Site icon Vistara News

Auto Drivers : ಡಬಲ್‌ ಮೀಟರ್‌ ಕೇಳಿದ, ಕರೆದ ಕಡೆ ಬಾರದ ಆಟೋ ಡ್ರೈವರ್ಸ್‌ ಮೇಲೆ 670 ಕೇಸ್!

Karnataka bandh Auto

ಬೆಂಗಳೂರು: ಶಕ್ತಿ ಯೋಜನೆಯಿಂದಾಗಿ (Shakti Scheme) ಆಟೋ ಚಾಲಕರು (Auto Drivers) ಸಂಕಷ್ಟಕ್ಕೀಡಾಗಿದ್ದಾರೆ. ಅದೇ ವೇಳೆ ಕೆಲವು ಆಟೋ ಚಾಲಕರ ದುರ್ವರ್ತನೆ ಕೂಡ ಮಿತಿ ಮೀರಿದೆ ಎಂಬ ಆರೋಪ ಕೇಳಿಬಂದಿದೆ. ಜತೆಗೆ ಡಬಲ್‌ ಮೀಟರ್‌ (Double meter) ಕೇಳಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ನಿರಂತರವಾಗಿ ಬರುತ್ತಿರುವ ದೂರಿನ ಅನ್ವಯ ಸಂಚಾರ ಪೊಲೀಸರು ಅಖಾಡಕ್ಕಿಳಿದು ಕ್ರಮ ಕೈಗೊಂಡಿದ್ದಾರೆ. ಇದರ ಪರಿಣಾಮ ಒಟ್ಟು 670 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, 3 ಲಕ್ಷದ 36 ಸಾವಿರದ 500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಆಟೋ ಚಾಲಕರಿಗೆ ಸಂಬಂಧಪಟ್ಟಂತಹ ದೂರುಗಳು ನೀಡಲು ಪೊಲೀಸರು ಪ್ರತ್ಯೇಕ ಲೈನ್‌ ವ್ಯವಸ್ಥೆ ಮಾಡಿದ್ದರು. ಆದರೆ, ಆ ನಂಬರ್‌ಗಳಿಗೆ ಕರೆ ಮಾಡುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ (Social Media) ಸಾರ್ವಜನಿಕರು ಪೋಸ್ಟ್‌ ಮಾಡಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಮನಗಂಡು ಪೊಲೀಸರೇ ಖುದ್ದು ಕಾರ್ಯಾಚರಣೆಗೆ (Police Operation) ಇಳಿದ ಪರಿಣಾಮ ಈಗ ದುರ್ವರ್ತನೆ ತೋರಿದ ಆಟೋ ಚಾಲಕರು ದಂಡ ತೆತ್ತಿದ್ದಾರೆ.

ಮಫ್ತಿಯಲ್ಲಿ ನಡೆದ ಕಾರ್ಯಾಚರಣೆ

ಪೊಲೀಸರು ಮಫ್ತಿಯಲ್ಲಿ ಕಾರ್ಯಾಚರಣೆ (Police Mufti operation) ನಡೆಸಿದ್ದರಿಂದ ನೂರಾರು ಆಟೋ ಚಾಲಕರಿಗೆ ದಂಡ ಬಿದ್ದಿದೆ. ಕರೆದ ಸ್ಥಳಕ್ಕೆ ಬಾರದ ಆಟೋ ಚಾಲಕರು ಅಧಿಕ ಮೊತ್ತಕ್ಕೆ ಬೇಡಿಕೆ ಇಡುತ್ತಿದ್ದರು. ಈ ಸಂಬಂಧ ಉತ್ತರ ವಿಭಾಗ ಹಾಗೂ ಉತ್ತರ ಉಪ ವಿಭಾಗದಲ್ಲಿ ಬರುವ ಒಟ್ಟು 11 ಸಂಚಾರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮಫ್ತಿ ಮೂಲಕ ಕಾರ್ಯಾಚರಣೆ ನಡೆಸಲಾಗಿತ್ತು.

ಮಫ್ತಿಯಲ್ಲಿ ನಡೆದ ಕಾರ್ಯಾಚರಣೆಯನ್ನು ಎರಡು ಭಾಗಗಳಾಗಿ ವಿಂಗಡನೆ ಮಾಡಲಾಗಿತ್ತು. ಅದರಲ್ಲಿ ನಿಗದಿತ ಮೊತ್ತಕ್ಕಿಂತ ಅಧಿಕ ಮೊತ್ತಕ್ಕೆ ಡಿಮ್ಯಾಂಡ್‌ ಮಾಡುವುದು ಹಾಗೂ ಕರೆದ ಸ್ಥಳಕ್ಕೆ ಬಾರದೆ ಸಾರ್ವಜನಿಕರ ಜತೆ ಉದ್ಧಟತನ ಮೆರೆಯುವವರನ್ನು ಗುರಿಯಾಗಿಸಿಕೊಂಡು ಪೊಲೀಸರು ಫೀಲ್ಟ್‌ಗೆ ಇಳಿದಿದ್ದರು. ಎರಡು ಕೆಟಗರಿಯಲ್ಲಿ ಕಾರ್ಯಾಚರಣೆ ನಡೆಸಿದಾಗ ಲಕ್ಷಾಂತರ ಮೌಲ್ಯದ ಮೊತ್ತ ಸಂಗ್ರಹವಾಗಿದೆ.

ಸೆಪ್ಟೆಂಬರ್‌ ತಿಂಗಳು 14ರಿಂದ 23ನೇ ತಾರೀಖಿನವರೆಗೆ ನಡೆದ ಕಾರ್ಯಾಚರಣೆ ಇದಾಗಿದ್ದು, ಕರೆದ ಕಡೆ ಬರುವುದಿಲ್ಲ ಎಂಬ ದೂರಿನ ಅನ್ವಯ ನಾರ್ತ್ ಈಸ್ಟ್ ಸಬ್ ಡಿವಿಶನ್‌ನಲ್ಲಿ 95 ಪ್ರಕರಣಗಳನ್ನು ದಾಖಲಿಸಿ 47,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಇನ್ನು ಉತ್ತರ ಉಪ ವಿಭಾಗದಲ್ಲಿ 221 ಕೇಸ್ ದಾಖಲಿಸಿ 1 ಲಕ್ಷ 10 ಸಾವಿರದ 500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಅಂದರೆ ಒಟ್ಟು 316 ಕೇಸ್‌ಗಳನ್ನು ದಾಖಲಿಸಿ 1 ಲಕ್ಷದ 58 ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: Chaitra Fraud Case : ಫೈರ್‌ ಬ್ರಾಂಡ್‌ ಭಾಷಣಕಾರ್ತಿ ಚೈತ್ರಾ ಈಗ ಕೈದಿ ನಂಬರ್ 9737!

ಭಾರಿ ದಂಡ ವಸೂಲಿ

ಇನ್ನು ಅಧಿಕ ಮೊತ್ತದ ಬೇಡಿಕೆ ಇಟ್ಟ ಅನ್ವಯವಾಗಿ ನಾರ್ತ್ ಈಸ್ಟ್ ಸಬ್ ಡಿವಿಶನ್‌ನಲ್ಲಿ 95 ಪ್ರಕರಣ ದಾಖಲಿಸಿ 47,500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಹಾಗೆ ಆಟೋ ಚಾಲಕರಿಂದ ಪ್ರಯಾಣಿಕರಿಗೆ ಹೆಚ್ಚುವರಿ ಹಣ ಬೇಡಿಕೆ ಹಿನ್ನೆಲೆಯಲ್ಲಿ ಈಶಾನ್ಯ ಉಪ‌ ವಿಭಾಗದಲ್ಲಿ 141 ಪ್ರಕರಣ ದಾಖಲಿಸಿ 72 ಸಾವಿರ ದಂಡ ವಸೂಲಿ ಮಾಡಲಾಗಿದೆ. ಉತ್ತರ ಉಪ ವಿಭಾಗದಲ್ಲಿ 213 ಕೇಸ್ ದಾಖಲಿಸಿ 6 ಸಾವಿರದ 500 ದಂಡ ವಸೂಲಿ ಒಟ್ಟು 354 ಪ್ರಕರಣ ದಾಖಲಿಸಿ 1 ಲಕ್ಷದ 78 ಸಾವಿರದ 500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

Exit mobile version