Site icon Vistara News

ಮಾನಸಿಕ ಖಿನ್ನತೆಯಿಂದ ಕುದೂರು ಠಾಣೆಯ ಹೆಡ್‌ ಕಾನ್ಸ್‌ಟೇಬಲ್‌ ಆತ್ಮಹತ್ಯೆಗೆ ಶರಣು

#image_title

ನೆಲಮಂಗಲ: ಮಾನಸಿಕ ಖಿನ್ನತೆಯಿಂದ (Mental depression) ಬಳಲುತ್ತಿದ್ದ ಪೊಲೀಸ್ ಹೆಡ್‌ ಕಾನ್ಸ್‌ಟೇಬಲ್‌ (Kudur Police Station) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಜಮೀನಿನಲ್ಲಿದ್ದ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನ ಅಗಳಕುಪ್ಪೆಯಲ್ಲಿ ಈ ಘಟನೆ ನಡೆದಿದೆ.

ಉಮೇಶ್ (37) ಮೃತ ದುರ್ದೈವಿ. ಕುದೂರು ಪೊಲೀಸ್ ಠಾಣೆಯಲ್ಲಿ ಉಮೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಐದು ತಿಂಗಳ ಹಿಂದಷ್ಟೇ ಅನಾರೋಗ್ಯದಿಂದ ತಮ್ಮ ನಾಲ್ಕೂವರೆ ವರ್ಷದ ಮಗುವನ್ನು ಕಳೆದುಕೊಂಡಿದ್ದರು. ಈ ಘಟನೆಯಿಂದ ಉಮೇಶ್‌ ಮನನೊಂದು ಖಿನ್ನತೆಗೆ ಜಾರಿದ್ದರು. ಜತೆಗೆ ರಕ್ತದೊತ್ತಡ ಹಾಗೂ ಮಧುಮೇಹ ಕಾಯಿಲೆಯಿಂದಲೂ ಬಳಲುತ್ತಿದ್ದರು.

ಕಳೆದ ಶನಿವಾರ ರಾತ್ರಿ ತಮ್ಮ ಜಮೀನಿನಲ್ಲಿ ಬೈಕ್ ನಿಲ್ಲಿಸಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ನೋಡಿದಾಗ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ದಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡೆತ್‌ನೋಟ್‌ ಬರೆದಿಟ್ಟು 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ; ಮನನೊಂದಿದ್ದು ಯಾಕೆ?

ಬೆಂಗಳೂರು: ಡೆತ್‌ ನೋಟ್ (Death Note) ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಆರ್. ಆಯಿಶಾ ಮೃತ ದುರ್ದೈವಿ.

ಬಿನ್ನಿ ಮಿಲ್ ಸಮೀಪ ಇರುವ ಪೊಲೀಸ್ ಕ್ವಾರ್ಟರ್ಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಯಿಶಾ ಬಿ.ಎಸ್‌.ಸಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಳು ಎಂದು ತಿಳಿದು ಬಂದಿದೆ. ಇನ್ನು ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಯಾರೂ ಕಾರಣ ಅಲ್ಲ. ಈ ಜೀವನದ ಮೇಲೆ ಜಿಗುಪ್ಸೆ ಬಂದಿದೆ. ನಾನೇ ಸ್ವ ಇಚ್ಛೆಯಿಂದ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ಡೆತ್‌ನೋಟ್‌ ಬರೆದಿದ್ದಾಳೆ.

ಡೆತ್‌ನೋಟ್‌ನಲ್ಲಿ ಏನಿದೆ?

ನಾನು ನನ್ನ ಕುಟುಂಬಕ್ಕೆ ಹಾಗೂ ಬೀಮೇಶ್ ನಾಯಕ್ ಮೇಲೆ‌ ದೂರು ನೀಡಿದ್ದೆ. ನಾನು ನೀಡಿದ್ದ ಸುಳ್ಳು ದೂರಿನಿಂದ ಪಶ್ಚಾತ್ತಾಪ ಪಟ್ಟಿದ್ದೇನೆ. ಬೀಮೇಶ್ ನಾಯಕ್ ತುಂಬ ಸೂಕ್ಷ್ಮ ಮತ್ತು ಮುಗ್ದ ವ್ಯಕ್ತಿ ಆಗಿದ್ದಾನೆ. ಅವರ ಮತ್ತು ನನ್ನ ಮಧ್ಯೆ ಯಾವುದೇ ದೈಹಿಕ ಸಂಪರ್ಕ ಇರುವುದಿಲ್ಲ. ನಾನು ಮಾಡಿದ ಈ ಸುಳ್ಳು ಕೇಸಿನಿಂದಾಗಿ ಅವರ ತಂದೆ ಅನಾರೋಗ್ಯಕ್ಕೀಡಾಗಿದ್ದಾರೆ. ನನ್ನಿಂದ ಎರಡು ಕುಟುಂಬಗಳಿಗೂ ತುಂಬಾ ನೋವಾಗಿದೆ. ಈ ಪಶ್ಚಾತ್ತಾಪದಿಂದ ಹೊರಬರಲು ಆಗುತ್ತಿಲ್ಲ, ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಭೀಮೇಶ್ ನಾಯಕ್ ನನ್ನ ಆತ್ಮೀಯ ಸ್ನೇಹಿತ, ಆ್ಯಮ್ ವೆರಿ ಸಾರಿ.. ಐ ಲವ್ ಯೂ ಸೋ ಮಚ್ ಭೀಮೇಶ್ ಎಂದು ಪತ್ರದಲ್ಲಿ ಬರೆದಿದ್ದಾಳೆ.

ಇದನ್ನೂ ಓದಿ: Karnataka Election 2023: ನಾನು ಫಿಟ್‌ ಇದ್ದೇನೆ, ನನ್ನೊಂದಿಗೆ ರನ್ನಿಂಗ್‌ ರೇಸ್‌ಗೆ ಬನ್ನಿ; ಮೋದಿಗೆ ಸಿದ್ದರಾಮಯ್ಯ ಸವಾಲು

ಈ ನನ್ನ ಆತ್ಮಹತ್ಯೆಗೂ, ಬೀಮೇಶ್ ನಾಯಕನಿಗೂ ಯಾವುದೇ ಸಂಬಂಧ ಇಲ್ಲ. ಬೀಮೇಶ್ ಮಾಮ ಇವತ್ತು ನೀ ಆಫೀಸಿಗೆ ಹೋದಾಗ ಹಾಲು‌ ಕಾಯಿಸಿದರೂ ಕುಡಿಯದೆ ಹೋಗಿರುವೆ. ಥ್ಯಾಂಕ್ ಯೂ ಸೋ ಮಚ್ ಬೀಮೇಶ್ ನನ್ನನ್ನು ಕ್ಷಮಿಸಿದ್ದಕ್ಕೆ, ನೀನು ತುಂಬ ದೊಡ್ಡ ವ್ಯಕ್ತಿ. ಆ ದೇವರು ನಿನಗೆ ಒಳ್ಳೆಯದು ಮಾಡಲಿ ಮುದ್ದು. ನೀ ಇನ್ನೂ ಸ್ಟ್ರಾಂಗ್ ಆಗಿ ಚೆನ್ನಾಗಿ ತಿನ್ನು, ನಾನು ನಿನ್ನ ಜತೆ ತುಂಬಾ ಖುಷಿಯಾಗಿದ್ದೆ. ಆ ಸಂತೋಷ ಎಲ್ಲ ನನಗೆ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.. I will miss you, May god bless you Dear, ನಮ್ಮ ಅಪ್ಪನಿಗೆ SORRY ಹೇಳು ಬೀಮೇಶ್, I am very sorry ಬೀಮೇಶ್ ನಿನ್ನನ್ನು ಜೈಲಿಗೆ ಕಳಿಸಿದ್ದಕ್ಕೆ. ಇಂತಿ‌ ನಿನ್ನ ಪ್ರೀತಿಯ ಆಯಿಶಾ ಬಿ.ಆರ್ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Exit mobile version