Site icon Vistara News

ಆ್ಯಸಿಡ್‌ ದಾಳಿಗೆ ತುತ್ತಾದ ಯುವತಿಗೆ ಇಂದು ಮೊದಲ ಶಸ್ತ್ರ ಚಿಕಿತ್ಸೆ

acid attack

ಬೆಂಗಳೂರು: ಸುಂಕದಕಟ್ಟೆಯಲ್ಲಿ ಯುವತಿಯ ಮೇಲೆ ಆ್ಯಸಿಡ್‌ ದಾಳಿ ನಡೆಸಿ ತಲೆಮರೆಸಿಕೊಂಡಿರುವ ನಾಗೇಶ್‌ನನ್ನು ಬಂಧಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ತಮಿಳುನಾಡಿನಲ್ಲಿದ್ದಾನೆ, ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಸುದ್ದಿಗಳ ನಡುವೆ ಪೊಲೀಸರು ಹುಡುಕಾಡುತ್ತಿದ್ದಾರಾದರೂ ಆರೋಪಿ ಮಾತ್ರ ಕೈಗೆ ಸಿಕ್ಕಿಲ್ಲ. ಇದೇ ವೇಳೆ ಯುವತಿಗೆ ಗುರುವಾರ ಮೊದಲ ಶಸ್ತ್ರಚಿಕಿತ್ಸೆ ನೆರವೇರಲಿದೆ.
ಈ ದುಷ್ಕೃತ್ಯ ಎಸಗಲು ಇಪ್ಪತ್ತು ದಿನಕ್ಕೂ ಮೊದಲೇ ನಾಗೇಶ್‌ ತಯಾರಿ ನಡೆಸಿದ್ದ ವಿಚಾರ ಹಾಗೂ ಅನೇಕ ದಿನಗಳಿಗೂ ಮುಂಚೆಯೇ ಸ್ನೇಹಿತರೊಂದಿಗೆ ನಾಗೇಶ್‌ ಮಾತನಾಡುವ ಸುಳಿವು ಕೊಟ್ಟಿರುವುದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ದಾಳಿಗೆ ತುತ್ತಾದ ಯುವತಿಗೆ ಇಂದು ಮೊದಲ ಹಂತದ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಸೆಂಟ್‌ಜಾನ್ಸ್‌ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂತ್ರಸ್ತ ಯುವತಿಗೆ 40% ಸುಟ್ಟ ಗಾಯಗಳು ಆಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿರುವ ಸ್ಕಿನ್‌ ಬ್ಯಾಂಕ್‌ನಿಂದ ಯುವತಿಗೆ ಚರ್ಮ ರವಾನೆ ಆಗಲಿದೆ. ಈ ಚರ್ಮ ವನ್ನು ಬಳಸಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುತ್ತಿದೆ.

ಎರಡು ದಿನಗಳ ನಂತರ ಎರಡನೇ ಸರ್ಜರಿ ನಡೆಸಲಿರುವ ವೈದ್ಯರು, ಸರ್ಜರಿಯಲ್ಲಿ ಯುವತಿಗೆ ಮುಖ ಮತ್ತು ತಲೆ ಭಾಗಕ್ಕೆ ಶಸ್ತ್ರ ಚಿಕಿತ್ಸೆಯನ್ನು ಮಾಡಲಿದ್ದಾರೆ. ಯುವತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಯುವತಿಯ ಚಿಕ್ಕಪ್ಪ ಸುಂದರೇಶ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | ನನ್ನ ಟ್ರಿಪ್‌ ವಿವರವನ್ನು ಟಿವಿ, ಪೇಪರ್‌ನಲ್ಲಿ ನೋಡಿ ಎಂದಿದ್ದ ಆರೋಪಿ ನಾಗೇಶ

ಬದುಕಿದ್ದರೆ ಹಿಡಿಯುತ್ತೇವೆ

ಅನೇಕ ದಿನಗಳಿಂದ ಆರೋಪಿಯನ್ನು ಪೊಲೀಸರಿಂದ ಬಂಧಿಸಲು ಸಾಧ್ಯವಾಗದೇ ಇರುವುದು ಸರ್ಕಾರಕ್ಕೂ ಮುಜುಗರ ಉಂಟುಮಾಡಿದೆ. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಗೃಹಸಚಿವ ಆರಗ ಜ್ಞಾನೇಂದ್ರ ತುಸು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ʼಆರೋಪಿ ಭೂಮಿ ಮೇಲೆ ಬದುಕಿದ್ದರೆ , ಎಲ್ಲಿದ್ದರೂ ಅವನನ್ನು ಹಿಡಿದುಕೊಂಡು ಬಂದೇ ಬರ್ತೀವಿ. ಅವನು ಹಗಲಿರುಳು ಒಂದು ಕಡೆ ನಿಲ್ಲದೇ ತಿರುಗಾಡ್ತಿದ್ದಾನೆ. ನಮ್ಮ ಅಧಿಕಾರಿಗಳು ರಾತ್ರಿ ಹಗಲು ಅನ್ನದೇ ಕೆಲಸ ಮಾಡುತ್ತಿದ್ದಾರೆʼ ಎಂದಿದ್ದಾರೆ.

ಘಟನೆಯ ಹಿನ್ನೆಲೆ

ಏಪ್ರಿಲ್‌ 28ರಗುರುವಾರ ಬೆಳಗ್ಗೆ 8-30ರ ವೇಳೆಯಲ್ಲಿ ಯುವತಿಯನ್ನು ಆಕೆಯ ತಂದೆ, ಸುಂಕದಕಟ್ಟೆಯ ಮುತ್ತೂಟ್ ಮಿನಿ‌ ಫೈನಾನ್ಸ್ ಕಚೇರಿಗೆ ಡ್ರಾಪ್ ಮಾಡಿದರು. ಮೊದಲನೇ ಮಹಡಿಯಲ್ಲಿದ್ದ ಕಚೇರಿಗೆ ಮೆಟ್ಟಿಲು ಹತ್ತಿಕೊಂಡು ಹೋಗಬೇಕಿತ್ತು. ಕಚೇರಿಗೆ ಇನ್ನೂ ಯಾರೂ ಬಾರದೆ ಇದ್ದದ್ದರಿಂದ ಕಚೇರಿ ಬಾಗಿಲ ಹತ್ತಿರ ನಿಂತುಕೊಂಡಿದ್ದರು. ಈ ಸಮಯದಲ್ಲಿ ಆರೋಪಿ ನಾಗೇಶ್‌ ಹತ್ತಿರಕ್ಕೆ ಬಂದಿದ್ದಾನೆ. ಒಂದು ಕೈ ಕವರ್‌ನಲ್ಲಿ ಏನನ್ನೋ ಹಿಡಿದಿರುವುದಾಗಿ ಗಮನಿಸಿದ ಯುವತಿ ಕೆಳಗೆ ಓಡಲು ಪ್ರಯತ್ನಿಸಿದ ಕೂಡಲೆ ನಾಗೇಶ ಹಿಂಬಾಲಿಸಿಕೊಂಡು ಬಂದು ಆಸಿಡ್ ಅನ್ನು ಯುವತಿಯ ಮೈ ಮೇಲೆ ಹಾಕಿ ಓಡಿ ಹೋಗಿದ್ದ.ಎದೆ, ಕೈಗಳು , ಹಾಗು ಬೆನ್ನಿಗೆ ಆ್ಯಸಿಡ್‌ ಬಿದ್ದು ಗಾಯಗಳಾಗಿದ್ದು, ಯುವತಿ ಕೂಡಲೆ ತಂದೆಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಳು. ನಂತರ ಆ್ಯಂಬುಲೆನ್ಸ್‌ ಮೂಲಕ ಯುವತಿಯನ್ನು ಮೊದಲಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ, ನಂತರ ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು.ನಾಗೇಶ ಸುಮಾರು ಏಳು ವರ್ಷಗಳ ಹಿಂದೆ ಯುವತಿಯ ದೊಡ್ಡಮ್ಮನ ಮನೆಯಲ್ಲಿ ಬಾಡಿಗೆಗೆ ಇದ್ದ. ತನ್ನನ್ನು ಪ್ರೀತಿ ಮಾಡುವಂತೆ ಹಿಂಸೆ ಮಾಡುತ್ತಿದ್ದ. ಪ್ರೀತಿ ಮಾಡುವುದಿಲ್ಲ ಎಂದು ತಿಳಿಸಿದಾಗ ಸುಮ್ಮನಾಗಿದ್ದ. ಆದರೆ ಮತ್ತೆ ಒಂದು ವಾರದಿಂದ ಹಿಂಬಾಲಿಸಿಕೊಂಡು ಬಂದು, ಪ್ರೀತಿ ಮಾಡುವಂತೆ ಬಲವಂತ ಮಾಡುತ್ತಿದ್ದ. ಇದಕ್ಕೂ ಒಪ್ಪದಿದ್ದಾಗ ಆ್ಯಸಿಡ್‌ ದಾಳಿ ಮಾಡಿದ್ದಾನೆ ಎನ್ನಲಾಗಿದೆ.

ಹುಡುಗಿ ಪೋಟೋ ತೋರಿಸಿ ಹತ್ಯೆ: ಬಿಜೆಪಿ ಕಾರ್ಯಕರ್ತನ ಸಾವಿನ ರಹಸ್ಯ ಬಯಲು

Exit mobile version