Site icon Vistara News

ಬ್ಯಾಂಕ್‌ ಹಗರಣಗಳ ಸಿಬಿಐ ತನಿಖೆ; ನನ್ನ ಹೋರಾಟಕ್ಕೆ ಸಿಕ್ಕ ಜಯ ಎಂದ ಡಾ. ಶಂಕರ್ ಗುಹಾ ದ್ವಾರಕನಾಥ್

Dr Sankara Guha Dwarakanath

ಬೆಂಗಳೂರು: ಕರ್ನಾಟಕ ಸರ್ಕಾರವು ನಮ್ಮ ಬೇಡಿಕೆಗೆ ಸ್ಪಂದಿಸಿ, ಶ್ರೀ ಗುರು ರಾಘವೇಂದ್ರ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್, ವಸಿಷ್ಠ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಲಿಮಿಟೆಡ್, ಶ್ರೀ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ. ಇದರಿಂದ ಬ್ಯಾಂಕ್‌ಗಳಲ್ಲಿ ನಡೆದ ಕೋಟ್ಯಂತರ ರೂಪಾಯಿ ಅವ್ಯವಹಾರ ಹೊರ ತರಲು ನಾನು ಸತತ ಮೂರು ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರು ಮತ್ತು ಷೇರುದಾರರ ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕರಾದ ಡಾ. ಶಂಕರ್ ಗುಹಾ ದ್ವಾರಕನಾಥ್ (Dr Sankara Guha Dwarakanath) ತಿಳಿಸಿದ್ದಾರೆ.

ಸಹಕಾರಿ ಬ್ಯಾಂಕ್‌ಗಳ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕ ಸರ್ಕಾರವು ನಮ್ಮ ಬೇಡಿಕೆಗೆ ಸ್ಪಂದಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ. ಇದರ ಹಿಂದೆ ಯಾವ ಎಂಎಲ್ಎ, ಎಂಪಿ ಅಥವಾ ಮತ್ಯಾರ ಕೈವಾಡವಿದ್ದರೂ ಅದನ್ನು ನಿಷ್ಪಕ್ಷಪಾತವಾಗಿ ಸಿಬಿಐ ತನಿಖೆ ಮಾಡಿ ನೊಂದ ಠೇವಣಿದಾರರಿಗೆ ನ್ಯಾಯ ಕೊಡಿಸಬೇಕಾಗಿ ವಿನಂತಿಸುತ್ತೇನೆ.

ಮಾನ್ಯ ತೇಜಸ್ವಿ ಸೂರ್ಯ ರವರು ಈ ಹಿಂದೆ ನಡೆಸಿದ ಕಾರ್ಯಕ್ರಮದಲ್ಲಿ ಒಂದು ತಿಂಗಳ ಒಳಗೆ ಈ ವಿಚಾರವಾಗಿ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಅನ್ನು ಮಾಡಿ ನ್ಯಾಯ ಕೊಡಿಸುತ್ತೇವೆ ಎಂದು ಚುನಾವಣೆಗೆ ಮುನ್ನ ಹೇಳಿದ್ದರು. ಆದರೆ 6 ತಿಂಗಳು ಕಾಲ ಕಳೆದರೂ ಈ ಬಗ್ಗೆ ಯಾವ ಒಂದು ವಿಚಾರವನ್ನು ಮಾತನಾಡಿಲ್ಲಾ. ಬಿಜೆಪಿ ಸರ್ಕಾರವು ಚುನಾವಣೆಯ ನಂತರ ಇದ್ಯಾವುದರ ಬಗ್ಗೆಯೂ ಗಮನಹರಿಸದೆ ಈ ವಿಚಾರವನ್ನು ಅರ್ಧಕ್ಕೆ ಕೈ ಬಿಟ್ಟಿತ್ತು. ಆದರೆ ನಮ್ಮ ಕಾಂಗ್ರೆಸ್ ಸರ್ಕಾರವು ನೊಂದ ಠೇವಣಿದಾರದ ರಕ್ಷಣೆಗಾಗಿ ಹಾಗೂ ಅವರಿಗೆ ನ್ಯಾಯ ಕೊಡಿಸುವುದಕ್ಕಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಇಂದು ಆದೇಶ ಹೊರಡಿಸಿದೆ. ಇದು ಈ ಹೋರಾಟದಲ್ಲಿ ನನ್ನ ಜತೆ ಕೈಜೋಡಿಸಿದ ಎಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Bheemanna Khandre: ರಾಜ್ಯದಲ್ಲೇ ಬೀದರ್ ಉಳಿಯಲು ಭೀಮಣ್ಣ ಖಂಡ್ರೆ ಹೋರಾಟವೂ ಕಾರಣ: ಸಿಎಂ

ಗುರು ರಾಘವೇಂದ್ರ, ವಸಿಷ್ಠ, ಗುರು ಸಾರ್ವಭೌಮ ಬ್ಯಾಂಕ್‌ ಹಗರಣದ ಸಿಬಿಐ ತನಿಖೆಗೆ ಸಿಎಂ ಒಪ್ಪಿಗೆ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರು ರಾಘವೇಂದ್ರ ಕೋ ಅಪ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಅನುಮೋದನೆ ನೀಡಿದ್ದಾರೆ.

ಬೆಂಗಳೂರಿನ ಗುರು ರಾಘವೇಂದ್ರ ಕೋ ಅಪ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ ಆಡಳಿತ ಮಂಡಳಿಯ ನಿರ್ದೇಶಕರು, ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಿಬ್ಬಂದಿ ನಡೆಸಿರುವ ಹಗರಣದ ತನಿಖೆ ಮಾಡಿ, ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣದ ತನಿಖೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ತನಿಖಾಧಿಕಾರಿಗಳಿಗೆ ಸಹಕರಿಸಬೇಕು ಎಂದು ಗೃಹ ಇಲಾಖೆಯ ಸರ್ಕಾರದ ಕಾರ್ಯದರ್ಶಿ, ಸಿಬಿಐಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಗುರು ರಾಘವೇಂದ್ರ ಬ್ಯಾಂಕ್ ಹಗರಣದ​ ಹಿನ್ನೆಲೆ

ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬಡ್ಡಿದರದ ಆಮಿಷವೊಡ್ಡಿ ಜನರಿಂದ ಠೇವಣಿ ಪಡೆದು ವಂಚಿಸಿದ ಆರೋಪ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮೇಲಿದೆ. ಹೆಚ್ಚಿನ ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿ ನೂರಾರು ಕೋಟಿ ರೂ. ಠೇವಣಿ ಇಟ್ಟಿದ್ದರು. ಆದರೆ ಬ್ಯಾಂಕ್​​ ಸುಳ್ಳು ಸಾಲಗಾರರ ಖಾತೆ ತೆರದು ಈ ಹಣವನ್ನು ಲಾಂಡರಿಂಗ್​ ಮಾಡಿದೆ.

ಫೆಬ್ರವರಿ 2022 ರಲ್ಲಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಅಧಿಕಾರಿಯೊಬ್ಬರನ್ನು ಮನಿ ಲಾಂಡರಿಂಗ್ ಆರೋಪದ ಮೇಲೆ ಇಡಿ ಬಂಧಿಸಿತು. ಈವರೆಗೆ ಸಂಸ್ಥೆಯ ಅಧ್ಯಕ್ಷ ಸೇರಿ 4 ಮಂದಿಯನ್ನು ಬಂಧಿಸಲಾಗಿದೆ. ಬ್ಯಾಂಕ್​​ನಿಂದ ವಂಚನೆಗೆ ಒಳಗಾದವರಲ್ಲಿ ಹಿರಿಯ ನಾಗರಿಕರೇ ಹೆಚ್ಚಿನವರಾಗಿದ್ದಾರೆ. ಹಿರಿಯ ನಾಗರಿಕರು ತಮ್ಮ ಉಳಿತಾಯ ಹಾಗೂ ನಿವೃತ್ತಿ ವೇತನದ ಹಣವನ್ನು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಗಾಗಿಗುರು ರಾಘವೇಂದ್ರ ಸಹಕಾರ ಬ್ಯಾಂಕ್​ನಲ್ಲಿ ಠೇವಣಿ ಇಟ್ಟಿದ್ದರು.

ಇದನ್ನೂ ಓದಿ | Telangana Elections 2023 : ತೆಲಂಗಾಣ ಕೈ ಶಾಸಕರ ರಕ್ಷಣೆ; ಡಿಕೆಶಿ, ಜಮೀರ್‌ಗೆ ಹೈಕಮಾಂಡ್‌ ಹೊಣೆ

ಗುರು ರಾಘವೇಂದ್ರ ಬ್ಯಾಂಕ್‌ ಹಾಗೂ ಗುರು ಸಾರ್ವಭೌಮ ಬ್ಯಾಂಕ್‌ನಲ್ಲಿ 1,500 ಕೋಟಿ ರೂ. ಅಕ್ರಮ, ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 450 ರಿಂದ 500 ಕೋಟಿ ವಂಚನೆ ನಡೆದಿರುವ ಆರೋಪವಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version