Site icon Vistara News

Actor Nagabhushana : ನಟ ನಾಗಭೂಷಣ್‌ ಕಾರು ಅಪಘಾತ; ರಹಸ್ಯ ಭೇದಿಸಲು ಆರ್‌ಟಿಓ ಅಧಿಕಾರಿಗಳಿಗೆ ಪತ್ರ

Car Accident by Actor Nagabushana

ಬೆಂಗಳೂರು: ನಟ ನಾಗಭೂಷಣ್‌ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು (Actor Nagabhushana) ಮುಂದುವರಿಸಿದ್ದಾರೆ. ಈಗಾಗಲೇ ಡ್ರಂಕ್‌ ಆ್ಯಂಡ್‌ ಡ್ರೈವ್‌ನಿಂದ ಕಾರು ಅಪಘಾತ (Car Accident) ಆಗಿಲ್ಲ ಎಂದು ತಿಳಿದು ಬಂದಿದೆ. ಜತೆಗೆ ಕಾರು ಚಲಾಯಿಸುವಾಗ ಮೊಬೈಲ್‌ ಬಳಕೆ ಏನಾದರೂ ಮಾಡಿದ್ದರಾ. ಅಪಘಾತವಾಗಿದ್ದು ಹೇಗೆ ಎಂಬುದೇ ನಿಗೂಢ‌ವಾಗಿದೆ.

ಆರೋಪಿ ನಾಗಭೂಷಣ್ ಗಾಬರಿಯಿಂದ ಹೀಗೆ ಆಗಿದೆ ಎಂದು ಸ್ವಇಚ್ಛೆಯಿಂದ ಹೇಳಿಕೆ ನೀಡಿದ್ದಾರೆ. ಆದರೆ ಇದನ್ನು ನಂಬಲು ಯಾವುದೇ ಸಾಕ್ಷಿ ಇಲ್ಲ. ಹೀಗಾಗಿ ಕುಮಾರಸ್ವಾಮಿ‌ ಲೇಔಟ್ ಸಂಚಾರಿ ಪೊಲೀಸರು ಅಪಘಾತ ರಹಸ್ಯ ಭೇದಿಸಲು ಮುಂದಾಗಿದ್ದಾರೆ. ಅಪಘಾತದ ಕುರಿತು ಪರಿಶೀಲನೆ ನಡೆಸುವಂತೆ ಪೊಲೀಸರು ಆರ್‌ಟಿಓ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ.

ಆರ್‌ಟಿಓ ಅಧಿಕಾರಿಗಳಿಗೆ ಐಎಂವಿ ಟೆಸ್ಟ್ ಮಾಡಲು ಸೂಚನೆ ನೀಡಿದ್ದಾರೆ. ಐಎಂವಿ ಟೆಸ್ಟ್‌ ಮೂಲಕ ಆಕ್ಸಿಡೆಂಟ್ ಸೀಕ್ರೆಟ್ ಹೊರಬರಲಿದೆ. ಕಾರಿನ ಮ್ಯಾನ್ಯುಫ್ಯಾಕ್ಚರ್ ಡಿಫಾಲ್ಟ್‌ನಿಂದ ಅಪಘಾತವಾಗಿದ್ಯಾ? ಬ್ರೇಕ್ ಫೇಲೂರ್‌ನಿಂದ ಸಂಭವಿಸಿದ್ಯಾ? ಗಾಡಿ ಎಷ್ಟು ಡ್ಯಾಮೇಜ್ ಆಗಿದೆ ಎಂದು ಈ ಐಎಂವಿ ಟೆಸ್ಟ್‌ನಿಂದ ಬೆಳಕಿಗೆ ಬರಲಿದೆ.

ನಟ ನಾಗಭೂಷಣ್ ಮೇಲೆ ಮತ್ತೊಂದು ಕೇಸ್!

ನಟ ನಾಗಭೂಷಣ್ ಮೇಲೆ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ. ವಿದ್ಯುತ್ ಕಂಬಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಮತ್ತೊಂದು ದೂರು ದಾಖಲಾಗಬಹುದು. ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಬಳಿಕ ವಿದ್ಯುತ್ ಕಂಬಕ್ಕೆ ಕಾರು ಗುದ್ದಿಸಿದರು.. ಕಾರು ಡಿಕ್ಕಿಯಿಂದ ವಿದ್ಯುತ್ ಕಂಬಕ್ಕೂ ಹಾನಿ ಆಗಿದೆ. ಕಂಬಕ್ಕೆ ಹಾನಿಯಾದ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಹಾನಿ ಬಗ್ಗೆ ದೂರು ನೀಡುವಂತೆ ಬೆಸ್ಕಾಂ ಎಇಗೆ ಪೊಲೀಸರು ಸೂಚನೆ ನೀಡಿದ್ದಾರೆ. ದೂರು ಪಡೆದು ಮತ್ತೊಂದು ಎಫ್ಐಆರ್ ದಾಖಲಿಸಲು ಕೆಎಸ್ ಲೇಔಟ್ ಸಂಚಾರ ಪೊಲೀಸರು ನಿರ್ಧರಿಸಿದ್ದಾರೆ.

ನಟ ನಾಗಭೂಷಣ ಕಾರು ಅಪಘಾತ ಪ್ರಕರಣ ಸಂಬಂಧ ತನಿಖೆಯು ನಡೆಯುತ್ತಿದೆ. ಆರ್‌ಟಿಓ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ತನಿಖೆ ನಡೆಸಿ ವರದಿಯನ್ನು ನೀಡುತ್ತಾರೆ. ಲೈಟ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ವಿಚಾರಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅವರಿಂದ ದೂರು ಬಂದರೆ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Nice Road Accident: ಐಕಿಯಾಗೆ ಶಾಪಿಂಗ್‌ ಹೋಗಿ ಬರುತ್ತಿದ್ದವರನ್ನು ನೀರಿನ ಬಾಟಲಿ ರೂಪದಲ್ಲಿ ಕಾಡಿತು ಸಾವು!

ಏನಿದು ಘಟನೆ?

ಕೌಸಲ್ಯಾ ಸುಪ್ರಜಾ ರಾಮ ಚಿತ್ರದಲ್ಲಿ ನಟಿಸಿರುವ ನಟ ನಾಗಭೂಷಣ ಅವರ (Actor Nagabhushana) ಕಾರು ದಂಪತಿಗೆ ಡಿಕ್ಕಿಯಾಗಿ, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರು. ಬೆಂಗಳೂರಿನ ವಸಂತನಗರ ಮುಖ್ಯರಸ್ತೆ ಬಳಿ ಶನಿವಾರ ರಾತ್ರಿ (ಸೆಪ್ಟೆಂಬರ್‌ 30) ದಂಪತಿ ಫುಟ್‌ಪಾತ್‌ ಮೇಲೆ ನಡೆದುಕೊಂಡು ಹೋಗುವಾಗ ನಾಗಭೂಷಣ ಕಾರು ಡಿಕ್ಕಿಯಾಗಿತ್ತು.

ಕೃಷ್ಣ (58) ಹಾಗೂ ಅವರ ಪತ್ನಿ ಪ್ರೇಮಾ (48) ಅವರು ರಾತ್ರಿ ವಾಕಿಂಗ್‌ ಮಾಡುವಾಗ ನಟ ನಾಗಭೂಷಣ ಅವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿತ್ತು. ಮೊದಲು ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿಯಾಗಿ, ನಂತರ ಫುಟ್‌ಪಾತ್‌ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಕಾರು ಡಿಕ್ಕಿಯಾಗಿತ್ತು ಅಪಘಾತದ ತೀವ್ರತೆಗೆ ಪ್ರೇಮಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನು ಗಂಭೀರವಾಗಿ ಗಾಯಗೊಂಡಿರುವ ಕೃಷ್ಣರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕೃಷ್ಣ ಹಾಗೂ ಪ್ರೇಮಾ.

ಉತ್ತರಹಳ್ಳಿ ಕೋಣನಕುಂಟೆ ಕ್ರಾಸ್ ದಾರಿಯ ಮಧ್ಯೆ ರಾತ್ರಿ 9.45ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ಕೃಷ್ಣ ಹಾಗೂ ಪ್ರೇಮಾ ದಂಪತಿಯ ಪುತ್ರ ಪಾರ್ಥ ಎಂಬುವರು ಕುಮಾರಸ್ವಾಮಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪಾರ್ಟ್‌ಮೆಂಟ್‌ ಬಳಿಯ ಫುಟ್‌ಪಾತ್‌ ಮೇಲೆ ವಾಕಿಂಗ್‌ ಮಾಡುವಾಗ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೃಷ್ಣ ಅವರ ಪರಿಸ್ಥಿತಿಯೂ ಗಂಭೀರವಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಕೃಷ್ಣ ಅವರ ಕೈ, ಕಾಲು ಹಾಗೂ ಬೆನ್ನಿಗೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಯಾವ್ಯಾವ ಕೇಸ್‌ ದಾಖಲು

ನಟ ನಾಗಭೂಷಣ್‌ ವಿರುದ್ಧ ಐಪಿಸಿ 279 , 337 ಹಾಗೂ 304A ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯದಿಂದ ಕಾರು ಚಾಲನೆ ಹಾಗೂ ಅತಿ ವೇಗವಾಗಿ ಫುಟ್‌ಪಾತ್‌ ಮೇಲೆ ಚಲಾಯಿಸದ್ದಕ್ಕೆ ಐಪಿಸಿ 279 ಹಾಕಲಾಗಿದೆ. 337 ಜೀವಕ್ಕೆ ಹಾನಿ ಹಾಗೂ 304 A ಅಡಿ ಅಪಘಾತ ಪ್ರಕರಣವನ್ನು ದಾಖಲು ಮಾಡಲಾಗಿದೆ.

ನಟ ನಾಗಭೂಷಣ್‌ನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲ್ಲ. ಇದು ಹಿಟ್‌ ಆ್ಯಂಡ್‌ ರನ್ ಕೇಸ್‌ ಅಲ್ಲ, ಇದೊಂದು ಅಪಘಾತದ ಪ್ರಕರಣವಾಗಿದೆ. ಹೀಗಾಗಿ ಠಾಣಾ ಜಾಮೀನು ಕೊಟ್ಟಿದ್ದೇವೆ ಎಂದು ಸಂಚಾರಿ ದಕ್ಷಿಣ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್‌ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version