ಆನೇಕಲ್: ಜೈಲು ಕೈದಿಗಳು (Jail Inmates) ಅಕ್ರಮವಾಗಿ ಮೊಬೈಲ್ ಬಳಸಬಾರದು ಎಂಬ ಕಾರಣದಿಂದ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಹಾಕಿಸಲಾದ ಮೊಬೈಲ್ ಜಾಮರ್ (mobile jammer) ಈಗ ಇಡೀ ಏರಿಯಾಗೆ ಸಂಕಷ್ಟ ತಂದಿಟ್ಟಿದೆ. ಇಡೀ ಬಡಾವಣೆಯೇ ಈ ಜಾಮರ್‌ನಿಂದಾಗಿ ನೆಟ್‌ವರ್ಕ್ (mobile Network) ವಂಚಿತವಾಗಿದೆ.
ಕೈದಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಹಾಕಿದ ಜಾಮರ್‌ನಿಂದಾಗಿ ಜೈಲಿನ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ನೆಟ್‌ವರ್ಕ್ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಸ್ಥಳೀಯರಿಗೆ ಸಂಕಷ್ಟ ಉಂಟಾಗಿದ್ದು, ಜೈಲಿನ ಜೈಲಿನ ಸುತ್ತಮುತ್ತಲಿನ ವಾಸಿಗಳಿಗೆ ಜಾಮರ್ ಟೆನ್ಷನ್ ತಂದೊಡ್ಡಿದೆ.
ಸ್ಥಳೀಯರು ಎಮರ್ಜೆನ್ಸಿ ಕಾಲ್ ಮಾಡಬೇಕಾದರೂ ನೆಟ್‌ವರ್ಕ್ ಹುಡುಕುತ್ತಾ ಅರ್ಧ ಕಿ.ಮೀ ದೂರ ಸಾಗಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ನೆಟ್ವರ್ಕ್ ಸಮಸ್ಯೆ ತಪ್ಪಿದ್ದಲ್ಲ. ಆನ್ಲೈನ್ ಕ್ಲಾಸ್ ಇದ್ದರೆ ವಿದ್ಯಾರ್ಥಿಗಳು ಸ್ನೇಹಿತರು, ಸಂಬಂಧಿಕರ ಮನೆಗೆ ಅಲೆದಾಡುತ್ತಿದ್ದಾರೆ.
ಸ್ಥಳೀಯ ನಿವಾಸಿಗಳ ಜೊತೆ ಪರಪ್ಪನ ಅಗ್ರಹಾರ ಪೊಲೀಸರಿಗೂ ಜಾಮರ್ ಸಮಸ್ಯೆ ಉಂಟಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ನೆಟ್ವರ್ಕ್ ಸಮಸ್ಯೆ ಇದೆ. ಹೀಗಾಗಿ ಮೊಬೈಲ್ ಪೋನ್ ವರ್ಕ್ ಆಗದೆ ಲ್ಯಾಂಡ್ ಲೈನ್ ಬಳಕೆ ಮಾಡುತ್ತಿದ್ದಾರೆ.
ಜೈಲು ಅಧಿಕಾರಿಗಳಿಗೆ ಮನವಿ ಮಾಡಿದರೂ ಏನೂ ಪರಿಣಾಮವಾಗಿಲ್ಲ. ಜೈಲಿನಲ್ಲಿ ಪ್ರಭಾವಿ ಕೈದಿಗಳು ಮೊಬೈಲ್ ಅಕ್ರಮವಾಗಿ ಬಳಸಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಕಡಿವಾಣ ಹಾಕಲು ಜಾಮರ್ ಅಳವಡಿಕೆ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ಹೇಳುತ್ತಾರೆ. ಆದರೆ ಸಮಸ್ಯೆ ಅನುಭವಿಸುತ್ತಿರುವುದು ಮಾತ್ರ ಸ್ಥಳೀಯ ನಿವಾಸಿಗಳು. ಕಳೆದ ಒಂದು ವರ್ಷದಿಂದ ಮೊಬೈಲ್ ಜಾಮರ್ ಸಮಸ್ಯೆ ಇದೆ. ಮೊಬೈಲ್ ಜಾಮರ್ ಅನ್ನು ಜೈಲು ಆವರಣಕ್ಕೆ ಸೀಮಿತಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ವರ್ಕ್ ಫ್ರಂ ಹೋಮ್ ಆಮಿಷ, ಐಟಿ ಉದ್ಯೋಗಿಗೆ 4.33 ಲಕ್ಷ ರೂ. ವಂಚನೆ
ಬಳ್ಳಾರಿ: ವರ್ಕ್ ಪ್ರಮ್ ಹೋಂ ಜಾಬ್ ಹೆಸರಲ್ಲಿ ಬಳ್ಳಾರಿಯ ಐಟಿ ಉದ್ಯೋಗಿಯೊಬ್ಬರಿಗೆ 4.33 ಲಕ್ಷ ರೂ. ವಂಚಿಸಲಾಗಿದೆ. ಹೋಟೆಲ್ ಕಂಪನಿಯೊಂದರ ಹೆಸರಿನಲ್ಲಿ ಹೀಗೆ ವಂಚನೆ (Fraud Case) ಮಾಡಲಾಗಿದೆ.
ಬಳ್ಳಾರಿಯ ರವಿ ಎಂಬ ಯುವಕನಿಗೆ ಹೀಗೆ 4.33 ಲಕ್ಷ ದೋಖಾ ನಡೆದಿದೆ. ಮನೆಯಲ್ಲೇ ಕುಳಿತು ಹೋಟೆಲ್ ಬ್ಯುಸಿನೆಸ್ ಮಾಡಿ ಹಣ ಸಂಪಾದಿಸಿ ಎಂದು ಯುವಕನಿಗೆ ವಾಟ್ಸ್‌ಅ್ಯಪ್ ಮೆಸೇಜ್ ಬಂದಿತ್ತು. ಇದನ್ನು ನಂಬಿ ಮುಂದುವರಿದ ಯುವಕ, ಹಣ ಕಳೆದುಕೊಂಡಿದ್ದಾನೆ.
ಟೆಲಿಗ್ರಾಂ ಆಪ್ ಮೂಲಕ ವಂಚಕರು ಕಾರ್ಯಾಚರಿಸಿದ್ದಾರೆ. ರೋಹಿಣಿ ಸಿಯಾ ಎಂಬ ಹೆಸರಿನಿಂದ ಮಹಿಳೆಯೊಬ್ಬಳು ಮೋಸ ಎಸಗಿದ್ದಾಳೆ. ಹೋಟೆಲ್ ಕಂಪನಿ ಹೆಸರಿನಲ್ಲಿ ಟಾಸ್ಕ್ ಕೊಟ್ಟು ಹಂತ ಹಂತವಾಗಿ ಲಕ್ಷ ಲಕ್ಷ ಹಣ ಪೀಕಲಾಗಿದೆ. ದುರದೃಷ್ಟವಂತ ಯುವಕ ಒಂದೇ ದಿನದಲ್ಲಿ 4,33,000 ರೂ. ಹಣ ಕಳೆದುಕೊಂಡಿದ್ದಾನೆ.
ವಾಟ್ಸ್‌ಆಪ್‌ನಿಂದ ಬಂದ ಮೆಸೇಜ್ ಮೂಲಕ ಟೆಲಿಗ್ರಾಂಂನಲ್ಲಿದ್ದ ಬಿಸಿನೆಸ್ ಗ್ರೂಪ್‌ಗೆ ಯುವಕ ಸೇರಿದ್ದಾನೆ. ಟಿಲಿಗ್ರಾಂಂನಲ್ಲಿ ಟಾಸ್ಕ್ ಕೊಟ್ಟ ವಂಚಕರು, ಮನೆಯಿಂದಲೇ ಕೆಲಸ ಮಾಡಿ ಎಂದು ಪ್ರಚೋದಿಸಿದ್ದಾರೆ. ತಮ್ಮ ಕಂಪನಿಗೆ ರೇಟಿಂಗ್ ಮತ್ತು ರಿವ್ಯೂ ಕೊಟ್ರೆ ನಿತ್ಯ 6000 ರೂ. ನೀಡುವುದಾಗಿ ಲಾಭದ ಭರವಸೆ ನೀಡಿದ್ದಾರೆ. ಟಾಸ್ಕ್ ಕಂಪ್ಲೀಟ್ ಮಾಡಲು, ತೆರಿಗೆ ವೆಚ್ಚ ಇತ್ಯಾದಿ ಎಂದು ಯುಪಿಐ ಮೂಲಕ ಮೂರು ಬ್ಯಾಂಕ್ ಖಾತೆಗಳಿಗೆ 4.33 ಲಕ್ಷ ಪಡೆದುಕೊಂಡಿದ್ದಾರೆ.
ಲಾಭಾಂಶ ಪಡೆಯಬೇಕಾದರೆ ಮತ್ತೆ 1.80 ಲಕ್ಷ ʼತೆರಿಗೆʼ ನೀಡುವಂತೆ ರವಿಗೆ ಸೂಚನೆ ನೀಡಿದ್ದಾರೆ. ಉದ್ಯೋಗವೂ ಇಲ್ಲದೆ, ಹಣವೂ ಇಲ್ಲದೆ ಕಂಗಾಲಾದ IT ಉದ್ಯೋಗಿ ರವಿ, ಇದೀಗ ಮೋಸದ ಕುರಿತು ಬಳ್ಳಾರಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಸೈಬರ್ ಖದೀಮರು ಕಳೆದ ಒಂದು ವರ್ಷದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿಯೇ 3 ಕೋಟಿ ರೂ. ಹಣ ಗುಳುಂ ಮಾಡಿದ್ದಾರೆ ಎನ್ನಲಾಗಿದೆ. ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸುವ ಆಕರ್ಷಕ ಆಫರ್ ಅನ್ನು ನಂಬಿ ಆನ್‌ಲೈನ್‌ನಲ್ಲಿ ಮುಂದುವರಿಯಬಾರದು ಎಂದು ಸೈಬರ್ ಪೊಲೀಸರು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Central Jail: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೊಲೆಗಾರನ ಭರ್ಜರಿ ಬರ್ತ್‌ಡೇ ಸೆಲೆಬ್ರೇಶನ್!