ಪರಪ್ಪನ ಅಗ್ರಹಾರ: ನೀರಿನ ತೊಟ್ಟಿ ಕ್ಲೀನ್ ಮಾಡಲು ಇಳಿದ ವೇಳೆ ಉಸಿರುಗಟ್ಟಿ ಇಬ್ಬರು ಕಾರ್ಮಿಕರು (Labourers Death) ಸಾವಿಗೀಡಾಗಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೆರಟೇನ ಅಗ್ರಹಾರದಲ್ಲಿ ಘಟನೆ ನಡೆದಿದೆ.
ಬೆರಟೇನ ಅಗ್ರಹಾರದ ಶಾಹಿ ಗಾರ್ಮೆಂಟ್ಸ್‌ನಲ್ಲಿ ಈ ಘಟನೆ ನಡೆದಿದ್ದು, ಸಂಪ್ ಕ್ಲೀನ್ ಮಾಡುವ ವೇಳೆ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರು ತಮಿಳುನಾಡು ಮೂಲದ ಶಶಿಕುಮಾರ್ (51) ಮತ್ತು ಆಂಧ್ರ ಮೂಲದ ಆನಂದ್ (41) ಎಂದು ಗುರುತಿಸಲಾಗಿದೆ.
ಇವರಿಬ್ಬರೂ ಸಂಜೆ ಶಾಹಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಸಂಪ್ ಕ್ಲೀನ್ ಮಾಡಲು ಇಳಿದಿದ್ದರು. ಈ ವೇಳೆ ಉಸಿರುಗಟ್ಟಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೆಲವು ದಿನಗಳ ಹಿಂದೆ ಆನೇಕಲ್ ತಾಲೂಕಿನ ಶಿಕಾರಿಪಾಳ್ಯದ ವಾಜಪೇಯಿ ಸರ್ಕಲ್ ಬಳಿಯ ಕಾರ್ಖಾನೆಯಲ್ಲಿ ನೀರಿನ ಸಂಪ್ ಸ್ವಚ್ಛತೆಗಿಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿದ್ದರು. ಆ ವೇಳೆ ಕಾರ್ಮಿಕರನ್ನು ರಕ್ಷಣೆ ಮಾಡಲು ಹೋಗಿ ಅಸ್ವಸ್ಥಗೊಂಡ ಕಂಪನಿ ಮಾಲೀಕ ಹಾಗೂ ಮತ್ತೊಬ್ಬ ಕಾರ್ಮಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಬಿಹಾರ ಮೂಲದ ಕಾರ್ಮಿಕರಾದ ಚಂದನ್ ರಜ್ ಬನ್ ಸಿಂಗ್(31), ಪಿಂಟು ರಜ್ ಬನ್ ಸಿಂಗ್(22) ಮೃತಪಟ್ಟಿದ್ದರು. ಶ್ರೀನಿವಾಸ್ ರೆಡ್ಡಿ ಎಂಬುವವರ ಸನ್‌ಶೈನ್ ಹೋಲ್ಡಿಂಗ್ ಕಂಪನಿಯಲ್ಲಿ ದುರ್ಘಟನೆ ನಡೆದಿತ್ತು. ಆ್ಯಸಿಡ್ ಹಾಕಿ ಸ್ವಚ್ಛಗೊಳಿಸುತ್ತಿದ್ದಾಗ ಉಸಿರುಗಟ್ಟಿ ಕಾರ್ಮಿಕರು ಮೃತಪಟ್ಟಿದ್ದರು. ಮೃತರು ಸಹೋದರರಾಗಿದ್ದು, ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಇವರನ್ನು ಉಳಿಸಲು ಮುಂದಾಗಿದ್ದ ಜಗದೀಶ್ ಹಾಗೂ ಮಾಲೀಕ ಶ್ರೀನಿವಾಸ್ ರೆಡ್ಡಿ ಅಸ್ವಸ್ಥಗೊಂಡಿದ್ದರು.
ಇದನ್ನೂ ಓದಿ: Child death : ಆಟವಾಡುತ್ತಾ ಸಂಪ್‌ಗೆ ಬಿದ್ದ 5 ವರ್ಷದ ಬಾಲಕಿ ಸಾವು