ಆನೇಕಲ್: ರೈತರೊಬ್ಬರ ಮೇಲೆ ಕಾಡಾನೆ ದಾಳಿ (Elephant Attack) ಮಾಡಿದ್ದರಿಂದ ಅವರ ಸ್ಥಿತಿ ಚಿಂತಾಜನಕವಾಗಿದೆ. ಗಂಭೀರವಾಗಿ ಗಾಯಗೊಂಡ ರೈತ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿ ಬಳಿ ಘಟನೆ ನಡೆದಿದೆ. ಚಿನ್ನಬರಿಯಪ್ಪ (70) ಆನೆ ದಾಳಿಗೊಳಗಾದ ರೈತ.
ಜಮೀನಿನ ಕಡೆ ಹೋಗುತ್ತಿದ್ದಾಗ ಏಕಾಏಕಿ ನುಗ್ಗಿದ ಕಾಡಾನೆ ಅಟ್ಟಾಡಿಸಿ ದಾಳಿ ಮಾಡಿದೆ. ಪರಿಣಾಮ ಕೈ ಹಾಗೂ ಸೊಂಟದ ಭಾಗದ ಮೂಳೆಗಳು ಮುರಿದು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡು ನರಳಾಡುತ್ತಿದ್ದ ಚಿನ್ನಬರಿಯಪ್ಪರನ್ನು ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಗಾಯಾಳು ರೈತನನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆನೇಕಲ್‌ನಲ್ಲಿ ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು
ರಾಜ್ಯ ಗಡಿಭಾಗ ತಮಿಳುನಾಡಿನ ಡೆಂಕಣಿಕೋಟೆ ಸಮೀಪದ ಪಲತೊಟ್ಟನಪಲ್ಲಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಕಾಡಾನೆಯೊಂದು ಮೃತಪಟ್ಟಿದೆ. ಗ್ರಾಮದ ಸಮೀಪ ಹಾದು ಹೋಗಿದ್ದ ವಿದ್ಯುತ್ ತಂತಿಯನ್ನು ಗಂಡಾನೆ ತುಳಿದಿದೆ.
ಕಳೆದ ರಾತ್ರಿ ಗ್ರಾಮಕ್ಕೆ ಕಾಡಾನೆಗಳ ಹಿಂಡು ಲಗ್ಗೆ ಇಟ್ಟಿದ್ದವು. ಇಳಿಜಾರು ಪ್ರದೇಶದಲ್ಲಿ ಹೋಗುತ್ತಿದ್ದದ್ದಾಗ ಒಂದು ಕಾಡಾನೆಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದೆ. ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಆನೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಉಡುಪಿಯಲ್ಲಿ ಚಿರತೆ ಓಡಾಟ
ಹಾಡುಹಗಲಿನಲ್ಲೇ ಚಿರತೆ ಕಾಣಿಸಿಕೊಂಡು ಜನರಲ್ಲಿ ಭಯವನ್ನು ಹುಟ್ಟಿಸುತ್ತಿದೆ. ಉಡುಪಿಯ ಕಾರ್ಕಳ ತಾಲೂಕು ಹಾಳೆಕಟ್ಟೆ ಕಲ್ಯಾ ಮಲಯ್ಯಬೆಟ್ಟು ಎಂಬಲ್ಲಿ ಘಟನೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಅಡ್ಡಾದಿಡ್ಡಿಯಾಗಿ ಯಾವುದೇ ಭಯವಿಲ್ಲದೆ ಚಿರತೆ ಓಡಾಡುತ್ತಿದೆ. ಆದಷ್ಟು ಶೀಘ್ರದಲ್ಲಿ ಚಿರತೆಯನ್ನು ಹಿಡಿದು ರಕ್ಷಣೆ ನೀಡುವಂತೆ ಜನರು ಒತ್ತಾಯಿಸಿದ್ದಾರೆ. ಚಿರತೆ ಸಂಚಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ