ಬೆಂಗಳೂರು: ಆರೋಗ್ಯ ಕವಚ 108 ಆಂಬ್ಯುಲೆನ್ಸ್ (108 Ambulance) ಸಿಬ್ಬಂದಿಗೆ ಮೂರು ತಿಂಗಳ ವೇತನ ಪಾವತಿಯಾಗದ (Salary Problem) ಕಾರಣಕ್ಕೆ ಮತ್ತೆ ಮುಷ್ಕರಕ್ಕೆ ಸಜ್ಜಾಗಿದ್ದಾರೆ. ನಾಳೆ ಅಂದರೆ ಮೇ.6ರ ರಾತ್ರಿ 8 ಗಂಟೆಯಿಂದ ರಾಜ್ಯ ವ್ಯಾಪ್ತಿ ಆಂಬ್ಯುಲೆನ್ಸ್ ಸೇವೆ ಬಂದ್ (Ambulance Service) ಆಗಲಿದೆ.
ಜಿವಿಕೆ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಬ್ಬಂದಿ ತಿರುಗಿ ಬಿದ್ದಿದ್ದಾರೆ. ಮೂರು ತಿಂಗಳಿಂದ ವೇತನ ಸಿಗದೆ 108 ಸಿಬ್ಬಂದಿ ಜೀವನ ಹೈರಾಣಾಗಿದೆ. ಒಂದು ಕಡೆ ಮೂರು ತಿಂಗಳಿಂದ ಸಂಬಳವಿಲ್ಲ. ಮತ್ತೊಂದು ಕಡೆ ಜಿವಿಕೆ ಸಂಸ್ಥೆ ವೇತನ ಕಡಿತಗೊಳಿಸಿದೆ ಎಂದು ಕಿಡಿಕಾರಿದ್ದಾರೆ.
ಈ ಎಲ್ಲ ಕಾರಣಗಳಿಗೆ ಸೋಮವಾರ ರಾತ್ರಿಯಿಂದ ಆಂಬ್ಯುಲೆನ್ಸ್ ಓಡಾಟವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಕಳೆದ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ವೇತನ ಬಾಕಿ ಇದೆ. ಜಿವಿಕೆ ಸಂಸ್ಥೆ ಈಗಾಗಲೇ ಡಿಸೆಂಬರ್, ಜನವರಿ ತಿಂಗಳ ವೇತನವನ್ನು 30 ಸಾವಿರ ರೂ. ಕಡಿತ ಮಾಡಿ, ಕೇವಲ 13 ಸಾವಿರ ರೂ. ವೇತನ ನೀಡುತ್ತಿದೆ.
ಇದನ್ನೂ ಓದಿ: Accident News: ಸೆಕೆ ಎಂದು ಕೆರೆಗೆ ಜಿಗಿದ ವ್ಯಕ್ತಿ ಸಾವು; ವಿದ್ಯುತ್ ತಂತಿ ತುಳಿದು ಪ್ರಾಣಬಿಟ್ಟ ರೈತ
ಹೀಗಾಗಿ ನಾಳೆ ಸಂಜೆಯೊಳಗೆ ವೇತನ ಪಾವತಿ ಮಾಡುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಕಡಿತ ಮಾಡಿದ ವೇತನವನ್ನು ಬಿಡುಗಡೆ ಮಾಡಬೇಕು. ಒಂದು ವೇಳೆ ವೇತನ ಪಾವತಿ ಮಾಡದಿದ್ದರೆ ಮುಷ್ಕರದ ಎಚ್ಚರಿಕೆಯನ್ನು ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ನೌಕರರ ಸಂಘ ನೀಡಿದೆ.
ರಸ್ತೆಗಿಳಿಯಲ್ಲ ಆಂಬ್ಯುಲೆನ್ಸ್
ಸೋಮವಾರ ರಾತ್ರಿ (ಮೇ 6) 8 ಗಂಟೆಯಿಂದ ರಾಜ್ಯದ 3,500 ಆರೋಗ್ಯ ಕವಚ ಸಿಬ್ಬಂದಿ ಮುಷ್ಕರ ನಡೆಸಲಿದ್ದಾರೆ. ರಾಜ್ಯದಲ್ಲಿ ಒಟ್ಟು 711 ಆಂಬ್ಯುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿದೆ. ರಾತ್ರಿಯಿಂದ ಸಂಪೂರ್ಣ ಬಂದ್ ಆಗಲಿದ್ದು, ರೋಗಿಗಳಿಗೆ ತೊಂದರೆ ಆದರೆ ಸರ್ಕಾರವೇ ನೇರ ಹೊಣೆ ಎಂದು ಆಂಬ್ಯುಲೆನ್ಸ್ ನೌಕರರ ಸಂಘದ ಉಪಾಧ್ಯಕ್ಷ ದಯಾನಂದ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ