ಆನೇಕಲ್: ಕ್ಯಾಂಟರ್ ವಾಹನದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ (Cow Smugglers) ಮಾಡಲಾಗಿದೆ. ರಾಷ್ಟ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ (Puneeth Kerehalli) ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಗೋವುಗಳನ್ನು ರಕ್ಷಿಸಲಾಗಿದೆ.
ಅಮೃತಮಹಲ್ ಜಾತಿಯ ಗೋವುಗಳನ್ನು ಹುಬ್ಬಳ್ಳಿಯಿಂದ ಕೇರಳ ಕಡೆಗೆ ಕ್ಯಾಂಟರ್ ವಾಹನದ ಮೂಲಕ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪುನೀತ್ ಕೆರೆಹಳ್ಳಿ ತಂಡ ಹಿಂಬಾಲಿಸಿದೆ. ಆನೇಕಲ್‌ನ ಹೆಬ್ಬಗೋಡಿ ಬಳಿ ಕ್ಯಾಂಟರ್‌ಗೆ ಅಡ್ಡಗಟ್ಟಿ ಪರಿಶೀಲನೆ ನಡೆಸಿದಾಗ ಗೋವುಗಳು ಪತ್ತೆಯಾಗಿವೆ.
ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಗೋವುಗಳ ಸಾಗಾಟ ಬಯಲಿಗೆ ಬಂದಿದೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರಕ್ಷಣೆ ಮಾಡಿದ ಸುಮಾರು 20ಕ್ಕೂ ಅಧಿಕ ಗೋವುಗಳನ್ನು ಹೆಬ್ಬಗೋಡಿ ಪೊಲೀಸರು ಗೋ ಶಾಲೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಪುನೀತ್ ಕೆರೆಹಳ್ಳಿ, ಪದೇಪದೆ ಕಾಂಗ್ರೆಸ್ ಸರ್ಕಾರದಲ್ಲಿ ಅಕ್ರಮವಾಗಿ ಗೋವುಗಳ ಸಾಗಾಟ ಮಾಡಲಾಗುತ್ತಿದೆ. ಕ್ಯಾಂಟರ್ ವಾಹನಗಳಲ್ಲಿ ಅತ್ಯಂತ ಕೆಟ್ಟ ರೀತಿಯಲ್ಲಿ ಗೋವುಗಳ ಸಾಗಾಟ ಮಾಡಲಾಗುತ್ತಿದೆ. ಗೋವುಗಳನ್ನು ಕೊಲ್ಲುವುದನ್ನು ಹಿಂದೂ ಕಾರ್ಯಕರ್ತರು ಎಂದೂ ಸಹಿಸುವುದಿಲ್ಲ. ಯಾವುದೇ ಸರ್ಕಾರವಿದ್ದರೂ ಗೋ ರಕ್ಷಣೆ ಮಾಡುತ್ತೆವೆ. ಕೇಂದ್ರ ಸರ್ಕಾರದವರು ಗೋವುಗಳನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕೆಂದು ಆಗ್ರಹಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ