Site icon Vistara News

ಹಿರಿಯ ಭೂ ವಿಜ್ಞಾನಿ ಆರ್‌ ಎಚ್‌ ಸಾವ್ಕಾರ್ ಇನ್ನಿಲ್ಲ

ಭೂ ವಿಜ್ಞಾನಿ

ಬೆಂಗಳೂರು: ರಾಜ್ಯದ ಗಣಿ ಉದ್ಯಮದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದ ಹಿರಿಯ ಗಣಿ ಮತ್ತು ಭೂ ವಿಜ್ಞಾನಿ ಆರ್‌ ಎಚ್ ಸಾವ್ಕಾರ್ ನಿಧನಕ್ಕೆ ಅನೇಕರು ಕಂಬನಿ ಮಿಡಿದ್ದಾರೆ. “ಭೂ ವಿಜ್ಞಾನ, ಗಣಿಗಾರಿಕೆ, ನೀರಿನ ಬಳಕೆ ವಿಷಯದಲ್ಲಿ ಅವರಿಗಿದ್ದ ಜ್ಞಾನ ಅಪಾರವಾದದು. ಇದರ ನಿಧನದಿಂದಾಗಿ ಈ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆʼʼ ಎಂದು ಅನೇಕ ವಿಜ್ಞಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ.

ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ 1959ರಿಂದ ಸೇವೆ ಸಲ್ಲಿಸಿದ್ದ ಆರ್‌ ಎಚ್‌ ಸಾವ್ಕಾರ್‌ ಬುಧವಾರ ನಗರದ ಜಯನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾಗಿದ್ದರು. ನಿವೃತ್ತರಾದ ನಂತರವೂ ಕ್ರಿಯಾಶೀಲವಾಗಿದ್ದ ಅವರು, ಗಣಿಗಾರಿಕಾ ಕ್ಷೇತ್ರದಲ್ಲಿ ಅಪಾರವಾದ ಹೆಸರು ಸಂಪಾದಿಸಿದ್ದರು.

ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ, ಮೈಸೂರು ಮಿನರಲ್ಸ್‌, ಚಿತ್ರದುರ್ಗ ಕಾಪರ್‌ ಕಂಪನಿ, ಹಟ್ಟಿ ಗೋಲ್ಡ್‌ ಮೈನ್ಸ್‌ ಲಿ, ವಿಜಯನಗರ ಸ್ಟೀಲ್‌ ಪ್ಲಾಂಟ್‌ನಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಖನಿಜ ಪತ್ತೆ ಹಚ್ಚುವುದರಲ್ಲಿ ವಿಶೇಷ ಪರಿಣಿತಿ ಹೊಂದಿದ್ದ ಸಾವ್ಕಾರ್‌, ಈ ಬಗ್ಗೆ ಕಿರಿಯರಿಗೆ ತರಬೇತಿ ನೀಡುತ್ತಿದ್ದರು. ದೇಶದ ಬಹುತೇಕ ಎಲ್ಲ ವೈಜ್ಞಾನಿಕ ಸಂಸ್ಥೆಗಳ ಸಹವರ್ತಿಯಾಗಿದ್ದರು. ಸದ್ಯ ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಕಾರ್ಯದರ್ಶಿ ಯಾಗಿದ್ದರು. ಅಲ್ಲದೆ ಈ ಸೊಸೈಟಿಯು ಪ್ರಕಟಿಸಿದ ಜರ್ನಲ್‌ನ ಪ್ರಕಾಶರಾಗಿದ್ದರು.

ಎಂಇಎಐ ಬೆಂಗಳೂರು ಚಾಪ್ಟರ್‌ನ ಮಾಜಿ ಅಧ್ಯಕ್ಷರಾಗಿದ್ದ ಸಾವ್ಕಾರ್‌, ನೀರಿನ ಕುರಿತು ಕೆಲಸ ಮಾಡುತ್ತಿರುವ ರಾಜೇಂದ್ರಸಿಂಗ್‌ ಅವರ ಜಲ್‌ಬಿರಾದರಿಯ ಕರ್ನಾಟಕದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು. ಅಣೆಕಟ್ಟು ಸುರಕ್ಷತಾ ಸಮಿತಿಯ ಸದಸ್ಯರಾಗಿದ್ದರು. ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಜ್ಞಾನದ ವಿಚಾರ ಸಂಕಿರಣ, ಸಮ್ಮೇಳನ, ಸಮಾವೇಶದಲ್ಲಿ ಭಾಗವಹಿಸಿದ್ದರು.

ಜಿಯೊಲಾಜಿಕಲ್‌ ಸೊಸೈಟಿ ಆಫ್‌ ಇಂಡಿಯಾದಲ್ಲಿ ರಾಜ್ಯವನ್ನು ಹಲವಾರು ವರ್ಷ ಪ್ರತಿನಿಧಿಸಿದ್ದ ಅವರಿಗೆ ರಾಜ್ಯದ ಭೂರಚನೆಯ ಸಂಪೂರ್ಣ ಮಾಹಿತಿ ಇತ್ತು. ನೀರಿನ ಸಂರಕ್ಷಣೆಗೆ ಅಪಾರ ಕೊಡುಗೆ ನೀಡುತ್ತಿದ್ದ, ಭೂ ತಾಪಮಾನ ಏರಿಕೆಯಿಂದಾಗಿ ಆಗುತ್ತಿರುವ ಹವಾಮಾನ ವೈಫರಿತ್ಯದ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದ ಅವರ ನಿಧನದಿಂದಾಗಿ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.

ಇದನ್ನೂ ಓದಿ| ಬಿಹಾರದಲ್ಲೊಂದು KGF !: ಅನ್ವೇಷಣೆ ಮಾಡಲು ಸರ್ಕಾರ ಅನುಮತಿ

Exit mobile version