ದೊಡ್ಡಬಳ್ಳಾಪುರ: ಕಳ್ಳರು ಕದ್ದ ಚಿನ್ನವನ್ನು ಖರೀದಿ ಮಾಡಿದ ಆರೋಪದಡಿ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು (Attica Babu) ಮತ್ತೊಮ್ಮೆ ಬಂಧನವಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಶನಿವಾರ (ಜೂ.29) ಮುಂಜಾನೆ ಬಂಧಿಸಿ ಕರೆತಂದಿದ್ದಾರೆ.
ಮೊನ್ನೆಯಷ್ಟೇ ತುರುವೇಕೆರೆ ಪೊಲೀಸರು ಬೆಂಗಳೂರಿಗೆ ಬಂದು ಬಾಬುರನ್ನು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದ ಅಟ್ಟಿಕಾ ಬಾಬುರನ್ನು ದೊಡ್ಡಬಳ್ಳಾಪುರ ಪೊಲೀಸರು ಕೂಡಲೆ ಬಂಧಿಸಿದ್ದಾರೆ.
ಇಬ್ಬರು ಕಳ್ಳರು ಕಳ್ಳತನ ಮಾಡಿದ ಚಿನ್ನದ ಮಾಲು ಖರೀದಿ ಆರೋಪದಲ್ಲಿ ಬಾಬು ಬಂಧನವಾಗಿದೆ. ಬೊಮ್ಮನಹಳ್ಳಿ ಬಾಬು ಸೇರಿದಂತೆ ಮೂವರ ಬಂಧನವಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ಬಾಬು ಬಂಧಿಸಿರುವ ಪೊಲೀಸರು ಇಂದು ನಗರದ ಜೆಎಂಎಪ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ವೇಳೆ ಪೊಲೀಸ್ ಠಾಣೆ ಮುಂದೆ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಪ್ರತಿಕ್ರಿಯಿಸಿದ್ದಾರೆ. 2016 ರಲ್ಲಿ ನಾನು ಅಟ್ಟಿಕಾ ಗೋಲ್ಡ್ ಕಂಪನಿಗೆ ರಿಸೈನ್ ಮಾಡಿದ್ದೇನೆ. ವಿನಾಕಾರಣ ಪೊಲೀಸರು ನನ್ನನ್ನು ಟಾರ್ಗೆಟ್ ಮಾಡಿ ಸುಳ್ಳು ಕೇಸ್ ದಾಖಲು ಮಾಡುತ್ತಿದ್ದಾರೆ. ಕೆಲ ಕೇಸ್‌ಗಳಲ್ಲಿ ನಾನು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ. ಆದರೂ ನನ್ನನ್ನು ಕೇಸ್‌ಗಳಲ್ಲಿ ಸಿಕ್ಕಿಸುವ ಸಂಚು ನಡೆಯುತ್ತಿದೆ, ಇದು ರಾಜಕೀಯ ಪಿತೂರಿ ಎಂದರು.
ತುರುವೇಕೆರೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲು
ಖ್ಯಾತ ಚಿನ್ನದ ವ್ಯಾಪಾರಿ, ಅಟ್ಟಿಕಾ ಗೋಲ್ಡ್ ಕಂಪನಿ (Attica Gold Company) ಮಾಲೀಕ ಅಟ್ಟಿಕಾ ಬಾಬು (Attica Babu) ಅಲಿಯಾಸ್ ಬೊಮ್ಮನಹಳ್ಳಿ ಬಾಬು ಅವರನ್ನು ತುಮಕೂರು ಜಿಲ್ಲೆಯ ತುರುವೇಕೆರೆ ಪೊಲೀಸರು (Turuvekere Police) ಜೂನ್ 26 ಬಂಧಿಸಿದ್ದರು. ಕದ್ದ ಚಿನ್ನದ ಆಭರಣಗಳನ್ನು ಖರೀದಿ ಮಾಡುತ್ತಿದ್ದ ಆರೋಪದಲ್ಲಿ ಬೆಂಗಳೂರಿನ (Bengaluru) ಫ್ರೇಜರ್ ಟೌನ್ ನಿವಾಸದ ಬಳಿ ಅಟ್ಟಿಕಾ ಬಾಬು ಅವರನ್ನು ಪೊಲೀಸರು ಬಂಧಿಸಿದ್ದರು.
ಕಳ್ಳತನ ಮಾಡಿದ ಚಿನ್ನದ ಆಭರಣಗಳನ್ನು ಖರೀದಿ ಮಾಡಿದ ಕುರಿತು ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಹಾಗಾಗಿ, ತುರುವೇಕೆರೆ ಸಿಪಿಐ ಲೋಹಿತ್ ಬಿ.ಎನ್ ಹಾಗೂ ತಂಡದಿಂದ ಬಂಧಿಸಲಾಗಿತ್ತು. ಹಗಲು ಕಳ್ಳತನದ ಆರೋಪಿ ಉದಯ್ ಅಲಿಯಾಸ್ ಅಶೋಕ್ ಎಂಬಾತ ತನ್ನ ಹೆಂಡತಿ ಶಾರದಾ ಮೂಲಕ ಅಟ್ಟಿಕಾ ಬಾಬುಗೆ ಚಿನ್ನ ಮಾರಾಟ ಮಾಡಿಸುತ್ತಿದ್ದ. ತುರುವೇಕೆರೆ ವ್ಯಾಪ್ತಿಯಲ್ಲಿ ಕದ್ದ ಚಿನ್ನವನ್ನು ಅಟ್ಟಿಕಾ ಬಾಬು ಖರೀದಿ ಮಾಡುತ್ತಿರುವ ಕುರಿತು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.
ಶಾರದಾ ಮೂಲಕ ಜಿಗಣಿಯಲ್ಲಿರುವ ಅಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಉದಯ್ ಅಲಿಯಾಸ್ ಅಶೋಕ್ ಮಾರಾಟ ಮಾಡಿಸಿದ್ದ. ಪ್ರಕರಣ ದಾಖಲಾದ ಬಳಿಕ ಪೊಲೀಸರು ತನಿಖೆ ಮಾಡಿದ್ದರು. ಕಳ್ಳತನ ಮಾಡಿದ ಚಿನ್ನಾಭರಣವನ್ನು ಖರೀದಿಸಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರ ತಂಡವು ಬೆಂಗಳೂರಿಗೆ ಆಗಮಿಸಿ, ಅಟ್ಟಿಕಾ ಬಾಬು ಅವರನ್ನು ಬಂಧಿಸಿತ್ತು. ಬಳಿಕ ಜಾಮೀನು ಪಡೆದು ಹೊರಬಂದಿದ್ದ ಬಾಬುರನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕಳ್ಳ ಮಾಲು ಕೇಸ್‌ನಲ್ಲಿ ಬಂಧಿಸಿದ್ದಾರೆ.
ಇದನ್ನೂ ಓದಿ: Attica Babu : ಅಟ್ಟಿಕಾ ಬಾಬು ತಂದಿಟ್ಟಿದ್ದ ಲೋಡ್‌ಗಟ್ಟಲೆ ರಂಜಾನ್-ಯುಗಾದಿ ಕಿಟ್ ಸೀಜ್ ಮಾಡಿದ ಪೊಲೀಸರು!
2022ರಲ್ಲೂ ಬಂಧಿಸಲಾಗಿತ್ತು
ಎರಡನೇ ಮದುವೆಯಾಗಿ, ಮೋಸ ಮಾಡಿದ್ದಾರೆ ಎಂಬುದಾಗಿ ಮಹಿಳೆಯೊಬ್ಬರು ದೂರು ನೀಡಿದ ಕಾರಣ 2022ರಲ್ಲೂ ಅಟ್ಟಿಕಾ ಬಾಬು ಅವರನ್ನು ಆಂಧ್ರಪ್ರದೇಶದ ಪೊಲೀಸರು ಬಂಧಿಸಿದ್ದರು. ಶೇಖ್ ಮಿನಾಜ್ ಎಂಬ ಮಹಿಳೆಯು ಹಲ್ಲೆ ಹಾಗೂ ಮೋಸ ಮಾಡಿದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಬಂಧಿಸಿದ್ದರು. ಮಹಿಳೆ ದೂರಿನ ಹಿನ್ನೆಲೆಯಲ್ಲಿ ಅಟ್ಟಿಕಾ ಬಾಬು ವಿರುದ್ಧ ಹಲ್ಲೆ, ವರದಕ್ಷಿಣೆ ಕಿರುಕುಳದ ಪ್ರಕರಣ ಕೂಡ ದಾಖಲಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಅಟ್ಟಿಕಾ ಬಾಬು ಬಿಡುಗಡೆಯಾಗಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ