ಬೆಂಗಳೂರು ಭಾರತದ ಹೆಮ್ಮೆಯ ನಗರ. ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ಟೆಕ್ ಸಿಟಿ ಎನ್ನುವಂತಹ ಹಲವಾರು (Bangalore Tourist Places) ಹೆಸರುಗಳಿರುವ ನಮ್ಮ ರಾಜಧಾನಿ ಎಷ್ಟೋ ವಲಸಿಗರಿಗೆ ನೆಲೆ ಕಟ್ಟಿಕೊಟ್ಟಿದೆ. ಬೆಂಗಳೂರಿನ ಹವಾಮಾನವಂತೂ ದೇಶದ ಎಲ್ಲರಿಗೂ ಇಷ್ಟವಾಗುವ ಎಲ್ಲರಿಗೂ ಹೊಂದಾಣಿಕೆಯಾಗುವ ಹವಾಮಾನವೇ ಸರಿ. ಈ ಸುಂದರ ನಗರಿಯಲ್ಲೂ ಹಲವಾರು (11 Best Tourist Places to Visit in Bangalore) ಪ್ರವಾಸಿ ತಾಣಗಳಿವೆ. ಮೈ ಮನಸ್ಸಿಗೆ ಮುದ ನೀಡುವ ಬೆಂಗಳೂರಿನ ಪ್ರವಾಸಿ ತಾಣಗಳ ಕುರಿತಾಗಿ ಇಲ್ಲಿದೆ ಸಂಪೂರ್ಣ (Bengaluru Tour) ಮಾಹಿತಿ ಇಲ್ಲಿದೆ.
ಲಾಲ್ ಬಾಗ್
ಇದು ನಗರದ ಅತ್ಯಂತ ಹಳೆಯ ಉದ್ಯಾನವನ. ಇದು ಪ್ರವಾಸಿಗರಿಗೆ ಬೆಂಗಳೂರಿನಲ್ಲಿ ಭೇಟಿ ನೀಡಲು ಅತ್ಯಂತ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿರುವ ಸುಂದರವಾದ ವಿಧವಿಧದ ಹೂವುಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತವೆ. ವಿಶಿಷ್ಟ ಜಾತಿಯ ಸಸ್ಯಗಳು, ಹೂವಿನ ಗಿಡಗಳು ಹಾಗೂ ಮರಗಳನ್ನು ನೀವಿಲ್ಲಿ ನೋಡಬಹುದು. ಪ್ರತಿ ವರ್ಷ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ ವಿಶೇಷವಾದ ಪುಷ್ಪ ಪ್ರದರ್ಶನ ಇಲ್ಲಿ ನಡೆಯುತ್ತದೆ.
ಇದನ್ನೂ ಓದಿ: ಹಿಮಾಚಲ ಪ್ರವಾಹದ ಮಧ್ಯೆಯೇ ಆನ್ಲೈನ್ ಮದುವೆ; ವಿಡಿಯೊ ಕಾನ್ಫರೆನ್ಸ್ನಲ್ಲೇ ಮುಗಿದ ಶಾಸ್ತ್ರಗಳು
ವಿಧಾನಸೌಧ
ಕರ್ನಾಟಕದ ಸರ್ಕಾರದ ಆಡಳಿತ ಸೌಧವಾದ ವಿಧಾನಸೌಧದ ನಿರ್ಮಾಣ ಕೆಲಸವನ್ನು 1952ರಲ್ಲಿ ಆರಂಭಿಸಲಾಯಿತು. ಈ ಸೌಧವನ್ನು 1956ರಲ್ಲಿ ಲೋಕಾರ್ಪಣೆ ಮಾಡಲಾಯಿತು. ಈ ಕಟ್ಟಡವು ನವ-ದ್ರಾವಿಡ ವಾಸ್ತುಶಿಲ್ಪದ ಉದಾಹರಣೆಯಾಗಿದೆ. ವಿಧಾನಸೌಧದ ನಾಲ್ಕು ಮೂಲೆಗಳಲ್ಲಿ ನಾಲ್ಕು ಗುಮ್ಮಟಗಳಿವೆ. ಕರ್ನಾಟಕ ಸರ್ಕಾರದ ವಿಧಾನಸಭೆ ಹಾಗೂ ಅನೇಕ ಇತರ ಸರ್ಕಾರಿ ಇಲಾಖೆಗಳು ಇದರಲ್ಲಿವೆ. ಈ ಕಟ್ಟಡದ ಒಳಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲವಾದರೂ ಸೌಧದ ಎದುರು ನಿಂತು ವೀಕ್ಷಣೆ ಮಾಡಬಹುದು. ಇದರ ಪಕ್ಕದಲ್ಲೇ ಬೃಹತ್ ಆದ ವಿಕಾಸ ಸೌಧ ಕಟ್ಟಡವಿದೆ.
ಕಬ್ಬನ್ ಪಾರ್ಕ್
ಬೆಂಗಳೂರಿಗರ ಆಲ್ ಟೈಮ್ ಫೇವರಿಟ್ ಸ್ಥಳಗಳಲ್ಲಿ ಕಬ್ಬನ್ ಪಾರ್ಕ್ ಕೂಡ ಒಂದು. ಮೈಸೂರಿನ ಮುಖ್ಯ ಎಂಜಿನಿಯರ್ ಆಗಿದ್ದ ರಿಚರ್ಡ್ ಸ್ಯಾಂಕಿ ಈ ಪಾರ್ಕ್ ಅನ್ನು ನಿರ್ಮಿಸಿದ್ದರು. ಈ ಕಬ್ಬನ್‌ಪಾರ್ಕ್ 300 ಎಕರೆ ಪ್ರದೇಶದಲ್ಲಿ ಹರಡಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಅದು ರಾಣಿ ವಿಕ್ಟೋರಿಯಾ, ಸರ್ ಮಾರ್ಕ್ ಕಬ್ಬನ್, ಚಾಮರಾಜೇಂದ್ರ ಒಡೆಯರ್ ಸೇರಿ ಹಲವು ಜನಪ್ರಿಯ ವ್ಯಕ್ತಿಗಳ ಪ್ರತಿಮೆಗಳು. ಡಾಲ್ ಮ್ಯೂಸಿಯಂ, ಚೆಷೈರ್ ಡೈಯರ್ ಮೆಮೋರಿಯಲ್ ಹಾಲ್, ಸರ್ಕಾರಿ ವಸ್ತುಸಂಗ್ರಹಾಲಯ ಸೇರಿ ಹಲವು ಆಕರ್ಷಣೆಗಳು ಇಲ್ಲಿವೆ.
ಬೆಂಗಳೂರು ಅರಮನೆ
1887ರಲ್ಲಿ ಬೆಂಗಳೂರಿನ ಅರಮನೆಯನ್ನು ನಿರ್ಮಿಸಲಾಯಿತು. ಆಗಿನ ಮೈಸೂರಿನ ರಾಜರಾಗಿದ್ದ ಚಾಮರಾಜ ಒಡೆಯರ್ ಅವರು ಈ ಅರಮನೆಯನ್ನು ನಿರ್ಮಿಸಿದರು. ಟ್ಯೂಡರ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ಈ ಅರಮನೆಯು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್‌ನಿಂದ ಪ್ರೇರಿತವಾಗಿದೆ. ಅರಮನೆಯು 430 ಎಕರೆಗಳಷ್ಟು ವಿಶಾಲವಾದ ಉದ್ಯಾನವನಗಳಿಂದ ಆವೃತವಾಗಿದೆ. ಬೆಂಗಳೂರಿನ ಹಲವು ಅದ್ಧೂರಿ ಕಾರ್ಯಕ್ರಮಗಳು, ಸಂಗೀತ ಕಚೇರಿಗಳು, ಪ್ರದರ್ಶನಗಳು ನಡೆಯುವ ಸ್ಥಳ ಇದಾಗಿದೆ. ಅರಮನೆಯ ಒಳಾಂಗಣವು ರಾಜಮನೆತನದವರು ತಮ್ಮ ಜೀವನವನ್ನು ಹೇಗೆ ನಡೆಸುತ್ತಿದ್ದರು ಎಂಬುದರ ಒಳನೋಟವನ್ನು ನಿಮಗೆ ನೀಡುತ್ತದೆ.
ಇದನ್ನೂ ಓದಿ: Travel Guide: ಈ ಜಾಗಗಳಿಗೆ ಚಾಕೊಲೇಟ್ ಸವಿಯುವುದಕ್ಕಾಗಿಯೇ ಪ್ರವಾಸ ಹೋಗಿ!
ವೆಂಕಟಪ್ಪ ಆರ್ಟ್ ಗ್ಯಾಲರಿ
ಕಲಾ ಪ್ರೇಮಿಗಳು ಬೆಂಗಳೂರಿನಲ್ಲಿ ತಪ್ಪದೇ ಭೇಟಿ ನೀಡಬೇಕಾದ ಮತ್ತೊಂದು ಸ್ಥಳವೆಂದರೆ ಅದು ವೆಂಕಟಪ್ಪ ಆರ್ಟ್ ಗ್ಯಾಲರಿ. ಈ ಅದ್ಭುತ ಕಲಾ ಗ್ಯಾಲರಿಯಲ್ಲಿ ಸುಮಾರು 600 ವರ್ಣಚಿತ್ರಗಳನ್ನು ವರ್ಷವಿಡೀ ಪ್ರದರ್ಶನಕ್ಕೆ ಇಡಲಾಗಿರುತ್ತದೆ. ಅದಷ್ಟೇ ಅಲ್ಲದೆ ಇಲ್ಲಿ ಹಲವು ವಿಶೇಷ ಕಲಾಕೃತಿಗಳನ್ನು ನೋಡಬಹುದಾಗಿದೆ.
ಟಿಪ್ಪು ಅರಮನೆ
ಟಿಪ್ಪು ಸುಲ್ತಾನ್‌ನ ತಂದೆ ಹೈದರ್ ಅಲಿ ಬೆಂಗಳೂರು ಕೋಟೆಯೊಳಗೆ ಈ ಅರಮನೆಯನ್ನು ನಿರ್ಮಾಣ ಮಾಡಲು ಆರಂಭಿಸಿದರು. ನಂತರ ಇದನ್ನು 1791ರಲ್ಲಿ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಪೂರ್ಣಗೊಳಿಸಲಾಯಿತು. ಈ ಅರಮನೆಯು ಭಾರತದಲ್ಲಿನ ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಒಂದು ಉತ್ತಮ ಉದಾಹರಣೆ. ಇದು ಆಗಿನ ಮೈಸೂರು ದೊರೆ ಟಿಪ್ಪು ಸುಲ್ತಾನನ ಬೇಸಿಗೆ ನಿವಾಸವಾಗಿತ್ತು. ಅರಮನೆಯ ಕುಶಲತೆ ಮತ್ತು ಶಿಲ್ಪಕಲೆಯು ಪ್ರವಾಸಿಗರನ್ನು ಮೂಕವಿಸ್ಮಿತರನ್ನಾಗಿಸುವಂತಿದೆ.
ಇಸ್ಕಾನ್ ದೇವಾಲಯ
ಇಸ್ಕಾನ್ ದೇವಾಲಯ ಬೆಂಗಳೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ಬೆಂಗಳೂರಿನ ಇಸ್ಕಾನ್ ದೇವಾಲಯವನ್ನು ಶ್ರೀ ರಾಧಾ ಕೃಷ್ಣ ದೇವಾಲಯ ಎಂದೂ ಕರೆಯಲಾಗುತ್ತದೆ. ಇದು ವಿಶ್ವದ ಅತಿದೊಡ್ಡ ಇಸ್ಕಾನ್ ದೇವಾಲಯವಾಗಿದೆ. ನಗರದ ರಾಜಾಜಿನಗರ ಭಾಗದಲ್ಲಿರುವ ಈ ದೇವಾಲಯವು ತನ್ನ ವಿಶಿಷ್ಟ ವಾಸ್ತುಶಿಲ್ಪದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇಗುಲಕ್ಕೆ ಭೇಟಿ ನೀಡುವವರು ಪ್ರಸಾದ ಸ್ವೀಕರಿಸಿ, ಅಧ್ಯಾತ್ಮಕ್ಕೆ ಸಂಬಂಧಿಸಿರುವ ಪುಸ್ತಕಗಳನ್ನು ಖರೀದಿಸಬಹುದು.
ಇದನ್ನೂ ಓದಿ: Best of Chitradurga : ಚಿತ್ರದುರ್ಗದ ಪ್ರವಾಸವೆಂದರೆ ಈ ಎಲ್ಲ ಸ್ಥಳಗಳನ್ನು ನೋಡಲೇಬೇಕು
ಶಿವನ ಪ್ರತಿಮೆ
ಬೆಂಗಳೂರಿನ ಮುರುಗೇಶ್‌ಪಾಳ್ಯದ ಕೆಂಪ್ ಫೋರ್ಟ್ ಮಾಲ್ ಆವರಣದಲ್ಲಿ 65 ಅಡಿ ಎತ್ತರದ ಶಿವನ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಪದ್ಮಾಸನ ಹಾಕಿ ಕುಳಿತಿರುವ ಶಿವನನ್ನು ನೀವು ಕಾಣಬಹುದು. ಶಿವನ ಹಿಂದೆ ಕೈಲಾಸ ಪರ್ವತದಂತಹ ಪರ್ವತಗಳನ್ನೂ ನಿರ್ಮಿಸಲಾಗಿದೆ. ಅದಲ್ಲದೆ ಶಿವನ ತಲೆಯಿಂದ ಗಂಗೆ ಹರಿಯುವಂತೆಯೇ ಇಲ್ಲಿಯೂ ಶಿವನ ತಲೆಯಿಂದ ನೀರನ್ನು ಧರೆಗಿಳಿಸುವಂತೆ ತೋರಿಸಲಾಗಿದೆ. ಅಧ್ಯಾತ್ಮದತ್ತ ಒಲವಿರುವವರಿಗೆ ಈ ತಾಣ ಇಷ್ಟವಾಗುತ್ತದೆ. ಪೂರ್ತಿ ಸ್ಥಳ ಒಂದು ದೈವೀಕ ಭಾವನೆಯನ್ನು ನೀಡುತ್ತದೆ.
ಬುಲ್ ಟೆಂಪಲ್
ಬೆಂಗಳೂರಿನ ಮತ್ತೊಂದು ಪವಿತ್ರ ಸ್ಥಳವೆಂದರೆ ಅದು ಬುಲ್ ಟೆಂಪಲ್. ಧಾರ್ಮಿಕತೆ ಕಡೆಗೆ ಒಲವಿರುವವರಿಗೆ ಇದು ಸೂಕ್ತ ಸ್ಥಳವೆನ್ನಬಹುದು. ಈ ದೇವಸ್ಥಾನದಲ್ಲಿ ಶಿವನ ವಾಹನವಾದ ನಂದಿಯ ಮೂರ್ತಿಯಿದೆ. ಏಕಶಿಲೆಯ ಪ್ರತಿಮೆಯನು ನೋಡುವುದಕ್ಕೆಂದು ಪ್ರತಿನಿತ್ಯ ನೂರಾರು ಭಕ್ತರು ಈ ದೇಗುಲಕ್ಕೆ ಬಂದು ದೇವರ ಆಶೀರ್ವಾದ ಪಡೆದು ಹೋಗುತ್ತಾರೆ.
ಅಕ್ವೇರಿಯಂ
ವಿಶ್ವದ ಎರಡನೇ ಅತಿ ದೊಡ್ಡ ಅಕ್ವೇರಿಯಂ ಬೆಂಗಳೂರಿನಲ್ಲಿದೆ. ಇಲ್ಲಿ ಹಲವಾರು ತರದ ಜಲಚರಗಳನ್ನು ನೀವು ಕಾಣಬಹುದು. ಈ ಅಕ್ವೇರಿಯಂ ಸೋಮವಾರದಂದು ಬಾಗಿಲು ಮುಚ್ಚಿರುತ್ತದೆಯಾದ್ದರಿಂದ ಅದನ್ನು ಹೊರೆತುಪಡಿಸಿ ಬೇರೆ ದಿನಗಳಲ್ಲಿ ಈ ಸ್ಥಳಕ್ಕೆ ಭೇಟಿ ನೀಡಲು ಯೋಜನೆ ಹಾಕಿಕೊಳ್ಳಿ.
ಇದನ್ನೂ ಓದಿ: Sakleshpur Places To Visit : ಸ್ವರ್ಗದಂತಹ ಸಕಲೇಶಪುರದಲ್ಲಿ ಈ ಸ್ಥಳಗಳನ್ನು ಮಿಸ್ ಮಾಡಲೇಬಾರದು
ಜವಾಹರಲಾಲ್ ನೆಹರು ತಾರಾಲಯ
ಜವಾಹರಲಾಲ್ ನೆಹರು ತಾರಾಲಯವು ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾದ ಮತ್ತೊಂದು ಆಕರ್ಷಣೀಯ ಸ್ಥಳವಾಗಿದೆ. ಇದೊಂದು ಖಗೋಳಶಾಸ್ತ್ರದ ಕೇಂದ್ರವಾಗಿದೆ. ಆಗಸದಲ್ಲಿ ಉಂಟಾಗುವ ವಿಸ್ಮಯಗಳ ಮಾದರಿಯನ್ನು ನೀವಿಲ್ಲಿ ಕಾಣಬಹುದು. ವರ್ಷವಿಡೀ ತಾರಾಲಯದಲ್ಲಿ ಅನೇಕ ಕಾರ್ಯಾಗಾರಗಳು ಮತ್ತು ಪ್ರದರ್ಶನಗಳು ನಡೆಯುತ್ತಿರುತ್ತವೆ.