Site icon Vistara News

Suspicious Death : ಕೋಳಿ ಫಾರಂ‌ನಲ್ಲಿ ಮಲಗಿದ್ದಲೇ ನಾಲ್ವರ ನಿಗೂಢ ಸಾವು!

Police visit Poultry Farm

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಸಮೀಪದ ಹೊಲೆಯರಹಳ್ಳಿಯಲ್ಲಿರುವ ಕೋಳಿ ಫಾರಂನಲ್ಲಿ (Poultry Farm) ಅನುಮಾನಾಸ್ಪದ ರೀತಿಯಲ್ಲಿ (Suspicious Death) ನಾಲ್ವರು ಮೃತಪಟ್ಟಿದ್ದಾರೆ. ಕಾಲೇ ಸರೇರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40), ಪೂಲ್ ಸರೇರಾ(16) ಮೃತ ದುರ್ದೈವಿಗಳು.

ಪಶ್ಚಿಮ ಬಂಗಾಳ ಮೂಲದ ಈ ನಾಲ್ವರು ಒಂದೇ ಕುಟುಂಬದವರಾಗಿದ್ದು, 8 ದಿನಗಳ ಹಿಂದಷ್ಟೇ ಕೆಲಸಕ್ಕಾಗಿ ಕೋಳಿ ಫಾರಂಗೆ ಬಂದಿದ್ದರು. ಶನಿವಾರ ರಾತ್ರಿ ಎಲ್ಲರೂ ಒಟ್ಟಿಗೆ ಊಟ ಮಾಡಿ ಮಲಗಿದವರು, ಬೆಳಗ್ಗೆ ಹೆಣವಾಗಿ ಪತ್ತೆಯಾಗಿದ್ದಾರೆ. ಮನೆಯಿಂದ ಹೊರಗೆ ಬಾರದೆ ಇದ್ದಾಗ ಸ್ಥಳೀಯರು ಅನುಮಾನಗೊಂಡು ನೋಡಿದಾಗ ನಾಲ್ವರು ಮಲಗಿದ್ದಲೇ ಮೃತಪಟ್ಟಿರುವುದು ತಿಳಿದು ಬಂದಿದೆ.

ಇದನ್ನೂ ಓದಿ: Mysore Expressway: ಮೈಸೂರು ‘ಡೆಡ್ಲಿ’ ಹೆದ್ದಾರಿಯಲ್ಲಿ ಮತ್ತೊಂದು ಅಪಘಾತ; ಒಬ್ಬನ ಸಾವು, ನಾಲ್ವರಿಗೆ ಗಾಯ

ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವುದು ನಾನಾ ಅನುಮಾನಗಳನ್ನು ಮೂಡಿಸಿದೆ. ನಾಲ್ವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ನೇಪಾಳ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿದ್ದರಾ ಅಥವಾ ಯಾರಾದರೂ ಹತ್ಯೆ ಮಾಡಿದ್ದರಾ? ಎಂಬುದರ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ದೊಡ್ಡಬೆಳವಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸೊಳ್ಳೆ ಕಾಟಕ್ಕೆ ಹಾರಿಹೋಯ್ತಾ ಪ್ರಾಣಪಕ್ಷಿ!

ಕೋಳಿ ಫಾರಂನಲ್ಲಿ ಸೊಳ್ಳೆ ಕಾಟ ಹೆಚ್ಚಾಗಿತ್ತು. ರಾತ್ರಿ ಹೊತ್ತು ನಿದ್ದೆ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ರೂಮಿನೊಳಗೆ ಇದ್ದಿಲಿನಿಂದ ಹೊಗೆ ಹಾಕಿಕೊಂಡು ಮಲಗಿದ್ದಾರೆ. ಹೊಗೆ ದಟ್ಟವಾಗಿ ಆವರಿಸಿದ ಹಿನ್ನೆಲೆ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಕೊಠಡಿಯಲ್ಲಿ ಕಿಟಕಿ ಬಾಗಿಲು ಬಂದ್ ಆಗಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಈಗಲು ಕೊಠಡಿ ಒಳಗಡೆ ಹೊಗೆ ತುಂಬಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ‌ ಭೇಟಿ ನೀಡಿದ್ದು, ಎಫ್‌ಎಸ್ಎಲ್ ಹಾಗೂ ಕ್ರೈಂ ಸೀನ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version