Site icon Vistara News

Kambala Sports : ರಾಜ್ಯದ 20 ಕಂಬಳಗಳಿಗೆ 1 ಕೋಟಿ ರೂ. ಅನುದಾನ; ಡಿಕೆಶಿ ಘೋಷಣೆ

Kambala sports in Bangalore

ಬೆಂಗಳೂರು: “ರಾಜ್ಯದ 20 ಕಂಬಳಗಳಿಗೆ ತಲಾ 5 ಲಕ್ಷದಂತೆ 1 ಕೋಟಿ ಸಹಾಯಧನವನ್ನು ನೀಡಲಾಗುವುದು. ದೇಸಿ ಹಾಗೂ ಐತಿಹಾಸಿಕವಾದ ಕಂಬಳ ಕ್ರೀಡೆಗೆ (Kambala Sports) ಹೆಚ್ಚಿನ ಸಹಕಾರ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಘೋಷಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಬುಧವಾರ ಬೆಳಗ್ಗೆ ಬೆಂಗಳೂರು ಕಂಬಳ (Bangalore Kambala)- ನಮ್ಮ ಕಂಬಳದ ಕರೆಪೂಜೆ (ಗುದ್ದಲಿ ಪೂಜೆ) ನೆರವೇರಿಸಿ ಮಾತನಾಡಿದ ಅವರು, “ಕಂಬಳಕ್ಕೆ ಸಹಾಯಧನ ಬಿಡುಗಡೆ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಜತೆ ಚರ್ಚೆ ನಡೆಸಲಾಗುವುದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಾಜಗಳ ಸಂಘಟನೆಗೆ ಒಂದು ನೆಲೆ ಬೇಕು ಎಂದು ಶಾಸಕ ಅಶೋಕ್ ರೈ ಮನವಿ ಮಾಡಿದ್ದು, ಎಲ್ಲರೂ ಒಟ್ಟಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿʼʼ ಎಂದು ಹೇಳಿದರು. ಕಂಬಳಕ್ಕೆ ಸರ್ಕಾರ ಈಗಲೂ ತಲಾ 5 ಲಕ್ಷ ರೂ. ಅನುದಾನ ನೀಡುತ್ತಿದೆ.

ನವೆಂಬರ್‌ 25 ಮತ್ತು 26ರಂದು ಕಂಬಳ ನಡೆಯಲಿದೆ. ಕರಾವಳಿಯಿಂದ ಸುಮಾರು 130 ಜೋಡಿ ಕೋಣಗಳನ್ನು ತರಲಾಗುತ್ತದೆ ಎಂದು ಸಂಘಟಕರು ತಿಳಿಸಿದರು.

Kambala sports in Bangalore

ʻʻಮನುಷ್ಯನ ಬಳಿ ತೆಗೆದುಕೊಂದು ಹೋಗಲು ಏನೂ ಇಲ್ಲ, ತನ್ನ ಬಳಿ ಇರುವುದನ್ನೆಲ್ಲಾ ಬಿಟ್ಟು ಹೋಗಲೇಬೇಕು. ಆದರೆ ನಮ್ಮ ಸಂಸ್ಕೃತಿಯನ್ನು ಉಳಿಸಿ, ಪರಿಚಯಿಸಬೇಕು ಎಂದು ಶಾಸಕರಾದ ಅಶೋಕ್ ರೈ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಜನರು ಒಂದಾಗಿರುವುದು ಸಂತೋಷದ ವಿಚಾರʼʼ ಎಂದರು.

ʻʻಉಳಿಪೆಟ್ಟು ಬೀಳದೆ ಯಾವುದೇ ಶಿಲೆ ಪ್ರತಿಮೆ ಆಗುವುದಿಲ್ಲ. ಭೂಮಿ ಉಳದೆ ಯಾವುದೇ ಬೆಳೆ ಬೆಳೆಯಲು ಆಗುವುದಿಲ್ಲ. ಅದರಂತೆ ಅರಮನೆ ಮೈದಾನದಲ್ಲಿ ಒಂದಷ್ಟು ಅಭಿವೃದ್ದಿ ಕೆಲಸಗಳನ್ನು ಈ ನೆಪದಲ್ಲಿ ಮಾಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದಂತಹ ಸದಾನಂದ ಗೌಡರು, ಎನ್‌.ಎ ಹ್ಯಾರಿಸ್ ಅವರು ಬೆಂಗಳೂರಿನಲ್ಲಿ ನಾಯಕರಾಗಿ ಬೆಳೆದಿದ್ದಾರೆʼʼ ಎಂದು ಹೇಳಿದರು.

“ಕರ್ನಾಟಕದ ಕರಾವಳಿ ಭಾಗ ಈ ದೇಶದ ದೊಡ್ಡ ಆಸ್ತಿ. ಉದ್ದಿಮೆ, ಶಿಕ್ಷಣ, ಹೋಟೆಲ್ ಉದ್ಯಮ, ಪ್ರವಾಸೋದ್ಯಮ, ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ತಮ್ಮ ಸಂಪ್ರದಾಯವನ್ನು ಬೆಂಗಳೂರಿನ ಜನತೆಗೂ ಪರಿಚಯಿಸಲು ಹೊರಟಿರುವ ಶಾಸಕ ಅಶೋಕ್ ರೈ ಅವರ ಕೆಲಸ ಶ್ಲಾಘನೀಯ” ಎಂದು ತಿಳಿಸಿದರು.

ಇದನ್ನೂ ಓದಿ: Kambala Festival: ಬೆಂಗಳೂರಿನಲ್ಲಿ ಮೊದಲ ಬಾರಿಗೆ 2 ದಿನ ಕಂಬಳ; ಕೋಣಗಳ ಓಟ ಎಂದು?

ʻʻಈ ದೇಶಕ್ಕೆ ದೊಡ್ಡ ಆಸ್ತಿಯೇ ನಮ್ಮ ಸಂಸ್ಕೃತಿ. ಅದೇ ರೀತಿ ದಕ್ಷಿಣ ಕನ್ನಡ ಶ್ರೀಮಂತ ಜನಪದ ಆಚರಣೆಗಳನ್ನು ಹೊಂದಿದೆ. ದಕ್ಷಿಣ ಕನ್ನಡದ ಆಚರಣೆ ಬೆಂಗಳೂರಿನಲ್ಲೂ ನಡೆಯಬೇಕು ಎನ್ನುವ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗಲು ಎಲ್ಲರೂ ಒಗ್ಗಟ್ಟಾಗಿ ಸೇರಿ ಮಾದರಿ ಕೆಲಸ ಮಾಡುತ್ತಿದ್ದೀರಿ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಯುವಕರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು. ಸಾವಿರಾರು ಯುವಕರು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಐತಿಹಾಸಿಕ ಕಂಬಳ ಆಯೋಜನೆ ಮಾಡುತ್ತಿರುವುದಕ್ಕೆ ನಮ್ಮ ಸಹಕಾರ ಎಂದಿಗೂ ಇರುತ್ತದೆʼʼ ಎಂದು ತಿಳಿಸಿದರು.

ದಕ್ಷಿಣ ಕನ್ನಡದ ಜನರು ಅವರ ಸಂಸ್ಕೃತಿ ಉಳಿಸಿಕೊಳ್ಳಲು ಬದ್ಧತೆಯಿಂದ ಇಲ್ಲಿ ಸೇರಿದ್ದಾರೆ. ನಮ್ಮ ಕಂಬಳ- ಬೆಂಗಳೂರು ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ಸರ್ಕಾರ ನೀಡುತ್ತದೆ ಎಂದರು.

Exit mobile version