ಬೆಂಗಳೂರು: ಸಾರಿಗೆ ಇಲಾಖೆ ನಿಗದಿ ಪಡಿಸಿರುವ ರಾಜಸ್ವ ಸಂಗ್ರಹದ ಗುರಿಯಲ್ಲಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಬೆಂಗಳೂರು ಕೇಂದ್ರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (Bangalore Central RTO) ಆಗಸ್ಟ್ ತಿಂಗಳಲ್ಲಿ 109,98,07,898 ರೂ.ಗಳಷ್ಟು ದಾಖಲೆಯ ರಾಜಸ್ವ ಸಂಗ್ರಹಿಸಲಾಗಿದೆ. ಇದು ಈವರೆಗಿನ ರಾಜ್ಯದ ಇತರೆ ಆರ್‌ಟಿಒಗಳಿಗೆ ಹೋಲಿಸಿದರೆ ಮಾಸಿಕವಾಗಿ ಸಂಗ್ರಹಿಸಲಾದ ಅತಿ ಹೆಚ್ಚು ರಾಜಸ್ವ ಸಂಗ್ರಹದ ದಾಖಲೆಯಾಗಿದೆ.
ಎಚ್ಎಸ್ಆರ್ ಲೇಔಟ್ ಕಚೇರಿಗೆ ಜುಲೈನಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಬಂದಿರುವ ಎಲ್. ದೀಪಕ್ ಅವರು ಸಾರ್ವಜನಿಕರಿಗೆ ಸಮರ್ಪಕವಾದಂತಹ ಸೇವೆಗಳನ್ನು ನೀಡುವಲ್ಲಿ ಕಚೇರಿಯಲ್ಲಿನ ಅಧಿಕಾರಿ, ಸಿಬ್ಬಂದಿ ವರ್ಗ, ಸಾರ್ವಜನಿಕರು ಮತ್ತು ವಾಹನ ಸಂಘಟನೆಗಳ ಸಹಕಾರದೊಂದಿಗೆ ಕಚೇರಿಯ ವಾತಾವರಣವನ್ನು ಸಾರ್ವಜನಿಕ ಸ್ನೇಹಿಯಾಗಿ ಬದಲಿಸಲು ಶ್ರಮಿಸುತ್ತಿದ್ದಾರೆ.
ಆರ್‌ಟಿಒ ಕಚೇರಿಗೆ ಬರುವ ಸಾರ್ವಜನಿಕರಿಗೆ ಪ್ರವೇಶ ದ್ವಾರದಲ್ಲಿ ಮಾಹಿತಿ ನೀಡಲು ಸಹಾಯವಾಣಿ ಕೇಂದ್ರ ಹಾಗೂ ಸಾರ್ವಜನಿಕರಿಗೆ ಅಗತ್ಯವಾದ ಸ್ಥಳಗಳಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆಗಳನ್ನು ಮಾಡಿದ್ದು, ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿಗೆ ತಡೆಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಇದನ್ನೂ ಓದಿ | HSRP Number Plate: ಹಳೇ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಪಡೆಯೋದು ಹೇಗೆ? ಅಳವಡಿಸದಿದ್ರೆ ಭಾರಿ ದಂಡ!
ಇದರ ಪ್ರತಿಫಲವಾಗಿ ಸಾರಿಗೆ ಇಲಾಖೆಯಲ್ಲಿನ ವಾಹನ-4 ಮತ್ತು ಸಾರಥಿ-4 ತಂತ್ರಾಂಶದ ಮೂಲಕ ಚಾಲ್ತಿಯಲ್ಲಿರುವ ಆನ್‌ಲೈನ್ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಎಚ್‌ಎಸ್‌ಆರ್ ಲೇಔಟ್‌ನ ಪ್ರಾದೇಶಿಕ ಸಾರಿಗೆ ( ಬೆಂಗಳೂರು ಕೇಂದ್ರ) ಕಚೇರಿಯೊಂದರಲ್ಲಿ 2023-24ನೇ ಸಾಲಿನ ಆಗಸ್ಟ್ ತಿಂಗಳಲ್ಲಿ ಒಟ್ಟಾರೆ ಈ ಕಚೇರಿಯಲ್ಲಿ ದಾಖಲೆಯ 109,98,07,898 ರೂಗಳಷ್ಟು ರಾಜಸ್ವ ಸಂಗ್ರಹ ಗುರಿಯನ್ನು ಸಾಧಿಸಲಾಗಿದೆ.
ಇದು ಈವರೆಗಿನ ಕರ್ನಾಟಕ ರಾಜ್ಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಗಳ ರಾಜಸ್ವ ಸಂಗ್ರಹದಲ್ಲಿ ಮಾಸಿಕವಾಗಿ ಸಂಗ್ರಹಿಸಲಾದ ಅತೀ ಹೆಚ್ಚು ರಾಜಸ್ವ ಸಂಗ್ರಹದ ದಾಖಲೆಯಾಗಿರುತ್ತದೆ ಹಾಗೂ ಭಾರತ ದೇಶದಲ್ಲಿ ಪುಣೆ ಪ್ರಾದೇಶಿಕ ಸಾರಿಗೆ ಕಚೇರಿ ನಂತರ ಎರಡನೇ ಸ್ಥಾನದಲ್ಲಿರುವುದು ಕಂಡುಬಂದಿರುತ್ತದೆ.
ಇದನ್ನೂ ಓದಿ | HSRP Number Plate : ಹಳೆ ವಾಹನಗಳಿಗೂ ಇನ್ನು HSRP ನಂಬರ್ ಪ್ಲೇಟ್ ಕಡ್ಡಾಯ; ನ. 17ರ ನಂತ್ರ ಬೀಳುತ್ತೆ ದಂಡ!
ಎಚ್ಎಸ್ಆರ್ ಲೇಔಟ್‌ನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹಲವಾರು ಸಾರ್ವಜನಿಕ ಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಾ ಕಚೇರಿಯ ಸ್ವರೂಪವನ್ನು ಬದಲಿಸಲು ಎಲ್. ದೀಪಕ್ ಅವರು ಹಾಗೂ ಸಿಬ್ಬಂದಿ ವರ್ಗದವರು ಶ್ರಮಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.