Site icon Vistara News

Road Accident: ಬನ್ನೇರುಘಟ್ಟ ಪಾರ್ಕ್‌ನಲ್ಲಿ ಬ್ಯಾಟರಿ ಚಾಲಿತ ವಾಹನಕ್ಕೆ ಸಿಲುಕಿದ ಮಗು!

bannerghatta zoo Road Accident

ಬನ್ನೇರುಘಟ್ಟ: ಪ್ರವಾಸಕ್ಕೆಂದು ಕುಟುಂಬಸ್ಥರೊಂದಿಗೆ ಬಂದಿದ್ದ ಮಗುವೊಂದು ಬ್ಯಾಟರಿ ಚಾಲಿತ ವಾಹನಕ್ಕೆ ಸಿಲುಕಿ ಗಂಭೀರ (Road Accident) ಗಾಯಗೊಂಡಿರುವ ದಾರುಣ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ (bannerghatta zoo) ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಈ ಅಪಘಾತ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತ್ರಿಧರ್ (3) ಅಪಘಾತಕ್ಕೊಳಗಾದ ಮಗು.

ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಿಜಾಪುರ ಮೂಲದ ಕುಟುಂಬವೊಂದು ಬಂದಿತ್ತು. ಝೂನ ರಸ್ತೆ ಬದಿಯಲ್ಲಿ ತ್ರಿಧರ್‌ ತನ್ನ ತಾಯಿ ಜತೆ ನಿಂತಿದ್ದ. ಎಂದಿನಂತೆ ಪ್ರವಾಸಿಗರನ್ನು ಕೂರಿಸಿಕೊಂಡು ಬ್ಯಾಟರಿ ಚಾಲಿತ ವಾಹನಗಳು ಸಂಚಾರ ಮಾಡುತ್ತಿದ್ದವು.

ಆಟವಾಡುತ್ತಿದ್ದ ತ್ರಿಧರ್‌ ಬ್ಯಾಟರಿ ಚಾಲಿತ ವಾಹನವು ಬರುವಾಗಲೇ ಏಕಾಏಕಿ ರಸ್ತೆಗೆ ಓಡಿ ಬಂದಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಬ್ಯಾಟರಿ ಚಾಲಿತ ವಾಹನಕ್ಕೆ ಸಿಲುಕಿದ್ದ. ಕೂಡಲೇ ಚಕ್ರದಡಿ ಸಿಲುಕಿದ್ದ ಮಗುವನ್ನು ಅಲ್ಲಿದ್ದವರು ಹೊರತೆಗೆದಿದ್ದಾರೆ. ಗಂಭೀರ ಗಾಯಗೊಂಡಿದ್ದ ತ್ರಿಧರ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಸದ್ಯ ರೈಂಬೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಮಗುವಿನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನವೇ ಬರಿಸುತ್ತಿದೆ.

ಇದನ್ನೂ ಓದಿ: Bangalore Airport : ಏರ್‌ ಪೋರ್ಟ್‌ನಲ್ಲಿ ಚೆಕ್ಕಿಂಗ್‌ ವೇಳೆ ಬಾಂಬ್‌ ಇದೆ ಎಂದು ಜೋಕ್‌ ಮಾಡಿದ ಭೂಪ ಅರೆಸ್ಟ್‌

ಮದುವೆ ವಿಚಾರದಲ್ಲಿ ಜಗಳ; ಬಾವಿಗೆ ಹಾರಿ ಅಣ್ಣ-ತಂಗಿ ದಾರುಣ ಸಾವು

ಕಲಬುರಗಿ: ಮನೆಯಲ್ಲಿ ಮದುವೆ ವಿಚಾರದಲ್ಲಿ (Marriage issue) ನಡೆದ ಸಣ್ಣ ಜಗಳ ಅಣ್ಣ-ತಂಗಿಯ ಸಾವಿಗೆ (Self Harming) ಕಾರಣವಾಗಿದೆ. ಕಲಬುರಗಿ ಜಿಲ್ಲೆಯ (Kalaburagi News) ಚಿಂಚೋಳಿ ತಾಲ್ಲೂಕಿನ ಪಟಪಳ್ಳಿ ಗ್ರಾಮದಲಿ ಅಣ್ಣ ಮತ್ತು ತಂಗಿ ಬಾವಿಗೆ ಬಿದ್ದು ಪ್ರಾಣ (Brother and Sister death) ಕಳೆದುಕೊಂಡಿದ್ದಾರೆ.

ಸಂದೀಪ್ (23) ಮತ್ತು ನಂದಿನಿ‌ (19) ಎಂಬ ಅಣ್ಣ-ತಂಗಿಯೇ ಪ್ರಾಣ ಕಳೆದುಕೊಂಡವರು. ನಂದಿನಿಯ ಮದುವೆ ವಿಚಾರದಲ್ಲಿ ಮನೆಯಲ್ಲಿ ಗಲಾಟೆ ನಡೆದಿತ್ತು. ಅದರಲ್ಲೂ ಮುಖ್ಯವಾಗಿ ಮನೆಯವರು ಹೇಳಿದ್ದ ಹುಡುಗನನ್ನು ಮದುವೆ ಮಾಡಿಕೊಳ್ಳುವ ವಿಚಾರದಲ್ಲಿ ನಂದಿನಿ ಆಕ್ಷೇಪ ವ್ಯಕ್ತಪಡಿಸಿದ್ದಳು.

ಮಾತಿಗೆ ಮಾತು ಬೆಳೆದು ಸಿಟ್ಟುಗೊಂಡ ನಂದಿನಿ ಮನೆಯಿಂದ ಹೊರಗೆ ಓಡಿಹೋಗಿ ಬಾವಿಗೆ ಹಾರಿದ್ದಳು. ಇದನ್ನೂ ನೋಡಿದ ಸಹೋದರ ಸಂದೀಪ್‌ ಆಕೆಯನ್ನು ಬೆನ್ನು ಹತ್ತಿ ಹೋಗಿದ್ದ. ಆದರೆ, ಆತನಿಗೆ ಅವಳನ್ನು ತಡೆಯಲು ಸಾಧ್ಯವಾಗಲಿಲ್ಲ. ಏನು ಮಾಡಬೇಕು ಎಂದು ತೋಚದೆ ಆತನೂ ಬಾವಿಗೆ ಹಾರಿದ್ದಾನೆ.

ಕೊನೆಗೆ ಈಜು ಬಾರದೆ ಅಣ್ಣ ತಂಗಿಯಿಬ್ಬರೂ ಬಾವಿಯಲ್ಲಿ ಮುಳಗಿ ಸಾವು ಕಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಊರಿನವರು ಆಗಮಿಸಿ ಶವಗಳನ್ನು ಮೇಲೆತ್ತಿದ್ದಾರೆ. ಪಟಪಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿರುವ ಘಟನೆಗೆ ಸಂಬಂಧಿಸಿ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version