Site icon Vistara News

Bengaluru Strike: ಖಾಸಗಿ ಸಾರಿಗೆ ಮುಷ್ಕರ ಎಚ್ಚರಿಕೆ; ಜು.24ಕ್ಕೆ ರಾಮಲಿಂಗಾರೆಡ್ಡಿ ಸಭೆ

Auto and Private bus

ಬೆಂಗಳೂರು: ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ಹಾಗೂ ಬಾಡಿಗೆ ಆಟೋಗಳಿಗೆ ಪ್ರಯಾಣಿಕರ ಕೊರತೆ ಏರ್ಪಟ್ಟಿದೆ. ಹೀಗಾಗಿ ಭಾರಿ ನಷ್ಟ ಅನುಭವಿಸುವಂತಾಗಿದೆ ಎಂದು ಅಸಮಾಧಾನ ಹೊರಹಾಕಿರುವ ಖಾಸಗಿ ಬಸ್‌ ಮಾಲೀಕರು, ಟ್ಯಾಕ್ಸಿ ಹಾಗೂ ಆಟೋ ಚಾಲಕರ ಸಂಘಟನೆಗಳು ಜುಲೈ 27ರಂದು ಬೆಂಗಳೂರು ಮುಷ್ಕರಕ್ಕೆ (Bengaluru Strike) ಕರೆ ನೀಡಿವೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ, 35 ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಜುಲೈ 24ರಂದು ನಗರದಲ್ಲಿ ಸಭೆ ಕರೆದಿದೆ.

ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಆರ್‌ಟಿಒ ಕಮಿಷನರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಭಾಗವಹಿಸಲಿದ್ದಾರೆ. ಟ್ಯಾಕ್ಸಿ, ಆಟೋ ಹಾಗೂ ಖಾಸಗಿ ಬಸ್ ಮಾಲೀಕರು, ಚಾಲಕರ ಅಹವಾಲುಗಳಲ್ಲಿ ಸಾರಿಗೆ ಸಚಿವರು ಆಲಿಸಲಿದ್ದಾರೆ.

ಇದನ್ನೂ ಓದಿ | NICE Road : ʼನೈಸ್ʼ ಕರ್ಮಕಥೆ ಪಾರಾಯಣ ಮಾಡಿ; ಸಿಎಂ ಸಿದ್ದರಾಮಯ್ಯ ಏಟಿಗೆ ಎಚ್‌ಡಿಕೆ ಎದಿರೇಟು!

ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಮನವೊಲಿಕೆಗೆ ಸಾರಿಗೆ ಇಲಾಖೆ ಮುಂದಾಗಿದೆ. ಆದರೆ, ಶಕ್ತಿ ಯೋಜನೆ ಬಳಿಕ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಖಾಸಗಿ ಬಸ್, ಆಟೋ, ಟ್ಯಾಕ್ಸಿಗೆ ಪ್ರಯಾಣಿಕರ ಕೊರತೆ ಉಂಟಾಗಿರುವುದರಿಂದ ಪರಿಹಾರ ಕೊಡಬೇಕು ಎಂದು ಒಕ್ಕೂಟ ಒತ್ತಾಯ ಮಾಡಿದೆ. ಪರಿಹಾರ ನೀಡದಿದ್ದಲ್ಲಿ ಮುಷ್ಕರ ಖಚಿತ ಎಂದು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮನವೊಲಿಸಲು ಸಾರಿಗೆ ಇಲಾಖೆ ಸಭೆ ಕರೆದಿದೆ. ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಷ್ಕರದ ಬಗ್ಗೆ ಒಕ್ಕೂಟವು ಸೋಮವಾರ ಅಂತಿಮ ನಿರ್ಧಾರ ಪ್ರಕಟಿಸಲಿದೆ.

Exit mobile version