ಬೆಂಗಳೂರು : ಇಲ್ಲಿನ ಬೊಮ್ಮನಹಳ್ಳಿ ಸಮೀಪ ಕಳೆದ ಬುಧವಾರ ಟ್ರಕ್‌ವೊಂದರಲ್ಲಿ ಗೋಮಾಂಸ ತ್ಯಾಜ್ಯವನ್ನು (cow waste) ಸಾಗಿಸಿದ್ದ ಬಗ್ಗೆ ಶಂಕೆ ಇದೆ. ಆದರೆ ಬೊಮ್ಮನಹಳ್ಳಿ ಪೊಲೀಸರು (bomanahalli police) ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ನಿರಾಕರಿಸುತ್ತಿದ್ದಾರೆ. ಗೋಹತ್ಯೆ ಕಾನೂನು ಬಾಹಿರವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕೆಂದು ನಟಿ ಐಂದ್ರಿತಾ ರೈ (Aindrita Ray) ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದರು.
ಗೋಮಾಂಸವನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂದು ಕೆಲವು ವ್ಯಕ್ತಿಗಳು ತ್ಯಾಜ್ಯ ಸಾಗಿಸುತ್ತಿದ್ದ ಟ್ರಕ್ ಅಡ್ಡಗಟ್ಟಿ ವಿಡಿಯೊ ಮಾಡಿಕೊಂಡಿದ್ದರು. ಈ ವಿಡಿಯೊವನ್ನು ನಟಿ ಐಂದ್ರಿತಾ ರೈ ಪೊಲೀಸ್ ಕಮೀಷನರ್, ಬೆಂಗಳೂರು ಪೊಲೀಸ್ ಹಾಗೂ ಆಗ್ನೇಯ ವಿಭಾಗ ಡಿಸಿಪಿಗೆ ಟ್ಯಾಗ್ ಮಾಡಿ, ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.
ನಟಿ ಐಂದ್ರಿತಾ ರೈ ಎಕ್ಸ್‌ನಲ್ಲಿ ಹಾಕಿದ್ದ ಪೋಸ್ಟ್ ಅನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಟಿ ಐಂದ್ರಿತಾ ರೈ ಆರೋಪಕ್ಕೆ ಡಿಸಿಪಿ ಸಿ.ಕೆ. ಬಾಬಾ ಅವರು ಸ್ಪಷ್ಟನೆ ನೀಡಿದ್ದಾರೆ. ಟ್ರಕ್‌ನಲ್ಲಿದ್ದ ಮಾಂಸದ ತ್ಯಾಜ್ಯವನ್ನು ಪರಿಶೀಲನೆ ನಡೆಸಲಾಗಿದೆ. ಟ್ರಕ್‌ನಲ್ಲಿದ್ದದ್ದು ಹಸು ಮಾಂಸದ ತ್ಯಾಜ್ಯವಲ್ಲ. ಮೂಳೆಗಳು, ಕೊಂಬು, ಚರ್ಮವು ಹಸುವಿನದ್ದಲ್ಲ. ಬದಲಿಗೆ ಟ್ರಕ್‌ನಲ್ಲಿ ಪತ್ತೆಯಾದ ತ್ಯಾಜ್ಯ ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಪಟ್ಟಿದ್ದು ಎಂದು ಎಕ್ಸ್ ಮೂಲಕವೇ ಆಗ್ನೇಯ ವಿಭಾಗದ ಡಿಸಿಪಿ ಸಿ. ಕೆ. ಬಾಬಾ ಸ್ಪಷ್ಟನೆ ನೀಡಿದ್ದಾರೆ.
ಪೋಸ್ಟ್ ಡಿಲೀಟ್ ಮಾಡಿದ ನಟಿ
ಆಗ್ನೇಯ ವಿಭಾಗದ ಡಿಸಿಪಿ ಸಿ. ಕೆ. ಬಾಬಾ ಸ್ಪಷ್ಟನೆ ನೀಡಿದ ಬೆನ್ನಲ್ಲೇ ನಟಿ ಐಂದ್ರಿತಾ ರೈ ಅವರು ತಾವು ಮಾಡಿದ ಪೋಸ್ಟ್ ಅನ್ನು ಗುರುವಾರ (ಸೆ.8) ಡಿಲೀಟ್ ಮಾಡಿದ್ದಾರೆ. ವಿಡಿಯೊ ಸಹಿತ ಹಾಕಿದ್ದ ಪೋಸ್ಟ್ ರಿಮೂವ್ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ