Site icon Vistara News

National Flag: ಜ. 26ಕ್ಕೆ ಹೊಸ ದಾಖಲೆ; 215 ಅಡಿಯ ರಾಷ್ಟ್ರಧ್ವಜ ಸ್ತಂಭದಲ್ಲಿ ಹಾರಾಡಲಿದೆ ತ್ರಿವರ್ಣ ಧ್ವಜ!

Indian National Flag

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ರಾಷ್ಟ್ರಧ್ವಜವು (National Flag) ದಾಖಲೆಯನ್ನು ಬರೆಯಲಿದೆ. ವಿಜಯನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಚಂದ್ರಾ ಬಡಾವಣೆಯಲ್ಲಿ ಇದೇ ಜನವರಿ 26ರ ಗಣರಾಜ್ಯೋತ್ಸವ (Republic Day) ದಿನದಿಂದು ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜ (Tricolour Flag) ಹಾರಾಡಲಿದೆ. ಇದು 215 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭವಾಗಿದ್ದು, ದಾಖಲೆ ಪುಟಕ್ಕೆ ಸೇರಿಕೊಳ್ಳಲಿದೆ.

ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಅಂದು ಬೆಳಗ್ಗೆ 8.30 ಗಂಟೆಗೆ ಚಂದ್ರಾ ಬಡಾವಣೆಯ ಉದ್ಯಾನದಲ್ಲಿ ಈ ಬಾನೆತ್ತರದ ರಾಷ್ಟ್ರಧ್ವಜ ಸ್ತಂಭವನ್ನು ಲೋಕಾರ್ಪಣೆ ಮಾಡಿ, ರಾಷ್ಟ್ರದ ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ.

ಸಂವಿಧಾನದ ಆಶಯಗಳಾದ ದೇಶ ಪ್ರೇಮ, ದೇಶ ಭಕ್ತಿ, ಸೋದರತೆ ಮತ್ತು ಸಾಮರಸ್ಯವನ್ನು ಉಳಿಸಿ ಬೆಳೆಸಲು ಪ್ರೇರಣೆ ಮತ್ತು ಸ್ಫೂರ್ತಿ ನೀಡುವ ಈ ಸಮಾರಂಭದಲ್ಲಿ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಅವರೂ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಮಾರಂಭದ ಪ್ರಾರಂಭಕ್ಕೆ ಮುನ್ನ, ಬೆಳಗ್ಗೆ 7.30 ಗಂಟೆಗೆ, ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಾದ್ಯಗೋಷ್ಠಿ-ಸಹಿತವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಲಿವೆ.

ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ

ಸಮಾರಂಭದ ನಂತರ, ಬೆಳಗ್ಗೆ 10 ಗಂಟೆಗೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನಾಡಪ್ರಭು ವಾಣಿಜ್ಯ ಸಂಕೀರ್ಣ ಆವರಣದಲ್ಲಿ ರಕ್ತದಾನ ಶಿಬಿರ ಹಾಗೂ ಅರ್ಬುದ ರೋಗ (ಕ್ಯಾನ್ಸರ್) ಉಚಿತ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿದೆ.

ರಾಷ್ಟ್ರ ನಮನ ಸಂಗೀತ ಸಂಜೆ ಕಾರ್ಯಕ್ರಮ

ಸಂಜೆ 6.30ಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ನೇತೃತ್ವದಲ್ಲಿ ಹೆಸರಾಂತ ಗಾಯಕಿ ಶಮಿತಾ ಮಲ್ನಾಡ್ ತಂಡದವರು ರಾಷ್ಟ್ರ ನಮನ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ, ಲೇಸರ್ ಷೋ ಪ್ರದರ್ಶನವನ್ನೂ ಆಯೋಜಿಸಲಾಗಿದೆ.

ಧ್ವಜಸ್ತಂಭದ ವೈಶಿಷ್ಟ್ಯಗಳು

ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಅವರ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಗಣರಾಜ್ಯೋತ್ಸವ ಅಮೃತ ಮಹೋತ್ಸವದ ಸಂಸ್ಮರಣೆಯಲ್ಲಿ ನಿರ್ಮಿಸಿರುವ 215 ಅಡಿ ಎತ್ತರದ ಈ ರಾಷ್ಟ್ರ ಧ್ವಜಸ್ತಂಭವು ಪ್ರಸ್ತುತ ರಾಜಭವನದ ಹಿಂಬದಿ ರಸ್ತೆಯ ರಾಷ್ಟ್ರೀಯ ಸೇನಾ ವಸ್ತು ಸಂಗ್ರಹಾಲಯ ಆವರಣದಲ್ಲಿರುವ 213 ಅಡಿ ಧ್ವಜ ಸ್ತಂಭಕ್ಕಿಂತಲೂ ಎರಡು ಅಡಿಯಷ್ಟು ಹೆಚ್ಚು ಎತ್ತರದ್ದಾಗಿದೆ.

ಇದನ್ನೂ ಓದಿ: Hiremagaluru Kannan : ಹೆಚ್ಚುವರಿ ವೇತನ; ಹಿರೇಮಗಳೂರು ಕಣ್ಣನ್ ತಪ್ಪಿಲ್ಲ, ತಹಸೀಲ್ದಾರ್‌ರಿಂದ ಹಣ ವಸೂಲಿ: ಸಿದ್ದರಾಮಯ್ಯ

ಹತ್ತೊಂಬತ್ತು ಟನ್ ತೂಕವಿರುವ ಕಂಬದ ಮೇಲ್ಭಾಗದಲ್ಲಿ ಐದು ಅಡಿಯ ಅಶೋಕ ಲಾಂಛನವಿದೆ. ಈ ಲಾಂಛನದಲ್ಲಿನ ನಾಲ್ಕು ಸಿಂಹಗಳು ಕೇವಲ ವಿಜಯನಗರ ವಿಧಾನಸಭಾ ಕ್ಷೇತ್ರದ ನಿವಾಸಿಗಳಿಗೆ ಮಾತ್ರವಲ್ಲ, ನೆರೆಯ ವಿಧಾನಸಭಾ ಕ್ಷೇತ್ರಗಳ ನಿವಾಸಿಗಳಿಗೂ ಕಾಣುವುದು ಈ ಧ್ವಜಸ್ತಂಭದ ಮತ್ತೊಂದು ವಿಶೇಷ ಆಕರ್ಷಣೆಯಾಗಿದೆ. ಈ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜವನ್ನು ಕೈಯಿಂದಲೂ ಹಾಗೂ ಯಾಂತ್ರಿಕವಾಗಿಯೂ ಏರಿಸಲು ಹಾಗೂ ಇಳಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಧ್ವಜ ಸ್ತಂಭದ ಸುತ್ತ ನಿರ್ಮಿಸಿರುವ ಹುಲ್ಲು ಹಾಸು ಹಾಗೂ ವೈಭವೋಪೇತ ಕಲ್ಲು ಮೆಟ್ಟಿಲುಗಳು ಈ ಧ್ವಜಸ್ತಂಭಕ್ಕೆ ವಿಶಿಷ್ಟ ಮೆರುಗು ನೀಡಲಿದೆ ಎಂದು ವಿಜಯನಗರದ ಯುವ ಮುಖಂಡ ಪ್ರದೀಪ್ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version