ಬೆಂಗಳೂರು: ನಗರ್ತಪೇಟೆ ಹಲ್ಲೆ ಪ್ರಕರಣವನ್ನು ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಶೀಘ್ರ ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ಕಾನೂನಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು. ಹನುಮಾನ್ ಚಾಲೀಸಾ ಹಾಕಿದ್ದರಿಂದ ನಿಜಕ್ಕೂ ಈ ಗಲಾಟೆ ಆಗಿದ್ದರೆ ಯಾರೇ ಇರಲಿ ಅವರಿಗೆ ಶಿಕ್ಷೆಯಾಗಬೇಕು. ಆದರೆ, ಬಿಜೆಪಿಯರು ಈ ಪ್ರಕರಣವನ್ನು ರಾಜಕೀಯಕ್ಕಾಗಿ ದಿಕ್ಕುತಪ್ಪಿಸಬಾರದು ಎಂದು ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ ದ್ವಾರಕನಾಥ್ (Dr Sankara Guha Dwarakanath) ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೊಡೆದಾಡುವುದು ಮೊದಲನೇ ತಪ್ಪು, ಅದರಲ್ಲೂ ಹನುಮಾನ್ ಚಾಲೀಸಾ ಹಾಕಿದ್ದರಿಂದ ನಿಜಕ್ಕೂ ಈ ಗಲಾಟೆ ಆಗಿದ್ದರೆ ಯಾರೇ ಇರಲಿ ಅವರಿಗೆ ಕಾನೂನಿನಡಿಯಲ್ಲಿ ತೀವ್ರ ಶಿಕ್ಷೆ ಆಗಬೇಕು. ಸರ್ಕಾರ ಅವರಿಗೆ ಯಾವುದೇ ಕಾರಣಕ್ಕೂ ರಕ್ಷಣೆ ಕೊಡಬಾರದು. ಪೊಲೀಸರು ಪಕ್ಷಾತೀತವಾಗಿ ಇದರ ತನಿಖೆಯನ್ನು ಮಾಡಿ, ಶೀಘ್ರದಲ್ಲೇ ನ್ಯಾಯ ಒದಗಿಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Hanuman Chalisa: ನಗರ್ತಪೇಟೆ ಹಲ್ಲೆ ಕೇಸ್; ರಾಜ್ಯದಲ್ಲಿ ಹೆಚ್ಚಿದ ಹಿಂದೂ ವಿರೋಧಿ ನಡೆ: ಪ್ರಲ್ಹಾದ್ ಜೋಶಿ ಆಕ್ರೋಶ
ಬಿಜೆಪಿಯ ತೇಜಸ್ವಿ ಸೂರ್ಯ ಅವರು ಐದು ವರ್ಷ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ಮಲಗಿದ್ದು, ಈ ಕೋಮು ಗಲಭೆ ವಾಸನೆ ಬಂದಾಗ ಗಾಢ ನಿದ್ದೆಯಿಂದ ಅವರು ಎದ್ದ ಹಾಗೆ ಕಾಣುತ್ತದೆ. ಈ ಹಿಂದೆ ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದಲ್ಲಿ ಇದೇ ಸಂಸದ ತೇಜಸ್ವಿ ಸೂರ್ಯ ಅವರು ಬಿಜೆಪಿ ಸರ್ಕಾರ ಇಲ್ಲದಿದ್ದರೆ ಕಲ್ಲುತೂರಾಟ ಮಾಡಬಹುದಿತ್ತು ಎಂದು ಹೇಳಿಕೆ ನೀಡಿ, ಅವರ ನಿಜ ಸ್ವರೂಪವನ್ನು ತೋರಿಸಿದ್ದರು. ಇಷ್ಟು ದಿನ ನಗರ್ತಪೇಟೆಯ ಜನರ ಯಾವುದೇ ಸಮಸ್ಯೆಗಳಿಗೂ ಕಾಣದೆ ಇರುವ ಈ ಪ್ರಚಾರಪ್ರಿಯ ಸಂಸದ, ಕೋಮು ಗಲಭೆ ಎಂದ ತಕ್ಷಣ ತನ್ನ ಬೇಳೆಯನ್ನು ಬೇಯಿಸುವುದಕ್ಕೆ ಇಲ್ಲಿ ಹಾಜರಾಗಿ ಅಮಾಯಕರನ್ನು ಬಳಸಿ ಅವರ ವೈಯಕ್ತಿಕ ಕಾರ್ಯ ಸೂಚಿಗಳಿಗೆ ಹಾಗೂ ವೈಯಕ್ತಿಕ ರಾಜಕೀಯಕ್ಕೋಸ್ಕರ ಈ ಘಟನೆಯನ್ನು ಬಳಸುತ್ತಿದ್ದಾರೆ. ಇದು ತೀವ್ರ ಖಂಡನೀಯ ಹಾಗೂ ಇದು ಒಬ್ಬ ಸಂಸದ ನಡೆದುಕೊಳ್ಳುವಂತಹ ರೀತಿಯಲ್ಲ ಎಂದು ಕಿಡಿಕಾರಿದ್ದಾರೆ.
ತಪ್ಪು ಯಾರೇ ಮಾಡಿರಲಿ ಅವರಿಗೆ ಶಿಕ್ಷೆ ಆಗಲೇಬೇಕು. ಯಾರು ಯಾವ ಜಾತಿ ಕೂಡ ಕಾನೂನಿಗಿಂತ ಮೇಲಲ್ಲ. ಅದರಲ್ಲೂ ಭಾರತೀಯರು ಹಿಂದುಗಳು ತಾಳ್ಮೆ ಇರುವಂತಹ ಜನಾಂಗ. ಎಲ್ಲರನ್ನೂ ಆಧರಿಸಿ, ಸ್ವಾಗತಿಸಿ ಅತಿಥಿ ದೇವೋಭವ ಅನ್ನುವ ನಮ್ಮ ಸಂಸ್ಕೃತಿಗೆ ಇಂಥ ಘಟನೆಗಳು ಕಪ್ಪು ಚುಕ್ಕಿ. ಅದಕ್ಕಿಂತ ನಾಚಿಕೆಯೆಂದರೆ ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದು.
ಇದನ್ನೂ ಓದಿ | Hanuman Chalisa: ನಗರ್ತಪೇಟೆಯಲ್ಲಿ ಹಿಂದೂ ಯುವಕನ ಮೇಲಿನ ಹಲ್ಲೆಗೆ ಪ್ರಕಾಶ್ ರೈ ಪ್ರತಿಕ್ರಿಯೆ ಹೀಗಿದೆ!
ಸಂಸದರಾದ ತೇಜಸ್ವಿ ಸೂರ್ಯ ಅವರು ಪ್ರಚಾರಪ್ರಿಯರು ಹಾಗೂ ಸುಳ್ಳಿನ ಸರದಾರರು ಅಂತ ಹೇಳಿ ಜಗತ್ತಿಗೆ ಗೊತ್ತಿರುವಂಥ ವಿಷಯ. ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ವಿಷಯದಲ್ಲಿ ಯಾವ ರೀತಿ ದಿನಕ್ಕೊಂದು ಬಣ್ಣ ನಿಮಿಷಕ್ಕೊಂದು ಸುಳ್ಳು ಹೇಳಿದರು ಎಂದು ಜಗಜ್ಜಾಹೀರಾಗಿದೆ. ಆದ್ದರಿಂದ ಸಂಸದರು ಈ ವಿಷಯದಲ್ಲಿ ರಾಜಕೀಯ ಮಾಡದೆ ಕೋಮುಗಲಭೆಗೆ ದಾರಿ ಮಾಡಿ ಕೊಡಬಾರದೆಂದು ಎಚ್ಚರಿಕೆ ನೀಡಿದರು. ಇದೇ ವೇಳೆ ತೇಜಸ್ವಿ ಸೂರ್ಯ ಅವರು ಯಾವುದೇ ಕ್ಷಣದಲ್ಲಿ ಕಲ್ಲು ತೂರಾಟ ನಡೆಸಬಹುದು ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.