Site icon Vistara News

Actress Leelavathi : ಅವರು ನಿಜವಾದ ಮಣ್ಣಿನ ಮಗಳು, ಅಮ್ಮ- ಮಗ ಮಾತನಾಡುತ್ತಿದುದೇ ತುಳುವಲ್ಲಿ!

Leelavathi nidhana

ಬೆಂಗಳೂರು: ಶುಕ್ರವಾರ ಸಂಜೆ ಕೊನೆಯುಸಿರೆಳೆದ ಕನ್ನಡ ಸಿನಿಮಾ ರಂಗದ ಭಾಗ್ಯ ದೇವತೆ ಲೀಲಾವತಿ (Actress Leelavathi) ಅವರು ಪ್ರೀತಿಸಿದ್ದು ಕೇವಲ ಕನ್ನಡ ಚಿತ್ರರಂಗವನ್ನು ಮಾತ್ರವಲ್ಲ, ಕರ್ನಾಟಕವನ್ನು ಮಾತ್ರವಲ್ಲ, ಅವರು ಕನ್ನಡದ ಮಣ್ಣನ್ನು ನಿಜವಾದ ಅರ್ಥದಲ್ಲಿ ಪ್ರೀತಿಸಿದ ಅಭಿನೇತ್ರಿ. ಅವರು ಕನ್ನಡ ಮಾತ್ರವಲ್ಲ ತನ್ನ ಮಾತೃಭಾಷೆಯಾದ ತುಳುವನ್ನು (Tulu Language) ಕೂಡಾ ಅಷ್ಟೇ ಪ್ರೀತಿ ಮಾಡಿದರು. ಹೀಗಾಗಿ ಅವರು ನಿಜವಾದ ಮಣ್ಣಿನ ಮಗಳು (Mannina Magalu).

ಲೀಲಾವತಿ ಅವರು 600 ಸಿನಿಮಾಗಳಲ್ಲಿ ನಟಿಸಿದ ಜನಪ್ರಿಯ ನಟಿ. 1949ರಿಂದ ಆರಂಭಗೊಂಡ ಸಿನಿಮಾ ಪಯಣ 2009ರಲ್ಲಿ ತೆರೆ ಕಂಡ ವಿನೋದ್‌ ರಾಜ್‌ ಅವರ ಯಾರದು ಸಿನಿಮಾದವರೆಗೂ ಮುಂದುವರಿದಿತ್ತು. ಅಂದರೆ 60 ವರ್ಷಗಳ ಕಾಲ ನಟಿಸಿದ್ದಾರೆ. ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಖ್ಯಾತಿವಂತೆ. ಅಷ್ಟಾದರೂ ಅವರು ತಾನೊಬ್ಬ ಮಹಾನ್‌ ನಟಿ ಎಂಬ ಹಮ್ಮು ತೋರಲಿಲ್ಲ. ಅವರಿಗೆ ಚೆನ್ನೈನಲ್ಲಿ ಆಸ್ತಿ ಇತ್ತು. ಬೆಂಗಳೂರಿನಲ್ಲೂ ಮನೆ ಇತ್ತು. ಅವರು ಮನಸು ಮಾಡಿದ್ದರೆ ಚೆನ್ನೈನ ಆಸ್ತಿಯನ್ನು ಮಾರಿ ಬೆಂಗಳೂರಿನ ವೈಭವೋಪೇತ ಪ್ರದೇಶದಲ್ಲಿ ಮನೆ ಮಾಡಿ ಆರಾಮವಾಗಿ ಇರಬಹುದಾಗಿತ್ತು. ಆದರೆ, ಲೀಲಾವತಿ ಅವರ ತಲೆಯಲ್ಲಿ ಇದ್ದುದೇ ಬೇರೆ.

ಲೀಲಾವತಿ ಅವರು ಬಡತನವನ್ನು ಉಂಡು ಬೆಳೆದವರು. ಜನರ ಕಷ್ಟಗಳು ಚೆನ್ನಾಗಿ ಗೊತ್ತಿತ್ತು. ಅದಕ್ಕಿಂತಲೂ ಹೆಚ್ಚಾಗಿ ತಾನು ಒಬ್ಬ ರೈತ ಮಹಿಳೆಯಾಗಿ ಮಣ್ಣಿನ ಮಗಳಾಗಬೇಕು ಎನ್ನುವ ದೊಡ್ಡ ಆಸೆ ಹೊಂದಿದ್ದರು. ಚೆನ್ನೈನ ಆಸ್ತಿಯನ್ನು ಮಾರಿದ ಅವರು ನೆಲಮಂಗಲ ಸಮೀಪದ ಸೋಲದೇವನ ಹಳ್ಳಿಯಲ್ಲಿ ಭೂಮಿ ಖರೀದಿಸಿದರು. ಅದನ್ನು ತಾವೇ ಸ್ವಯಂ ಆಗಿ ನಿಂತು ನಂದನವನವಾಗಿ ಬೆಳೆಸಿದರು. ಅದೆಷ್ಟೋ ಹಣ್ಣು ಹಂಪಲು, ತರಕಾರಿ, ಹೂವು, ಹಣ್ಣುಗಳೊಂದಿಗೆ ಅಲಂಕರಿಸಿದರು. ಬರಡುಭೂಮಿಯಾಗಿದ್ದ ಆ ನೆಲವನ್ನು ಸಸ್ಯ ಶ್ಯಾಮಲೆಯಾಗಿ ಮಾಡಿದರು. ಮತ್ತು ಅದೆಲ್ಲವನ್ನೂ ತಾವೇ ಒಬ್ಬ ಸಾಮಾನ್ಯ ಕಾರ್ಮಿಕ ಮಹಿಳೆಯಂತೆ ಸೀರೆಯನ್ನು ಸೊಂಟಕ್ಕೆ ಸಿಕ್ಕಿಸಿ ದುಡಿದು ಸಾಧಿಸಿದರು. ಅಲ್ಲಿನ ಹಸಿರು ಹುಲ್ಲು ಬೆಳೆದು ಆಸುಪಾಸಿನ ಜನರಿಗೆ ಉಚಿತವಾಗಿ ನೀಡಿ ಗೋರಕ್ಷಣೆಗೆ ನೆರವು ನೀಡಿದರು. ಬರ ಪೀಡಿತ ಪ್ರದೇಶಗಳಿಗೆ ಮೇವು ಕಳುಹಿಸಿದರು.

ತಾವೇ ಸ್ವತಃ ಹಲವಾರು ದನಗಳನ್ನು ಕಟ್ಟಿ ಹೈನುಗಾರರಾದರು. ಡೇರಿಗೆ ಹಾಲು ಹಾಕಿದರು. ಅವರ ಮನೆ ಎನ್ನುವುದು ಪ್ರಾಣಿ ಪ್ರೀತಿಯ ತಾಣವಾಗಿತ್ತು. ಅದೆಷ್ಟೋ ಜಾತಿ ನಾಯಿಗಳು ಮಾತ್ರವಲ್ಲ, ಊರಿನ ನಾಯಿಗಳು ಕೂಡಾ ಆಸರೆ ಪಡೆದವು.

ಇದೆಲ್ಲದಕ್ಕೂ ಅವರಿಗೆ ಬೆಂಗಾವಲಾಗಿ ನಿಂತದ್ದು ಮಗ ವಿನೋದ್‌ ರಾಜ್‌. ನೀವು ನಂಬಲೇಬೇಕು, ಒಂದು ಕಾಲದಲ್ಲಿ ಸಾಲು ಸಾಲು ಹಿಟ್‌ ಚಿತ್ರಗಳನ್ನು ನೀಡಿದ ಪ್ರತಿಭಾವಂತ ನಟ, ಅದ್ಭುತ ಡ್ಯಾನ್ಸರ್‌ ವಿನೋದ್‌ ರಾಜ್‌ ತಾನೇನೂ ಅಲ್ಲ ಎಂಬಂತೆ ಮಣ್ಣಿನ ಮಗನಾಗಿ ಅಮ್ಮನೊಂದಿಗೆ ಆ ಭೂಮಿಯಲ್ಲಿ ದುಡಿದರು. ಲುಂಗಿ ಸುತ್ತಿಕೊಂಡು ಕತ್ತಿ, ಹಾರೆ ಹಿಡಿದುಕೊಂಡು ತೋಟದ ಕಡೆಗೆ ಹೋಗುವ ಅವರ ಚಿತ್ರಗಳು ನಿಜಕ್ಕೂ ಒಬ್ಬ ಮನುಷ್ಯ ಹೀಗೂ ಇರಬಹುದಾ ಎಂಬ ಪ್ರಶ್ನೆಯನ್ನು ಹುಟ್ಟಿಸಿದ್ದವು.

ಲೀಲಾವತಿ ಮತ್ತು ಮಗ ವಿನೋದ್‌ ರಾಜ್‌ ಅವರ ನಡುವಿನ ಬಾಂಧವ್ಯ ಎನ್ನುವುದು ಜಗತ್ತಿನ ಪ್ರತಿಯೊಬ್ಬ ತಾಯಿ ಕೂಡಾ ತನ್ನ ಮಗನಿಂದ ಬಯಸುವ ಅತ್ಯಂತ ಪ್ರೀತಿಯ ಸಂಬಂಧ. ಆ ಸಂಬಂಧ ಬಾಯಿ ಮಾತಿಗೆ ಸೀಮಿತವಾಗಿರಲಿಲ್ಲ. ವಿನೋದ್‌ ರಾಜ್‌ ಅವರ ಕೈಯಲ್ಲಿ ಲೀಲಮ್ಮ ನಿಜಕ್ಕೂ ಮಗುವೇ ಆಗಿದ್ದರು.

ವಿನೋದ್‌ ರಾಜ್‌ ಅವರಿಗೆ ಮದುವೆಯಾಗಿದ್ದರೂ ಪತ್ನಿ ಮತ್ತು ಮಗನನ್ನು ಚೆನ್ನೈಯಲ್ಲಿ ಬಿಟ್ಟು ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡರು. ತಾನು ಮಾತ್ರ ಅಮ್ಮನ ಜತೆಯಾಗಿ ನಿಂತುಬಿಟ್ಟರು. ಅಮ್ಮನಿಗೆ ಮಗ, ಮಗನಿಗೆ ಅಮ್ಮ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರುವುದೇ ಇಲ್ಲ ಎಂಬಷ್ಟು ಆತ್ಮೀಯತೆ ಅವರಲ್ಲಿತ್ತು.

ಲೀಲಮ್ಮ ಅವರು ಎಲ್ಲಿಗೆ ಹೋಗಬೇಕಾದರೂ ಜತೆಗೆ ವಿನೋದ್‌ ರಾಜ್‌ ಇದ್ದೇ ಇರುತ್ತಿದ್ದರು. ಇದು ಲೀಲಮ್ಮ ಅವರ ಅನಾರೋಗ್ಯದ ಸಂದರ್ಭದಲ್ಲಂತೂ ಇನ್ನಷ್ಟು ಗಾಢವಾಯಿತು. ಅಮ್ಮ ಎಲ್ಲಿಗೆ ಹೋಗೋಣ ಎಂದರೂ ವಿನೋದ್‌ ರಾಜ್‌ ರೆಡಿ ಆಗುತ್ತಿದ್ದರು. ಕನ್ನಡ ಚಿತ್ರರಂಗದ ಕಾವೇರಿ ಪ್ರತಿಭಟನೆಗೆ, ಸಚಿವರ ಭೇಟಿಗೆ ಎಲ್ಲದಕ್ಕೂ ಹೊರಟುಬಿಡುತ್ತಿದ್ದರು.

ನೆಲಮಂಗಲದ ಬದುಕು ಹೂವಿನ ಹಾಸಿಗೆಯಲ್ಲ, ಆದರೆ..

ನಿಜವೆಂದರೆ ಲೀಲಾವತಿ ಮತ್ತು ವಿನೋದ್‌ ರಾಜ್‌ ಅವರ ಪಾಲಿಗೆ ನೆಲಮಂಗಲದ ತೋಟದ ಮನೆಯ ಬದುಕು ಅಷ್ಟೇನೂ ಸುಖಕರವಾಗಿರಲಿಲ್ಲ. ಆರಂಭಿಕ ಹಂತದಲ್ಲಿ ಅದೆಷ್ಟೋ ವಿರೋಧಗಳನ್ನು ಅವರು ಎದುರಿಸಿದರು. ಅವರ ತೋಟದಲ್ಲಿ ಕಳ್ಳತನಗಳು ಹೆಚ್ಚಾಗಿದ್ದವು. ಅವರ ಮನೆಗೆ ತೋಟಕ್ಕೆ ಕಲ್ಲುಗಳು ಬೀಳುತ್ತಿದ್ದವು, ಬೆಂಕಿ ಬೀಳುತ್ತಿದ್ದವು. ಪ್ರತಿದಿನ ಎನ್ನುವ ಹಾಗೆ ಸಮಸ್ಯೆಗಳ ಸರಮಾಲೆ. ಆಗೆಲ್ಲ ಲೀಲಾವತಿ ಅವರು ಆಗಾಗ ಬಂದು ಪೊಲೀಸ್‌ ಠಾಣೆಯಲ್ಲಿ ಕಣ್ಣೀರು ಹಾಕುತ್ತಿದ್ದರು. ರಕ್ಷಣೆ ಕೊಡಿ ಎಂದು ರೋದಿಸುತ್ತಿದ್ದರು.‌

ಆದರೆ, ಏನೇ ಆದರೂ ಆ ಊರನ್ನು ದ್ವೇಷಿಸಲಿಲ್ಲ. ಯಾರೋ ಕಿಡಿಗೇಡಿಗಳು ಮಾಡುವ ಸಣ್ಣತನಕ್ಕೆ ನಾವು ಊರನ್ನು ದೂಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಊರಿಗಾಗಿ ಸಹಾಯ ಮಾಡಬೇಕು ಎಂಬ ಮಹದಾಸೆಯನ್ನು ಹೊತ್ತಿದ್ದರು. ಕೊರೊನಾ ಸಂದರ್ಭದಲ್ಲಿ ಊರಿನ ಹಸುಗಳಿಗೆ ತಾವೇ ಮೇವು ನೀಡಿದರು. ಜನರಿಗೆ ತರಕಾರಿಗಳನ್ನು ನೀಡಿದರು.

ಅದಕ್ಕಿಂತಲೂ ಹೆಚ್ಚಾಗಿ ತಮ್ಮದೇ ಹಣದಲ್ಲಿ 1.20 ಕೋಟಿ ರೂ.ಯಲ್ಲಿ ಅಲ್ಲೊಂದು‌ ಆಸ್ಪತ್ರೆಯನ್ನು ಕಟ್ಟಿಸಿದರು. (ಅದನ್ನು ಕಿಡಿಗೇಡಿಗಳು ಪುಡಿಗಟ್ಟಿದ್ದು, ಬೀಗ ಹಾಕಿದ್ದು ನಡೆದಿದೆ. ಆದರೂ ಲೀಲಾವತಿ ಹಿಂದೆ ಸರಿಯಲಿಲ್ಲ.. ಅದೂ ಸಾಲದು ಎಂಬಂತೆ ಒಂದು ಪಶುವೈದ್ಯಕೀಯ ಆಸ್ಪತ್ರೆ ಸ್ಥಾಪನೆಯ ಕನಸು ಕಂಡರು. ಈ ನಡುವೆ ಲೀಲಾವತಿ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಅವರು ಹಾಸಿಗೆ ಹಿಡಿದರು. ಆ ಕ್ಷಣದಲ್ಲೂ ಅವರು ಮಗನನ್ನು ಕರೆದು ಹೇಳಿದ್ದು ತಮ್ಮ ಆರೋಗ್ಯದ ಬಗ್ಗೆ ಅಲ್ಲ. ಊರಿನ ಪಶುವೈದ್ಯಕೀಯ ಆಸ್ಪತ್ರೆ ಕೆಲಸ ಎಲ್ಲಿಗೆ ಬಂತು ಎಂದು.

ಅವರ ಮಗ ವಿನೋದ್‌ ರಾಜ್‌ ತಮ್ಮ ಅಮ್ಮನ ಹಾಸಿಗೆಯಲ್ಲಿದ್ದಾಗಲೇ ಪಶುವೈದ್ಯಕೀಯ ಆಸ್ಪತ್ರೆಯನ್ನು ಸ್ಥಾಪನೆ ಮಾಡಿ ಅಮ್ಮನ ಕೊನೆಯ ಆಸೆಯನ್ನು ಈಡೇರಿಸಿದರು. ಅಮ್ಮ ಅತ್ಯಂತ ನಿರಾಳವಾದರು.

ಅವರು ಮಾತನಾಡುತ್ತಿದುದು ತುಳುವಿನಲ್ಲಿ!

ಲೀಲಾವತಿ ಅವರಿಗೆ ಕನ್ನಡ ಪ್ರೇಮ ಎಷ್ಟಿತ್ತು ಎನ್ನುವುದಕ್ಕೆ ಉದಾಹರಣೆ ಬೇಕಿಲ್ಲ. ಅವರ ಬದುಕೇ ಅದಕ್ಕೆ ನಿದರ್ಶನ. ಆದರೆ, ಅವರಿಗೆ ಇರುವ ಮಾತೃಭಾಷೆ ಪ್ರೇಮವೂ ಅಷ್ಟೇ ದೊಡ್ಡದು. ಲೀಲಾವತಿ ಅವರು ಹುಟ್ಟಿದ್ದು 1937ರಲ್ಲಿ. ಅವರು ಮೊದಲು ಸಿನಿಮಾದಲ್ಲಿ ನಟಿಸಿದ್ದು 1949ರಲ್ಲಿ. ಅವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ತಮ್ಮ 12-13ನೇ ವಯಸ್ಸಿಗಾಗಲೇ ಅವರು ಬೆಳ್ತಂಗಡಿಯ ಸಂಬಂಧವನ್ನು ಸ್ವಲ್ಪ ಸ್ವಲ್ಪವಾಗಿ ಕಡಿದುಕೊಂಡಿದ್ದರು. ಆದರೆ ತಮ್ಮ ಮಾತೃಭಾಷೆಯಾದ ತುಳುವಿನ ಪ್ರೀತಿಯನ್ನು ಕೊನೆಯ ಉಸಿರಿನ ವರೆಗೂ ಬಿಟ್ಟುಕೊಟ್ಟಿರಲಿಲ್ಲ.

ನೀವು ನಂಬಲೇಬೇಕು, ಲೀಲಾವತಿ ಅವರು ತುಳುಭಾಷೆಯನ್ನು ಮಗ ವಿನೋದ್‌ ರಾಜ್‌ ಗೂ ಕಲಿಸಿದ್ದರು. ವಿನೋದ್‌ ಹುಟ್ಟಿದ್ದು ಚೆನ್ನೈನ ತಮಿಳು ವಾತಾವರಣದಲ್ಲಿ. ಬಳಿಕ ಬೆಳೆದದ್ದು ಬೆಂಗಳೂರಿನಲ್ಲಿ. ಎಲ್ಲೂ ತುಳುವಿನ ಕನೆಕ್ಷನೇ ಇಲ್ಲ. ಆದರೆ, ಅಮ್ಮ ಮತ್ತು ಮಗ ಕೊನೆಯವರೆಗೆ ಮಾತನಾಡಿದ್ದು ತುಳುವಲ್ಲೆ. ಅಂದರೆ ಲೀಲಾವತಿ ಅವರು ತಮ್ಮ ಮಗನಿಗೆ ಅತ್ಯಂತ ಪ್ರೀತಿಯಿಂದ ಈ ಭಾಷೆಯನ್ನು ಕಲಿಸಿದ್ದರು. ಮಗನೂ ಅಷ್ಟೇ ಪ್ರೀತಿಯಿಂದ ಬೆಳೆಸಿದ್ದರು.

ಇತ್ತೀಚೆಗೆ ಹಾಸಿಗೆ ಹಿಡಿದು ಬೇರೆಯವರನ್ನು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಲೀಲಾವತಿ ಅವರನ್ನು ನೋಡಲು ಗಣ್ಯರು ಬಂದಾಗ ವಿನೋದ್‌ ರಾಜ್‌ ಅವರು ಅಮ್ಮನನ್ನು ಎಬ್ಬಿಸಿ ಮಾತನಾಡುತ್ತಿದ್ದುದು ತುಳುವಿನಲ್ಲೇ: ಅಮ್ಮಾ.. ಏರ್‌ ಬತ್ತೆರ್‌ ತೂಲೆ.. ತೂಲೆಮ್ಮಾ.. (ಅಮ್ಮಾ ಯಾರು ಬಂದರು ನೋಡಿ.. ನೋಡಿ ಅಮ್ಮʼʼ ಎಂದು ಹೇಳುತ್ತಿದ್ದರು ವಿನೋದ್‌ ರಾಜ್‌.

ಒಬ್ಬ ತಾಯಿ, ಒಬ್ಬ ಮಗ, ಒಂದು ನೆಲ, ಒಂದು ಭಾಷೆ.. ಇಷ್ಟು ಸಾಕಲ್ಲವೇ ಆ ಅಮ್ಮ ಎಂಥವರು ಎಂದು ಹೇಳುವುದಕ್ಕೆ. ಲೀಲಮ್ಮನನ್ನು ಇಡೀ ನಾಡು ಸದಾ ಕಾಲ ಮಿಸ್‌ ಮಾಡಲಿದೆ.

Exit mobile version