ಬಗ್ಗೆ ನ್ಯಾಯಾಧೀಶೆ ದೂರು ಸಲ್ಲಿಸಿದ್ದರು. ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು. ಆದರೆ ʼವಿಚಾರಣೆಯ ಪ್ರಹಸನ ಮಾತ್ರ ನಡೆದಿದೆʼ ಎಂದು ನ್ಯಾಯಾಧೀಶೆ ಆರೋಪಿಸಿದ್ದಾರೆ. “ತನಿಖೆಯಲ್ಲಿರುವ ಸಾಕ್ಷಿಗಳು ಜಿಲ್ಲಾ ನ್ಯಾಯಾಧೀಶರ ಅಧೀನದವರಾಗಿದ್ದಾರೆ. ಸಾಕ್ಷಿಗಳು ತಮ್ಮ ಬಾಸ್ ಅನ್ನು ಪದಚ್ಯುತಿಗೊಳಿಸಬೇಕೆಂದು ಸಮಿತಿಯು ನಿರೀಕ್ಷಿಸುತ್ತಿರುವುದು ನನ್ನ ತಿಳಿವಳಿಕೆಗೆ ಮೀರಿದೆ” ಎಂದು ಅವರು ಬರೆದಿದ್ದಾರೆ.

“ನ್ಯಾಯಯುತ ತನಿಖೆ ಸಾಧ್ಯವಾಗುವಂತೆ ಆರೋಪಿ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವಂತೆ ನಾನು ವಿನಂತಿಸಿದ್ದೇನೆ. ಆದರೆ ಸುಪ್ರೀಂ ಕೋರ್ಟ್ ತನ್ನ ಅರ್ಜಿಯನ್ನು ಕೇವಲ ಎಂಟು ಸೆಕೆಂಡುಗಳಲ್ಲಿ ವಜಾಗೊಳಿಸಿದೆ. ಕನಿಷ್ಠ ನನ್ನ ಪ್ರಾರ್ಥನೆಗೆ ಕಿವಿಗೊಡಲಿಲ್ಲ. ನನಗೆ ಇನ್ನು ಬದುಕುವ ಇಚ್ಛೆ ಇಲ್ಲ. ಕಳೆದ ಒಂದೂವರೆ ವರ್ಷದಲ್ಲಿ ನನ್ನನ್ನು ನಡೆದಾಡುವ ಶವದಂತೆ ಕಾಣಲಾಗಿದೆ. ಇನ್ನು ಮುಂದೆ ಈ ನಿರ್ಜೀವ ದೇಹವನ್ನು ಹೊತ್ತುಕೊಂಡು ಹೋಗುವುದರಲ್ಲಿ ಯಾವುದೇ ಅರ್ಥವಿಲ್ಲ. ನನ್ನ ಜೀವನದಲ್ಲಿ ಯಾವುದೇ ಉದ್ದೇಶವಿಲ್ಲ” ಎಂದು ಎರಡು ಪುಟಗಳ ಪತ್ರದಲ್ಲಿ ಬರೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version