ಬೆಂಗಳೂರು: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ (Karnataka Rajyotsava Award) ಕನಿಷ್ಠ 68 ಮಂದಿಯನ್ನು ಆಯ್ಕೆ ಮಾಡಲು ನಿರ್ಧಾರ ಮಾಡಲಾಗಿದೆ. ಇದಲ್ಲದೆ, ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿ ಕೊಡಲು ನಿರ್ಧರಿಸಲಾಗಿದೆ. ಯಾವ ಯಾವ ವಿಭಾಗಕ್ಕೆ ಎಷ್ಟು ಪ್ರಶಸ್ತಿ ಎಂಬುದನ್ನು ಇನ್ನೆರಡು ದಿನದಲ್ಲಿ ಅಂತಿಮ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಚಾರವಾಗಿ ಗುರುವಾರ (ಅಕ್ಟೋಬರ್ 26) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆ ಬಳಿಕ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಕರ್ನಾಟಕ ಅಂತ ನಾಮಕರಣ ಮಾಡಿ 50 ವರ್ಷವಾದ ಹಿನ್ನೆಲೆಯಲ್ಲಿ 10 ಪ್ರಶಸ್ತಿಯನ್ನು ಸಂಘ – ಸಂಸ್ಥೆಗಳಿಗೆ ಕೊಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಈವರೆಗೂ 26,555 ಶಿಫಾರಸು ಪತ್ರ ಬಂದಿದೆ. ನಮ್ಮ ಕೈಯಲ್ಲಿ 3,523 ಅರ್ಜಿಗಳು ಬಂದಿವೆ. ಎಲ್ಲ 28 ಸಮಿತಿ ಸದಸ್ಯರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಮಿತಿ ಸದಸ್ಯರ ಆಯ್ಕೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಪ್ರಶಸ್ತಿ ಪಡೆಯುವ 68 ಮಂದಿ ಯಾರು ಎಂಬುದು ನಿರ್ಧಾರ ಆಗಲಿದೆ. ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಶಿವರಾಜ್ ತಂಗಡಗಿ ಹೇಳಿದರು.
ರಾಜ್ಯಕ್ಕೆ ಕರ್ನಾಟಕ ಎಂಬುದಾಗಿ ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವರ್ಷವಿಡಿ ಕಾರ್ಯಕ್ರಮವನ್ನು ಆಯೋಜನೆ ಮಾಡಲು ತೀರ್ಮಾನಿಸಿದ್ದೇವೆ. ಆ ಕಾರ್ಯಕ್ರಮಗಳು ಯಾವ ರೀತಿ ಇರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಶಿವರಾಜ್ ತಂಗಡಗಿ ತಿಳಿಸಿದರು.
ಸಾಮಾಜಿಕ, ಪ್ರಾದೇಶಿಕ ನ್ಯಾಯದ ಮೇಲೆ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸಿಎಂ ಸೂಚನೆ
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಬೇಕು. ಸಾಮಾಜಿಕ, ಪ್ರಾದೇಶಿಕ ನ್ಯಾಯವನ್ನು (Social and Regional Justice) ಕಡ್ಡಾಯವಾಗಿ ಪಾಲಿಸಬೇಕು. ಎಲ್ಲ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ ದೊರಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಭೆಯಲ್ಲಿ ಸೂಚಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಈ ನಿರ್ಧಾರವನ್ನು ಸೂಚಿಸಿದರು.
ಅರ್ಜಿ ಕೊಡುವವರು ಹೆಚ್ಚಿದ್ದ ಕಾರಣ, ಅದಕ್ಕೆ ಕಡಿವಾಣ ಹಾಕಲು ಏಕೀಕರಣ ಆಗಿ ಎಷ್ಟು ವರ್ಷಗಳಾಯಿತೋ, ಅಷ್ಟು ಪ್ರಶಸ್ತಿಗಳನ್ನು ನೀಡಲು ಹಿಂದೆ ನಮ್ಮ ಸರ್ಕಾರವೇ ತೀರ್ಮಾನ ಕೈಗೊಂಡಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಭೆಯಲ್ಲಿನ ತೀರ್ಮಾನ
ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ಕಾರ್ಯನಿರ್ವಹಿಸಿರುವ ಸಂಘ – ಸಂಸ್ಥೆಗಳಿಗೆ ಒಟ್ಟಾರೆ 10 ಪ್ರಶಸ್ತಿಗಳನ್ನು ನೀಡಬೇಕು ಎಂದು ಆಯ್ಕೆ ಸಮಿತಿ ಸದಸ್ಯರು ಅಭಿಪ್ರಾಯಪಟ್ಟರು.
68 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ; ಸಂಘ-ಸಂಸ್ಥೆಗಳಿಗೆ 10 ಪ್ರಶಸ್ತಿ
ಈ ಬಾರಿ 68 ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಬೇಕಿದ್ದು, ಕರ್ನಾಟಕ ಸಂಭ್ರಮದ ಪ್ರಯುಕ್ತ ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿಗಳನ್ನು ನೀಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಚಿವರಾದ ಡಾ. ಜಿ. ಪರಮೇಶ್ವರ್, ಡಾ. ಎಚ್.ಸಿ. ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಆಯ್ಕೆ ಸಮಿತಿ ಸದಸ್ಯರಾದ ಪ್ರೊ.ಜಾಣಗೆರೆ ವೆಂಕಟರಾಮಯ್ಯ, ಡಾ. ಎಚ್.ಎಲ್. ಪುಷ್ಪ, ಡಾ. ವೀರಣ್ಣ ದಂಡೆ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಪಿಂಡಿಪಾಪನಹಳ್ಳಿ ವೆಂಕಟಪ್ಪ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್, ಡಾ. ವಿಠಲ್ ಐ. ಬೆಣಗಿ, ಡಾ. ಸಣ್ಣರಾಮು, ವೆಂಕಟರಾಮಯ್ಯ, ಡಾ. ಎಂ.ಎಸ್. ಮೂರ್ತಿ, ಡಾ. ಗೀತಾ ಶಿವಮೊಗ್ಗ, ಡಾ. ಜಯದೇವಿ ಜಂಗಮ ಶೆಟ್ಟಿ, ಐರೋಡಿ ಗೋವಿಂದಪ್ಪ, ಸಾಧುಕೋಕಿಲ, ಸುಕನ್ಯಾ ಪ್ರಭಾಕರ್, ಫಯಾಜ್ ಖಾನ್-, ಹೃಷಿಕೇಶ್ ಬಹದ್ದೂರ್ ದೇಸಾಯಿ, ನರಸಿಂಹಲು ವಡವಾಟಿ, ಡಿ.ಎನ್. ನರಸಿಂಹರಾಜು, ಡಾ. ಪುರುಷೋತ್ತಮ ಬಿಳಿಮಲೆ, ಚನ್ನಬಸವಣ್ಣ, ಶೈಲೇಶ್ ಚಂದ್ರಗುಪ್ತ, ಜೆ.ಲೋಕೇಶ್ ಉಪಸ್ಥಿತರಿದ್ದರು.