Site icon Vistara News

Bengaluru Weather: ಬೆಂಗಳೂರು ಈಗ ʼಹಾಟ್‌ʼಸ್ಪಾಟ್‌; 1983ರ ನಂತರ ಮೊದಲ ಬಾರಿ ಏಪ್ರಿಲ್‌ನಲ್ಲಿ ಶೂನ್ಯ ಮಳೆ

Bengaluru Weather

Bengaluru Weather

ಬೆಂಗಳೂರು: ಬೆಂಗಳೂರು ಅಕ್ಷರಶಃ ʼಬೆಂದʼಕಾಳೂರು ಆಗಿದೆ. ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಹನಿ ಮಳೆಗಾಗಿ ಆಗಸದತ್ತ ಮುಖ ಮಾಡುವಂತಾಗಿದೆ. ಅಚ್ಚರಿ ಎಂದರೆ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯೇ ಆಗಿಲ್ಲ (Bengaluru Weather). ಈ ರೀತಿಯ ಪರಿಸ್ಥಿತಿ 1983ರ ನಂತರ ಕಂಡುಬರುತ್ತಿರುವುದು ಇದು ಮೊದಲ ಬಾರಿ ಎಂದು ಭಾರತೀಯ ಹವಾಮಾನ ಇಲಾಖೆ (Meteorological Department) ತಿಳಿಸಿದೆ.

ಈ ಬಗ್ಗೆ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಪ್ರಸಾದ್‌ ಮಾತನಾಡಿ, ʼʼಈ ಏಪ್ರಿಲ್‌ 41 ವರ್ಷಗಳಲ್ಲೇ ಅತ್ಯಂತ ಶುಷ್ಕವಾಗಿತ್ತು. 1983ರ ಬಳಿಕ ಈ ವರ್ಷ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ಮಳೆಯೇ ಆಗಿಲ್ಲʼʼ ಎಂದು ತಿಳಿಸಿದ್ದಾರೆ. ʼʼಮಳೆಗಾಲಕ್ಕೆ ಮುಂಚಿತವಾಗಿ ಎಲ್ ನಿನೊ ಸ್ಥಿತಿಯು ತಟಸ್ಥ ಅಥವಾ ಶೂನ್ಯಕ್ಕೆ ಬದಲಾಗುತ್ತದೆ ಎನ್ನುವ ನಿರೀಕ್ಷೆ ಇದೆ. ಇದು ಉತ್ತಮ ಮಾನ್ಸೂನ್‌ಗೆ ಅನುಕೂಲ ಒದಗಿಸಲಿದೆ. ಈ ಮಳೆಗಾಲದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ” ಎಂದು ಅವರು ವಿವರಿಸಿದ್ದಾರೆ.

ಅಂಕಿ-ಅಂಶ ಏನು ಹೇಳುತ್ತದೆ?

ಕೊನೆಯದಾಗಿ 2023ರ ನವೆಂಬರ್‌ನಲ್ಲಿ ಮಳೆಯಾಗಿತ್ತು ಎಂದು ಬೆಂಗಳೂರು ಐಎಂಡಿ ಹೇಳಿದೆ. ಅಂದು ಸುಮಾರು 106.6 ಮಿ.ಮೀ. ಮಳೆಯಾಗಿತ್ತು. ಅಂದಿನಿಂದ ಅಲ್ಪ ಸ್ವಲ್ಪ ಮಳೆಯಾಗಿದ್ದು ಬಿಟ್ಟರೆ ಧಾರಾಕಾರವಾಗಿ ಸುರಿದಿಲ್ಲ. ಡಿಸೆಂಬರ್ 0.7 ಮಿ.ಮೀ., 2024ರ ಜನವರಿಯಲ್ಲಿ 2 ಮಿ.ಮೀ. ಮಳೆಯಾಗಿತ್ತು. ಇನ್ನು ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಒಂದು ಹನಿ ಮಳೆಯೂ ಸುರಿದಿಲ್ಲ ಎಂದು ಅಂಕಿ-ಅಂಶ ಹೇಳಿದೆ. ಏಪ್ರಿಲ್ 19 ಮತ್ತು 20ರಂದು ಕೆಲವು ಪ್ರದೇಶಗಳಲ್ಲಿ ಮಳೆಯಾಗಿದ್ದರೂ ಅದು ಗಮನಾರ್ಹವಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಐಎಂಡಿ ಪ್ರಕಾರ, ಮೇ ಎರಡನೇ ವಾರದಿಂದ ಗುಡುಗು ಸಹಿತ ಸಂಜೆ ಮಳೆಯಾಗುವ ಸಾಧ್ಯತೆಯಿದೆ.

ಸಮುದ್ರ ಮಟ್ಟದಿಂದ 3,000ಕ್ಕೂ ಹೆಚ್ಚು ಅಡಿ ಎತ್ತರದಲ್ಲಿರುವ ಬೆಂಗಳೂರು ಆಹ್ಲಾದಕರ ಹವಾಮಾನವನ್ನು ಹೊಂದಿದೆ. ಹೀಗಾಗಿ ಇದು ಪ್ರಪಂಚದಾದ್ಯಂತದ ಯುವ, ಪ್ರತಿಭಾವಂತ ಉದ್ಯೋಗಿಗಳನ್ನು ಆಕರ್ಷಿಸುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಬೇಸಿಗೆಯ ಬಿಸಿ ಕಠಿಣವಾಗಿದೆ. ಕೊಳವೆಬಾವಿಗಳು ಒಣಗುತ್ತಿವೆ. ಜತೆಗೆ ಕೆಲವು ಕಡೆಗಳಲ್ಲಿ ನೀರಿಗಾಗಿ ಹಾಹಾಕಾರ ಮುಂದುವರಿದಿದೆ.

ಏಪ್ರಿಲ್‌ 28ರಂದು ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 38.5 ಡಿಗ್ರಿ ಸಿಲ್ಸಿಯಸ್‌ ದಾಖಲಾಗಿತ್ತು. ಈ ಮೂಲಕ ಎರಡನೇ ಅತ್ಯಂತ ಬೆಚ್ಚಗಿನ ಎಪ್ರಿಲ್‌ನ ದಿನ ಎನಿಸಿಕೊಂಡಿತ್ತು. ಈ ಹಿಂದೆ 2016ರ ಏಪ್ರಿಲ್‌ 25ರಂದು 39.2 ಡಿಗ್ರಿ ಸಿಲ್ಸಿಯಸ್‌ ದಾಖಲಾಗಿದ್ದು ಇದುವರೆಗಿನ ಏಪ್ರಿಲ್‌ನ ಗರಿಷ್ಠ ಉಷ್ಣಾಂಶ.

ಇದನ್ನೂ ಓದಿ: Viral News: ಸೆಕೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಕಾಪಾಡಲು ಶಿಕ್ಷಕರ ಸೂಪರ್‌ ಐಡಿಯಾ; ಇಲ್ಲಿದೆ ವಿಡಿಯೊ

ದೇಶದಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ದಿನದಿಂದ ದಿನಕ್ಕೆ ವಾತಾವರಣದ ಬಿಸಿ ಏರಿಕೆಯಾಗುತ್ತಿದೆ. ಬಿಸಿಲಿನ ಬೇಗೆಗೆ ಜನ ಹೈರಾಣಾಗಿದ್ದಾರೆ. ದೇಶದ ಹೆಚ್ಚಿನ ಭಾಗಗಳು ಉಷ್ಣಗಾಳಿಯ ಹೊಡೆತಕ್ಕೆ ಸಿಲುಕಿ ತತ್ತರಿಸಿವೆ. 1901ರ ಬಳಿಕ ರಾತ್ರಿ ತಾಪಮಾನದ ದೃಷ್ಟಿಯಿಂದ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಇದು ಅತ್ಯಂತ ಬೆಚ್ಚಗಿನ ಏಪ್ರಿಲ್ ಎನಿಸಿಕೊಂಡಿದೆ. ಜತೆಗೆ ಮೂರನೇ ಅತಿ ಹೆಚ್ಚಿನ ಸರಾಸರಿ ತಾಪಮಾನವಾಗಿದೆ. ಹವಾಮಾನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಗರಿಷ್ಠ, ಕನಿಷ್ಠ ಮತ್ತು ಸರಾಸರಿ ತಾಪಮಾನದ ದೃಷ್ಟಿಯಿಂದ ಇದು ದೇಶದ ಎರಡನೇ ಅತಿ ಹೆಚ್ಚು ಬೆಚ್ಚಗಿನ ಏಪ್ರಿಲ್ ಆಗಿದೆ. ಎಲ್ ನಿನೊ ಮತ್ತು ಹವಾಮಾನ ಬದಲಾವಣೆ ಇದಕ್ಕೆ ಕಾರಣ ಎಂದು ತಜ್ಞರು ತಿಳಿಸಿದ್ದಾರೆ.

Exit mobile version