ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ 25ನೇ ವರ್ಷದ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ(BTS 2022), ಐದು ಹೆಗ್ಗುರಿಗಳ ಘೋಷಣೆಗಳೊಂದಿಗೆ ಶುಕ್ರವಾರ ತೆರೆ ಬಿದ್ದಿತು. ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, ಸರ್ಕಾರದ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರ ಸಮ್ಮುಖದಲ್ಲಿ ಐದು ಘೋಷಣೆಗಳನ್ನು ಘೋಷಿಸಿದರು.
ʼನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಟಾರ್ಟಪ್ ಪಾರ್ಕ್, 50 ಕಾಲೇಜುಗಳಲ್ಲಿ ಆಧುನಿಕ ತಾಂತ್ರಿಕ ಪ್ರಯೋಗಾಲಯಗಳು, ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರ ಕೇಂದ್ರಗಳ ಆರಂಭ, ಶಿಕ್ಷಣ ಸಂಸ್ಥೆಗಳು ಮತ್ತು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಕಂಪನಿಗಳ ನಡುವೆ ಗಾಢ ಸಂಬಂಧ ಮತ್ತು ಶೈಕ್ಷಣಿಕ ಸಂಸ್ಥೆಗಳು ಹಾಗೂ ಸಂಶೋಧನಾ ಸಂಸ್ಥೆಗಳ ನಡುವೆ ನಿಕಟ ಬಾಂಧವ್ಯʼ ಷೋಷಣೆಗಳು ಸಮಾವೇಶದ ಐದು ಹೆಗ್ಗುರಿಗಳಾಗಿವೆ.
ನಂತರ ಮಾತನಾಡಿದ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಒಟ್ಟು 32 ದೇಶಗಳು ಪಾಲ್ಗೊಂಡಿದ್ದ ಸಮಾವೇಶದಲ್ಲಿ 4.52 ಲಕ್ಷ ಜನ ಸಕ್ರಿಯವಾಗಿ ಪಾಲ್ಗೊಂಡಿದ್ದು, ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ 4.99 ಕೋಟಿ ಜನರನ್ನು ತಲುಪಿದೆ. ಪ್ರದರ್ಶನ ಮಳಿಗೆಗಳಿಗೆ 50 ಸಾವಿರ ಜನರು ಭೇಟಿ ನೀಡಿದ್ದು, 26 ಸಾವಿರ ನೋಂದಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜತೆಗೆ ವಿವಿಧ ನವೋದ್ಯಮಗಳ 28 ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಮೂರು ದೇಶಗಳ ಉನ್ನತ ಮಟ್ಟದ ಸಚಿವರ ನಿಯೋಗಗಳು ಮತ್ತು ಒಂಬತ್ತು ರಾಷ್ಟ್ರಗಳ ಉನ್ನತ ನಿಯೋಗಗಳು ಸಮಾವೇಶದಲ್ಲಿ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದು, ಹೂಡಿಕೆಗೆ ಆಸಕ್ತಿ ವ್ಯಕ್ತಪಡಿಸಿವೆ. ಇದಲ್ಲದೆ, ಒಟ್ಟು 12 ಒಡಂಬಡಿಕೆಗಳಿಗೆ ಸಮಾವೇಶದಲ್ಲಿ ಅಂಕಿತ ಹಾಕಲಾಗಿದೆ ಎಂದು ಅವರು ನುಡಿದರು.
ಕೆಂಪೇಗೌಡರು ಕಟ್ಟಿದ ಬೆಂಗಳೂರು ಪ್ರಗತಿಯ ಸಂಕೇತವಾಗಿದ್ದು, 500 ವರ್ಷಗಳ ನಂತರವೂ ನಿರಂತರವಾಗಿ ಅದೇ ಹಾದಿಯಲ್ಲಿ ಸಾಗುತ್ತಿದೆ. ಎರಡು ವಾರಗಳ ಹಿಂದೆ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ‘ಕಾಂತಾರ’ ಸಿನಿಮಾ ಬಗ್ಗೆ ಉಲ್ಲೇಖಿಸಿದ್ದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಬಿಟಿಎಸ್ ಸಮಾರೋಪದಲ್ಲಿ ‘ಪ್ರಗತಿಯ ಪ್ರತಿಮೆ’ ಬಗ್ಗೆ ಉಲ್ಲೇಖಿಸಿದ್ದಾರೆ. ಇವೆರಡೂ ಕನ್ನಡಿಗರ ಹೃದಯಕ್ಕೆ ಹತ್ತಿರವಾದ ಸಂಗತಿಗಳಾಗಿವೆ ಎಂದು ಸಚಿವರು ಹೇಳಿದರು.
ಯೂನಿಕಾರ್ನ್, ಡೆಕಾಕಾರ್ನ್‌ಗಳಿಗೆ ಗೌರವ ಪುರಸ್ಕಾರ
ತಂತ್ರಜ್ಞಾನ ಸಮಾವೇಶದ ಸಮಾರೋಪದಲ್ಲಿ ಬೆಂಗಳೂರಿನಲ್ಲಿ ನೆಲೆಯೂರಿರುವ ಯೂನಿಕಾರ್ನ್ ನವೋದ್ಯಮಗಳಾದ ನೋ ಬ್ರೋಕರ್, ಅಮಗಿ ಮೀಡಿಯಾ ಲ್ಯಾಬ್ಸ್, ಓಪನ್ ಫೈನಾನ್ಶಿಯಲ್ ಟೆಕ್ನಾಲಜೀಸ್, ಲೀಡ್ ಸ್ಕ್ವೇರ್ಡ್, ಡೀಲ್ ಶೇರ್, ಅಕೋ ಜನರಲ್ ಇನ್ಶೂರೆನ್ಸ್, ಮೆನ್ಸಾ ಬ್ರಾಂಡ್ಸ್ ಮತ್ತು ಲೈವ್ ಸ್ಪೇಸ್ ಕಂಪನಿಗಳಿಗೆ ‘ಯೂನಿಕಾರ್ನ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಹಾಗೆಯೇ, 10 ಶತಕೋಟಿ ಡಾಲರ್ ಮೌಲ್ಯದ ಡೆಕಾಕಾರ್ನ್ ಕಂಪನಿಗಳಾದ ಫ್ಲಿಪ್‌ಕಾರ್ಟ್, ಬೈಜೂಸ್ ಮತ್ತು ಸ್ವಿಗ್ಗಿಗಳನ್ನೂ ಪುರಸ್ಕರಿಸಲಾಯಿತು. ಉಳಿದಂತೆ, ನೇಚರ್ ಕ್ರಾಪ್ ಕೇರ್ (ವರ್ಷದ ನವೋದ್ಯಮ), ಸ್ಟೆಂಪ್ಯೂಟಿಕ್ಸ್ ರೀಸರ್ಚ್ (ವರ್ಷದ ನಾವೀನ್ಯತೆ), ಮೋಕ್ಸಾ ಹೆಲ್ತ್‌ನ ಅಂಕಿತಾ ಕುಮಾರ್ (ವರ್ಷದ ಮಹಿಳಾ ಉದ್ಯಮಿ), ಸೆಂಟರ್ ಫಾರ್ ಇನ್ಕ್ಯುಬೇಷನ್, ಇನ್ನೋವೇಷನ್ ರೀಸರ್ಚ್ ಆ್ಯಂಡ್ ಕನ್ಸಲ್ಟೆನ್ಸಿ (ಅತ್ಯುತ್ತಮ ಸಾಮಾಜಿಕ ಪರಿಣಾಮ) ಮತ್ತು ಬ್ಲ್ಯಾಕ್‌ಫ್ರಾಗ್ ಟೆಕ್ನಾಲಜೀಸ್ (ಕೋವಿಡ್ ನಿಗ್ರಹಕ್ಕೆ ಅತ್ಯುತ್ತಮ ಸಾಧನ ಅಭಿವೃದ್ಧಿ) ಕಂಪನಿಗಳಿಗೆ ‘ಸ್ಮಾರ್ಟ್ ಬಯೋ’ ಪ್ರಶಸ್ತಿಗಳನ್ನು ಕೊಡಲಾಯಿತು.
ಇದನ್ನೂ ಓದಿ | BTS 2022 | ಬೆಂಗಳೂರಿನಿಂದಾಚೆಗೆ ಉದ್ದಿಮೆಗಳ ಬೆಳವಣಿಗೆಗೆ ಆದ್ಯತೆ, ವರದಿ ಬಿಡುಗಡೆ