ದೇವನಹಳ್ಳಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ನಡೆಯುವ ದನಗಳ ಜಾತ್ರೆ ರದ್ದುಪಡಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಇದರಿಂದ ರೈತರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ನಡೆಯುವ ದನಗಳ ಜಾತ್ರೆ ದಕ್ಷಿಣ ಭಾರತದದಲ್ಲೇ ಇತಿಹಾಸ ಪ್ರಸಿದ್ಧವಾಗಿದೆ. ಇಂದಿನಿಂದ ಈ ಜಾತ್ರೆ ಆರಂಭವಾಗಬೇಕಿತ್ತು. ಆದರೆ ರಾಸುಗಳ ಜಾತ್ರೆಯನ್ನು ಚರ್ಮಗಂಟು ರೋಗದ ಕಾರಣದಿಂದ ರದ್ದುಪಡಿಸಲಾಗಿದೆ.
ಜಾತ್ರೆ ರದ್ದು ಮಾಡಿದ್ದರಿಂದ ವರ್ಷ ವರ್ಷ ಘಾಟಿಯಲ್ಲಿ ಎತ್ತುಗಳನ್ನು ಕಟ್ಟುತ್ತಿದ್ದ ರೈತರಿಗೆ ಆಘಾತವಾಗಿದೆ. ಎತ್ತುಗಳನ್ನು ಕೊಳ್ಳಲು ಮತ್ತು ಮಾರಲು ಆಂಧ್ರ ಪ್ರದೇಶ, ತಮಿಳುನಾಡಿನ ಹೊಸೂರು, ರಾಮನಗರ, ಮಂಡ್ಯ ಭಾಗದಿಂದ ಇಲ್ಲಿಗೆ ಸಾವಿರಾರು ರೈತರು ಆಗಮಿಸುತ್ತಿದ್ದರು. ದೇವನಹಳ್ಳಿ ತಾಲೂಕಿನ ವಿಜುಯಪುರ ಮರವೆ ಕೆಂಪಣ್ಣ ಎಂಬವರು ಈಗಾಗಲೇ ಜಾತ್ರೆಗಾಗಿ 50 ಲಕ್ಷ ರೂ. ಬೆಲೆಯ ಎತ್ತುಗಳನ್ನು ತಂದು ಕಟ್ಟಿದ್ದಾರೆ.
ಜಿಲ್ಲಾಡಳಿತದ ಈ ಕ್ರಮಕ್ಕೆ ಲಕ್ಷಾಂತರ ಬಂಡವಾಳ ಹಾಕಿ ಹಳ್ಳಿಕಾರ್ ತಳಿ, ಅಮೃತ ಮಹಲ್ ತಳಿ ಎತ್ತುಗಳನ್ನು ತಂದು ಸಾಕುತ್ತಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಾಟಿ ಜಾತ್ರೆಯಲ್ಲಿ ವ್ಯಾಪಾರ ವಹಿವಾಟು ಮಾಡಲು ತಂದಿದ್ದ ಎತ್ತುಗಳನ್ನು ಮಾರಾಟ ಮಾಡಲು ಜಿಲ್ಲೆಯ ಹಲವು ರೈತರು ಈಗ ಹೆಣಗಾಡುತ್ತಿದ್ದಾರೆ. ಜಾತ್ರೆಗೆ ಜಿಲ್ಲಾಡಳಿತ ಅನುಮತಿ ನೀಡುವಂತೆ ಆಗ್ರಹಿಸಿದ್ದಾರೆ. ಜನಪ್ರತಿನಿಧಿಗಳನ್ನೂ ಮೊರೆ ಹೊಕ್ಕಿದ್ದಾರೆ.
ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ 150ಕ್ಕೂ ಹೆಚ್ಚು ದನಗಳು ಮೃತಪಟ್ಟಿವೆ. ಇದು ಸಾಂಕ್ರಾಮಿಕ ರೋಗ. ಹೀಗಾಗಿ ಜನವರಿ 30ರ ವರೆಗೂ ಜಿಲ್ಲೆಯಲ್ಲಿ ಯಾವುದೇ ದನಗಳ ಜಾತ್ರೆಗೆ ಅವಕಾಶವಿಲ್ಲ ಎಂದು ಡಿಸಿ ಲತಾ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | Kannada Sahitya Sammelana | ಕನ್ನಡ ರಥದ ಅದ್ಧೂರಿ ಮೆರವಣಿಗೆ; ಸಮಸ್ತ ಕನ್ನಡಿಗರಿಗೆ ಅಕ್ಷರ ಜಾತ್ರೆಗೆ ಆಹ್ವಾನ ನೀಡಿದ ಕಸಾಪ