Site icon Vistara News

ಸೆ.22ಕ್ಕೆ ದಿ.ಅನಂತಕುಮಾರ್‌ 63ನೇ ಜನ್ಮದಿನ; ಪ್ರೇರಣಾದಾಯಿ ಕಾರ್ಯಕ್ರಮಗಳ ಆಯೋಜನೆ

ಅನಂತಕುಮಾರ್‌

ಬೆಂಗಳೂರು: ಸೆಪ್ಟೆಂಬರ್‌ 22ರಂದು ದಿವಂಗತ ಮಾಜಿ ಸಚಿವ ಅನಂತಕುಮಾರ್‌ ಅವರ 63ನೇ ಜನ್ಮದಿವನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಅನಂತಕುಮಾರ್‌ ಪ್ರತಿಷ್ಠಾನ ಮತ್ತು ಅದಮ್ಯ ಚೇತನ ಸಂಸ್ಥೆಗಳಿಂದ ಜಂಟಿಯಾಗಿ ಸೆ.೨೧ ಮತ್ತು ೨೨ರಂದು ಕೆ.ಆರ್‌ ರಸ್ತೆಯ ಶಂಕರಪುರಂನಲ್ಲಿರುವ ಗಾಯನ ಸಮಾಜದ ಹತ್ತಿರದ ಜೈನ್‌ ಭವನದಲ್ಲಿ ಅನೇಕ ಪ್ರೇರಣದಾಯಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ್‌ ತಿಳಿಸಿದ್ದಾರೆ.

ಸೆಪ್ಟೆಂಬರ್‌ 21 ರ ಸಂಜೆ 4.30ಕ್ಕೆ ಅದಮ್ಯ ಚೇತನ ಸಂಸ್ಥೆ ಊಟ ಪೂರೈಸುತ್ತಿರುವ 70 ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿವೃತ್ತ ನ್ಯಾಯಮೂರ್ತಿಗಳಾದ ಎನ್‌.ಕುಮಾರ್‌ ಸೇರಿ ಹಲವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ | ಕೇರಳ ಸಿಎಂ ವಿಜಯನ್‌ ತಂದಿದ್ದ ಮೂರಕ್ಕೆ ಮೂರೂ ಪ್ರಸ್ತಾವನೆಯನ್ನು ರಿಜೆಕ್ಟ್‌ ಮಾಡಿದ ಸಿಎಂ ಬೊಮ್ಮಾಯಿ

ಸಂಜೆ 6 ಗಂಟೆಗೆ ಅನಂತಕುಮಾರ್‌ ಅವರ 1959 ರಿಂದ 1987ರ ವರೆಗಿನ ಅವರ ಜೀವನದ ಬಗೆಗಿನ “ಅನಂತಯಾನ” ಪುಸ್ತಕದ ಮೊದಲ ಭಾಗವನ್ನು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಾರ್ಪಣೆಗೊಳಿಸಲಿದ್ದಾರೆ.

ಸೆಪ್ಟೆಂಬರ್‌ 22 ರಂದು ಬೆಳಗ್ಗೆ 11 ಗಂಟೆಗೆ 1987 ರಿಂದ 1997ರ ದಶಕದಲ್ಲಿ ಅನಂತಕುಮಾರ್‌ ಅವರ ಜತೆ ಕೆಲಸ ಮಾಡಿದ ಪ್ರಮುಖ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ, ಹಿರಿಯ ನಾಯಕರಾದ ಡಿ.ಎಚ್‌.ಶಂಕರಮೂರ್ತಿ ಸೇರಿ ಪ್ರಮುಖರು ಭಾಗವಹಿಸಲಿದ್ದಾರೆ.

ಸೆಪ್ಟೆಂಬರ್‌ 22ರಂದು ಸಂಜೆ 4.30 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪಬ್ಲಿಕ್‌ ಟಿವಿ ಮುಖ್ಯಸ್ಥ ಎಚ್‌. ಆರ್‌.ರಂಗನಾಥ್‌ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಂಜೆ 6 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅನಂತಪಥ ಮಾಸ ಪತ್ರಿಕೆಯ ಬಿಡುಗಡೆ, 63 ದೇವಸ್ಥಾನಗಳ ಸಮಗ್ರ ಮಾಹಿತಿಯನ್ನು ಒಳಗೊಂಡಿರುವಂತಹ “ದೇಗುಲ ದರ್ಶನ” ಪುಸ್ತಕ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್‌ ಶೆಟ್ಟರ್‌, ಕೇಂದ್ರ ಸಚಿವರಾದ ಪ್ರಲ್ಹಾದ್‌ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಚಿವರಾದ ಅಶ್ವತ್ಥನಾರಾಯಣ, ಸೋಮಣ್ಣ, ಆರ್‌. ಅಶೋಕ್‌, ಗೊವಿಂದ ಕಾರಜೋಳ ಸೇರಿ ವಿವಿಧ ಸಚಿವರು, ಶಾಸಕರು ಹಾಗೂ ಬಿಜೆಪಿ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ | Run with saree | ಸೀರೆ ಉಟ್ಟು ನಾರಿಯರ ಓಟ, ಮಲ್ಲೇಶ್ವರಂನಲ್ಲಿ ಮಿಂಚಿದ ಸಾವಿರಾರು ಮಹಿಳೆಯರು

Exit mobile version