Site icon Vistara News

Aero India 2023 : ರಾಜ್ಯದಲ್ಲೇ ಹೊಸ ಏರೋಸ್ಪೇಸ್‌ ನೀತಿ, ವೈಮಾನಿಕ ಕ್ಷೇತ್ರದಲ್ಲಿ ಮಹತ್ಸಾಧನೆಗೆ ಅಣಿ ಎಂದ ಬೊಮ್ಮಾಯಿ

Aero Show Bommai

#image_title

ಬೆಂಗಳೂರು: ಕರ್ನಾಟಕದಲ್ಲಿ ಹೊಸ ಏರೋಸ್ಪೇಸ್‌ ನೀತಿಯನ್ನು ಜಾರಿಗೆ ತಂದು ಸುಮಾರು ೪೫೦೦೦ಕ್ಕೂ ಹೆಚ್ಚು ಯುವಜನರನ್ನು ವೈಮಾನಿಕ ಕ್ಷೇತ್ರದಲ್ಲಿ ಮಹಾಸಾಧನೆಗೆ ಸಿದ್ಧಪಡಿಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಯಲಹಂಕದಲ್ಲಿ ಆಯೋಜಿಸಲಾಗಿರುವ ಏರೋ ಇಂಡಿಯಾ-೨೦೨೩ (Aero India 2023) ಏರ್‌ ಶೋ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಮಾತನಾಡಿದರು.14ನೇ ಬಾರಿಗೆ ಏರ್‌ ಶೋ ನಡೆಸಲು ರಾಜ್ಯಕ್ಕೆ ಅವಕಾಶ ನೀಡಿದ್ದಕ್ಕಾಗಿ ಅವರು ಪ್ರಧಾನಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವೆರಿಗೆ ಅಭಿನಂದನೆ, ಕೃತಜ್ಞತೆ ಸಲ್ಲಿಸಿದರು.

ಇದು ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ಏರ್‌ ಶೋ ಆಗಿದ್ದು, ರಕ್ಷಣಾ ವಲಯ ಮತ್ತು ಇಂಥ ಏರ್‌ ಶೋ ನಡೆಸುವಲ್ಲಿ ಕರ್ನಾಟಕ ಮತ್ತು ಭಾರತದ ಶಕ್ತಿ ಇವತ್ತು ಜಗತ್ತಿಗೆ ತಿಳಿದಂತಾಗಿದೆ ಎಂದು ಹೇಳಿದ ಅವರು, ಕೊರೊನಾ ಕಾಲದಲ್ಲಿ ಪ್ಯಾರಿಸ್‌ ಏರ್‌ಶೋವನ್ನು ರದ್ದುಪಡಿಸಿದ ಕಾಲದಲ್ಲೂ ನಾವು ಯಶಸ್ವಿಯಾಗಿ ನಡೆಸಿದ ಹೆಮ್ಮೆ ನಮ್ಮದು ಎಂದು ಎದೆ ತಟ್ಟಿಕೊಂಡರು.

ಕರ್ನಾಟಕದ ಶಕ್ತಿ ಅನಾವರಣ

ಏರೊ ಸ್ಪೇಸ್‌ಗೆ ಸಂಬಂಧಿಸಿದಂತೆ ಕರ್ನಾಟಕ ಮಹತ್ವದ ಪಾತ್ರ ವಹಿಸುತ್ತದೆ. ಕರ್ನಾಟಕದಲ್ಲಿ 1940ರಲ್ಲಿ ಎಚ್ ಎ ಎಲ್ ಸ್ಥಾಪನೆಯಾಗಿದ್ದು, ಎನ್ ಎ ಎಲ್ , ಬಿಎಚ್ ಇ ಎಲ್, ಡಿಆರ್‌ಡಿಒ ಎಲ್ಲವೂ ಆರ್ ಆಂಡ್ ಡಿ ಸಾಮರ್ಥ್ಯವನ್ನು ಹೆಚ್ಚಿಸಿವೆ.1960ರ ದಶಕದಲ್ಲಿ ಬೆಂಗಳೂರಿನಲ್ಲಿ ಇಸ್ರೊ ಆರಂಭವಾಯಿತು. 1960ರಲ್ಲಿ ಆರ್ಯಭಟ ಉಪಗ್ರಹವನ್ನು ಬೆಂಗಳೂರಿನಿಂದ ಉಡಾವಣೆ ಮಾಡಲಾಯಿತು. ಶೇ. 67ರಷ್ಟು ಏರೋಸ್ಪೇಸ್ ಉಪಕರಣಗಳು ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತದೆ ಎಂದರು.

ಮೋದಿ ಮಹತ್ವಾಕಾಂಕ್ಷೆಗೆ ಕರ್ನಾಟಕ ಸಾಥ್‌

ಭಾರತವನ್ನು ರಕ್ಷಣೆ ಸೇರಿದಂತೆ ಎಲ್ಲ ವಲಯಗಳಲ್ಲಿ ಜಗತ್ತಿನ ಅತಿ ದೊಡ್ಡ ಶಕ್ತಿಯಾಗಿ ರೂಪಿಸುವ ನಿಮ್ಮ ಮಹತ್ವಾಕಾಂಕ್ಷೆಗೆ ಕರ್ನಾಟಕದ ಸಾಥಿಯಾಗಿ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರಿಗೆ ಭರವಸೆ ನೀಡಿದರು.

ಕರ್ನಾಟಕದಲ್ಲಿ ಹೊಸ ಏರೋಸ್ಪೇಸ್‌ ನೀತಿಯನ್ನು ಘೋಷಿಸಲಾಗುತ್ತಿದ್ದು, ಅದರಲ್ಲಿ ಯುವಜನರಿಗೆ ವೈಮಾನಿಕ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಶಕ್ತಿ ತುಂಬಲಾಗುವುದು ಎಂದರು ಬೊಮ್ಮಾಯಿ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ ಬೊಮ್ಮಾಯಿ ಅವರು, ನರೇಂದ್ರ ಮೋದಿ ಅವರು ಮಹಾನ್‌ ಇಂಡಿಯಾದ ಕನಸುಗಾರ ಮಾತ್ರವಲ್ಲ, ಕನಸುಗಳನ್ನು ನನಸು ಮಾಡಬಲ್ಲ ಶಕ್ತಿವಂತ ಎಂದರು. ಅವರು ಒಬ್ಬ ನಾಯಕನಾಗಿ ನಮ್ಮನ್ನು ಮುನ್ನಡೆಸುವುದು ಮಾತ್ರವಲ್ಲ, ಶಕ್ತಿಶಾಲಿ ಉದಾಹರಣೆಗಳೊಂದಿಗೆ ನಮಗೆ ನಾಯಕರಾಗಿದ್ದಾರೆ ಎಂದರು.

ವಿಮಾನಯಾನ ಖಾತೆ ಸಚಿವ ಜೋತಿರಾದಿತ್ಯ ಸಿಂಧಿಯಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉಪಸ್ಥಿತರಿದ್ದರು.

ಇದನ್ನೂ ಓದಿ : Aero India 2023: ಕರ್ನಾಟಕದ ಚಂದನದಂತೆ ಏರೋ ಇಂಡಿಯಾ ಕಂಪು ಪಸರಿಸಲಿದೆ: ರಕ್ಷಣಾ ಸಚಿವ ರಾಜನಾಥ ಸಿಂಗ್‌

Exit mobile version