ದೊಡ್ಡಬಳ್ಳಾಪುರ: ಬಡ ಕುಟುಂಬದ ಆಕೆಗೆ ಒಂದು ಮಗುವಿತ್ತು. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದ ಆಕೆಗೆ ಹೊಟ್ಟೆ ದಪ್ಪ ಆಗಿತ್ತು. ಹೀಗಾಗಿ ಗರ್ಭಿಣಿ ಆಗಿದ್ದೀನಿ ಎಂದುಕೊಂಡಿದ್ದಳು. ಆದರೆ ನಂತರದ ದಿನದಲ್ಲಿ ಆಕೆಗೆ ಆಘಾತವೇ ಕಾದಿತ್ತು. ದಿಢೀರ್ ಹೊಟ್ಟೆ ನೋವು ಕಾಣಿಸಿಕೊಂಡಾಗ ತಾಲೂಕು ಆಸ್ಪತ್ರೆಗೆ (Doddaballapura News) ಹೋಗಿದ್ದಳು. ಅಲ್ಲಿ ವೈದ್ಯರು ಸ್ಕಾನಿಂಗ್ ಮಾಡಿ ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ಮಗು ಇರಲಿಲ್ಲ. ಬದಲಿಗೆ ನಾಲ್ಕೂವರೆ ಕೆಜಿ ತೂಕದ ಗಡ್ಡೆ ಬೆಳೆದಿತ್ತು.
ಸಿದ್ದೇನಾಯಕನಹಳ್ಳಿಯ ಶೀಲಾ (34) ಎಂಬಾಕೆ ಎಲ್ಲಿಯೂ ಪರೀಕ್ಷೆ ಮಾಡಿಸಿಕೊಳ್ಳದೆ ಹೊಟ್ಟೆ ದಪ್ಪವಾಗಿದ್ದರಿಂದ ತನ್ನಷ್ಟಕ್ಕೆ ತಾನೇ ಪ್ರಗ್ನೆಟ್ ಆಗಿದ್ದೇನೆ ಎಂದು ತಿಳಿದುಕೊಂಡಿದ್ದಳು. ತನ್ನ ಒಡಲಿನಲ್ಲಿ ಕೂಸು ಹುಟ್ಟುತ್ತಿದೆ ಎಂದು ಸಂತೋಷವಾಗಿದ್ದಳು. ಆದರೆ ಈ ಖುಷಿ ಹೆಚ್ಚು ಸಮಯ ಇರಲಿಲ್ಲ. ಒಂದು ದಿನ ಬೆಳಗ್ಗೆ ಶೀಲಾಗೆ ಸಹಿಸಿಕೊಳ್ಳಲಾಗದಷ್ಟು ಹೊಟ್ಟೆನೋವು ಕಾಣಿಸಿಕೊಂಡಿತ್ತು. ಕೂಡಲೇ ತಾಲೂಕು ಆಸ್ಪತ್ರೆಗೆ ಹೋದಾಗ ವೈದ್ಯರು ಪರೀಕ್ಷಿಸಿದಾಗ ಗರ್ಭಕೋಶದಲ್ಲಿ ಬೃಹತ್ ಗಡ್ಡೆ ಬೆಳೆದಿರುವುದು ಗೊತ್ತಾಗಿದೆ. ಆ ಕ್ಷಣದವರೆಗೆ ಶೀಲಾ ತಾನು ಗರ್ಭಿಣಿಯಾಗಿದ್ದೀನಿ ಎಂದುಕೊಂಡಿದ್ದಳು. ಆದರೆ ಗಡ್ಡೆ ವಿಷಯ ಕೇಳಿ ಶಾಕ್ ಆಗಿದ್ದಳು.
ಇದನ್ನೂ ಓದಿ: Electric shock : ಶಾಲಾ ಕ್ರೀಡಾಕೂಟದಲ್ಲಿ ಪ್ರವಹಿಸಿದ ವಿದ್ಯುತ್; ಪೋಷಕ ಸಾವು, ವಿದ್ಯಾರ್ಥಿ ಗಂಭೀರ
ಮಗು ಬದಲಿಗೆ ಗರ್ಭಕೋಶದಲ್ಲಿ ಬೃಹತ್ ಗಡ್ಡೆ ಬೆಳೆದಿತ್ತು. ಈ ವೇಳೆ ವೈದ್ಯರು ಆಪರೇಶನ್ ಮಾಡಿ ಗಡ್ಡೆಯನ್ನು ತೆಗಿಯಬೇಕು. ಇಲ್ಲದಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿಸಿಕೊಳ್ಳುವಷ್ಟು ಶೀಲಾ ಬಳಿ ಹಣ ಇರಲಿಲ್ಲ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಹೀಗಾಗಿ ಸರ್ಕಾರಿ ಆಸ್ಪತ್ರೆ ಬಾಗಿಲು ತಟ್ಟಿದ್ದಳು. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರು, ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡೆದು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.
ಈಕೆಯ ಕೇಸ್ ಅನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ಸ್ತ್ರಿರೋಗ ತಜ್ಞೆ ಡಾ. ಅರ್ಚನಾ ಹಾಗೂ ಗಿರೀಶ್ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಗರ್ಭಕೋಶದಲ್ಲಿದ್ದ ಗಡ್ಡೆಯನ್ನು ಹೊರತೆಗೆದು ಶೀಲಾಳ ಜೀವ ಉಳಿಸಿದ್ದಾರೆ. ಸಾಮಾನ್ಯವಾಗಿ ಮಹಿಳೆಯರ ಗರ್ಭಕೋಶ ಅಂಡಾಶಯಗಳಲ್ಲಿ ಗಡ್ಡೆಯು 100 ಕ್ಕೆ 10 ಮಂದಿಯಲ್ಲಿ ಬಹಳ ಸಣ್ಣಪುಟ್ಟದಾಗಿ ಕಂಡುಬರುತ್ತದೆ. ಆದರೆ ಅಚ್ಚರಿ ಎಂಬಂತೆ ಈ ಮಹಿಳೆಯ ಹೊಟ್ಟೆಯಲ್ಲಿ ಇಷ್ಟು ದೊಡ್ಡ ಗಡ್ಡೆ ಪತ್ತೆಯಾಗಿದೆ. ಈ ಮಹಿಳೆ ಏನಾದರೂ ಒಂದೆರಡು ದಿನ ತಡವಾಗಿ ಬಂದಿದ್ದರೆ ಆಕೆಯ ಜೀವಕ್ಕೆ ಕಂಟಕವಾಗುತ್ತಿತ್ತು.
ಗರ್ಭಕೋಶದ ಸುತ್ತ ಬೆಳೆದಿದ್ದ ದೊಡ್ಡ ಗಾತ್ರದ ಗೆಡ್ಡೆ ಹೊರತೆಗೆಯಲಾಗಿದೆ. ಸದ್ಯ ಮಹಿಳೆಯು ಆರೋಗ್ಯವಾಗಿದ್ದಾರೆ. ಇದೊಂದು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ಎಂದು ಪರಿಗಣಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಯ ವೈದ್ಯರು ಯಾವ ಖಾಸಗಿ ಆಸ್ಪತ್ರೆಗೂ ಕಮ್ಮಿ ಇಲ್ಲವೆಂಬಂತೆ ಉಚಿತವಾಗಿ ಆಪರೇಷನ್ ಮಾಡಿ, ಬಡ ಮಹಿಳೆಯ ಜೀವ ಉಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆ ವೈದ್ಯರ ಈ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ