Site icon Vistara News

Murder Case : ವಿವಾಹಿತೆ ಹಿಂದೆ ಬಿದ್ದು ಬರ್ಬರವಾಗಿ ಕೊಲೆಯಾದ ಯುವಕ!

Chetan and shoba

ಆನೇಕಲ್: ಕಳೆದ ಅಕ್ಟೋಬರ್‌ 26ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮುಗಳೂರು ಬ್ರಿಡ್ಜ್‌ ಸಮೀಪದ ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಶವ (Murder Case) ಪತ್ತೆಯಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವೊಂದು ಸಿಕ್ಕಿದ್ದು, ವ್ಯಕ್ತಿಯ ಕೊಲೆಗೈದು ಹೊಳೆಗೆ ಎಸೆದಿರುವುದು ತನಿಖೆಯಿಂದ ತಿಳಿದು ಬಂದಿದೆ.

ಕೋಲಾರದ ಮಾಲೂರು ತಾಲೂಕಿನ ಅಯ್ಯಪ್ಪನಗರದ ನಿವಾಸಿ ಚೇತನ್ ಹತ್ಯೆಯಾದವನು. ದಕ್ಷಿಣ ಪಿನಾಕಿನಿ ಹೊಳೆಯಲ್ಲಿ ಚೇತನ್‌ ಮೃತದೇಹ ಪತ್ತೆಯಾಗಿತ್ತು. ಬ್ರಿಡ್ಜ್‌ನ ತಡೆಗೋಡೆ ಮೇಲೆ ರಕ್ತದ ಕಲೆಗಳು ಪತ್ತೆ ಆಗಿತ್ತು. ಯಾರೋ ದುಷ್ಕರ್ಮಿಗಳು ಕೊಲೆಗೈದು ಹೊಳೆಗೆ ಎಸೆದಿರುವ ಶಂಕೆಯು ವ್ಯಕ್ತವಾಗಿತ್ತು.

ಈ ಸಂಬಂಧ ಪೊಲೀಸರು ತನಿಖೆ ನಡೆಸಿದಾಗ ವಿವಾಹಿತ ಮಹಿಳೆಗಾಗಿ ಈ ಕೊಲೆ ನಡೆದಿದೆ ಎಂಬುದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಸರ್ಜಾಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸತೀಶ್, ಶಶಿ ಹಾಗೂ ಶೋಭಾ ಬಂಧಿತರು. ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಶಶಿ, ಶೋಭಾ, ಸತೀಶ್‌ ಆರೋಪಿಗಳು

ಇದನ್ನೂ ಓದಿ:ಹಾವೇರಿಯಲ್ಲಿ ಅತ್ತಿಗೆ, ಇಬ್ಬರು ಮಕ್ಕಳನ್ನು ಕೊಚ್ಚಿ ಕೊಂದ ಕಟುಕ; ಮಾಡಿದ ತಪ್ಪಾದರೂ ಏನು?

ಅಂದಹಾಗೆ ಆರೋಪಿ ಶೋಭಾ ಈ ಹಿಂದೆ ಅತ್ತಿಬೆಲೆ ಕೊಲೆ ಯತ್ನ ಪ್ರಕರಣದಲ್ಲಿ ಜೈಲಿಗೆ ಸೇರಿದ್ದಳು. ಪತಿ, ಅತ್ತೆ, ಮಾವರನ್ನು ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ್ದಳು. ಈ ಪ್ರಕರಣದಲ್ಲಿ ಜೈಲು ಸೇರಿ ಬೇಲ್ ಮೇಲೆ ರಿಲೀಸ್ ಆಗಿದ್ದಳು. ಜೈಲಿನಿಂದ ಹೊರಬಂದ ಮೇಲೆ ಟಿಸಿ ಪಾಳ್ಯದಲ್ಲಿ ವಾಸವಾಗಿದ್ದಳು. ಅಲ್ಲೇ ಸಲೂನ್ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು.

ಹೀಗಿದ್ದಾಗ 8 ತಿಂಗಳ ಹಿಂದೆ ಚೇತನ್‌ನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಈತನ ಜತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ನಡುವೆ ಕಳೆದ ಮೂರು ತಿಂಗಳ ಹಿಂದೆ ಶೋಭಾಳಿಗೆ ಸತೀಶ್ ಎಂಬಾತನ ಪರಿಚಯವಾಗಿತ್ತು. ಆತನ ಜತೆಗೂ ಪ್ರೇಮ ಪುರಾಣ ಶುರು ಮಾಡಿದ್ದಳು.

ಸತೀಶ್ ಹಣಕಾಸಿನ ವಿಚಾರದಲ್ಲಿ ಚೇತನ್‌ಕ್ಕಿಂತ ಹಣವಂತನಾಗಿದ್ದ. ಶೋಭಾಳಿಗಾಗಿ ಹೊಸದೊಂದು ಸಲೂನ್ ಬ್ಯೂಟಿ ಪಾರ್ಲರ್ ಮಾಡಿಕೊಡಲು ಸಿದ್ಧತೆ ನಡೆಸಿದ್ದ. ಈ ನಡುವೆ ಶೋಭಾ ಚೇತನ್‌ನಿಂದ ದೂರವಾಗಲು ನಿರ್ಧರಿಸಿದ್ದಳು. ಹೀಗಾಗಿ ಸತೀಶ್‌ ಜತೆಗೆ ನಾಟಕವಾಡಲು ಶುರು ಮಾಡಿದ್ದಳು. ಚೇತನ್ ತನ್ನ ಹಿಂದೆ ಬಿದ್ದು ಪೀಡಿಸುತ್ತಿದ್ದಾನೆ ಎಂದು ಕಥೆ ಕಟ್ಟಿದ್ದಳು.

ಸತೀಶ್‌ ಜತೆ ಸೇರಿ ಚೇತನ್ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಕಳೆದ ಅ.26ರಂದು ಹೊಸಕೋಟೆ ಐಶ್ವರ್ಯ ಬಾರ್‌ನಲ್ಲಿ ಎಣ್ಣೆ ಪಾರ್ಟಿ ಯೋಜಿಸಿದ್ದಳು. ಎಣ್ಣೆ ಪಾರ್ಟಿ ಮುಗಿಸಿ ಮಧ್ಯರಾತ್ರಿ 2 ಗಂಟೆಗೆ ಮುಗಳೂರು ಬಳಿ ಬಂದಾಗ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿ ಹೊಳೆಗೆ ಎಸೆದು ಹೋಗಿದ್ದರು.

ಪ್ರಕರಣ ದಾಖಲಿಸಿಕೊಂಡು ಅಪರಿಚಿತ ಶವದ ಗುರುತು ಪತ್ತೆ ಹಚ್ಚಿದ ಪೊಲೀಸರು ಶೋಭಾಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯಿಬಿಟ್ಟಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version