ಬೆಂಗಳೂರು: ರಾಜಧಾನಿ ಬೆಂಗಳೂರಿನ ವಾಹನ ದಟ್ಟಣೆಯನ್ನು (Bengaluru Traffic) ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ಪಾತ್ರ ದೊಡ್ಡದು. ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದ ಮದುಮಗಳೊಬ್ಬಳು ಮುಹೂರ್ತ ಮೀರುವ ಭಯದಲ್ಲಿ ಕಾರಿನಿಂದ ಜಿಗಿದು ಮೆಟ್ರೋಗೆ ಹಾರಿದ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.
ಮದುವೆ ಮಂಟಪಕ್ಕೆ ಸರಿಯಾದ ಸಮಯಕ್ಕೆ ತಲುಪುವ ಸಲುವಾಗಿ ಕುಟುಂಬ ಸಮೇತ ಮೆಟ್ರೋ ಟ್ರೈನ್‌ನಲ್ಲಿ ಹೊರಟಿದ್ದಾರೆ. ಮದುಮಗಳು ಧಾರೆ ಸೀರೆಯುಟ್ಟು, ಅಲಂಕಾರ ಭೂಷಿತೆಯಾಗಿ ಹೊರಟಿದ್ದು, ಮೆಟ್ರೋ ಜರ್ನಿ ವಿಡಿಯೊ ವೈರಲ್ ಆಗುತ್ತಿದೆ. ಆಭರಣಗಳ ಸಹಿತ ಮದುವೆಗೆ ಮೇಕಪ್ ಮಾಡಿಕೊಂಡಿದ್ದ ವಧುವು ಕಾರಿನಲ್ಲಿ ಮದುವೆ ಮಂಟಪದತ್ತ ಹೊರಟಿದ್ದಾರೆ. ಆದರೆ, ಬೆಂಗಳೂರಿನ ಟ್ರಾಫಿಕ್‌ನಿಂದಾಗಿ ನಿಧಾನವಾಗಿ ಕಾರು ಮೂವ್ ಆಗುತ್ತಿತ್ತು. ಅತ್ತ ಮದುವೆ ಮನೆಯಲ್ಲಿ ಪೋಷಕರಿಗೆ ಟೆನ್ಶನ್ ಶುರುವಾಗಿದೆ. ಹೊತ್ತು ಮೀರುತ್ತಿದೆ, ಇನ್ನೂ ಎಲ್ಲಿದ್ದೀಯಾ, ಬೇಗ ಬಾ ಎಂಬ ಕರೆ ಬರುತ್ತಲೇ ಇತ್ತು. ಇತ್ತ ವಧುವಿಗೂ ಅದೇ ಟೆನ್ಶನ್ ಮುಹೂರ್ತ ವೀರಿದರೆ ಕಥೆ ಏನು? ಎಂಬ ಚಿಂತೆ.
ಹೀಗಾಗಿ ಟ್ರಾಫಿಕ್ ಕ್ಲಿಯರ್ ಆಗಲಿದೆ, ಕಾರಿನಲ್ಲೇ ಹೋಗಿ ಬಿಡುತ್ತೇನೆ ಎಂದೆಲ್ಲ ಯೋಚಿಸುತ್ತಾ ಕೂರುವಷ್ಟೂ ಸಮಯವಲ್ಲ ಎಂದು ಯೋಚಿಸಿದ ವಧು ಕೂಡಲೇ ಕಾರಿನಿಂದ ಇಳಿಯುವ ಯೋಚನೆ ಮಾಡಿದರು. ಅಲ್ಲೇ ಇದ್ದ ಮೆಟ್ರೋ ಸ್ಟೇಶನ್ ಬಳಿಗೆ ಓಡಿದರು. ಮೆಟ್ರೋ ಟಿಕೆಟ್ ಪಡೆದು ಕೊನೆಗೆ ನಿರಾಳವಾಗಿ ಕಲ್ಯಾಣ ಮಂಟಪವನ್ನು ತಲುಪಿದರು.
ಈ ಎಲ್ಲ ದೃಶ್ಯಗಳನ್ನು ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ. ಇದಕ್ಕೆ ನೂರಾರು ಕಮೆಂಟ್‌ಗಳು ಬಂದಿದ್ದು, “ಒಂದು ವೇಳೆ ಟ್ರಾಫಿಕ್ ಕ್ಲಿಯರ್ ಆಗುವುದೆಂದು ಕಾರಿನಲ್ಲಿ ಕುಳಿತಿದ್ದರೆ ಮದುವೆ ಮುಹೂರ್ತವೇ ಮುಗಿದು ಹೋಗುತ್ತಿತ್ತು” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಬೆಂಗಳೂರು ಟ್ರಾಫಿಕ್ ಯಾವೆಲ್ಲ ರೀತಿಯಲ್ಲಿ ತೊಂದರೆಯನ್ನುಂಟು ಮಾಡುತ್ತದೆ ಎಂಬುದಕ್ಕೆ ಸಾಕ್ಷಿ ಎಂದೂ ಸಹ ಚರ್ಚೆಗಳು ಶುರುವಾಗಿವೆ. ಒಟ್ಟಿನಲ್ಲಿ ಟ್ರಾಫಿಕ್‌ನಿಂದ ಮುಹೂರ್ತ ಮೀರಿಹೋಗುತ್ತಿದ್ದ ಮದುವೆಯು ಮೆಟ್ರೋದಿಂದಾಗಿ ಸುಸೂತ್ರವಾಗಿ ನೆರವೇರಿ ಆಕೆಯ ಕೊರಳಿಗೆ ಮಂಗಳಸೂತ್ರ ಬೀಳುವಂತಾಗಿದೆ.
ಇದನ್ನೂ ಓದಿ | Dandruff remedies | ಚಳಿಗಾಲದ ತಲೆಹೊಟ್ಟಿನ ಸಮಸ್ಯೆಗೆ ನಮ್ಮಲ್ಲೇ ಇವೆ ಮನೆಮದ್ದುಗಳು!