Site icon Vistara News

Lakshmi Hebbalkar: ಅಂಗನವಾಡಿ ಹೆಸರು ಶೀಘ್ರದಲ್ಲೇ ಬದಲಾವಣೆ! ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುಳಿವು

Anganwadi workers should not be worried says Minister Lakshmi Hebbalkar

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (Lakshmi Hebbalkar) ಭರವಸೆ ನೀಡಿದ್ದಾರೆ.

ಬೆಂಗಳೂರಿನ ಗೃಹಕಚೇರಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ (ಎಐಟಿಯುಸಿ) ಕಾರ್ಯಕರ್ತರು ಭೇಟಿ ಮಾಡಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಲ್ಲಿಸಿದ ಮನವಿ ಸ್ವೀಕರಿಸಿ, ಅವರು ಮಾತನಾಡಿದರು.

ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗಿದೆ. ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವರು ಈ ವೇಳೆ ತಿಳಿಸಿದರು.

ಇದನ್ನೂ ಓದಿ: Hassan News: ಆಲೂರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ನೋಟ್‌ಬುಕ್‌, ಬ್ಯಾಗ್‌ ವಿತರಣೆ

ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಹಾಗೂ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿದ್ದು, ಇದರಿಂದ ಅಂಗನವಾಡಿ ಶಿಕ್ಷಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ನಿಮ್ಮ ಹಾಗೂ ಮಕ್ಕಳ ಇಬ್ಬರ ಹಿತದೃಷ್ಟಿಯಿಂದ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರ ಕಳವಳ ಅರ್ಥ ಆಗುತ್ತದೆ. ಆದರೆ, ಈಗಾಗಲೇ ಅಂಗನವಾಡಿ ಕೇಂದ್ರಗಳ ಅಸ್ತಿತ್ವದ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೂ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಕಾರ್ಯಕರ್ತೆಯರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ ಎಂದರು‌.

ಅಂಗನವಾಡಿ ಕೇಂದ್ರದ ಹೆಸರು ಬದಲಾವಣೆಗೆ ಚಿಂತನೆ

ಅಂಗನವಾಡಿ ಮಕ್ಕಳಿಗೆ ಬ್ಯಾಗ್, ಯೂನಿಫಾರ್ಮ್ ಕೊಡುವ ಬಗ್ಗೆ ತೀರ್ಮಾನಿಸಿದೆ. ಮಾಂಟೆಸ್ಸರಿ ತರಗತಿಗಳು ಆರಂಭಗೊಂಡ ನಂತರ ಅಂಗನವಾಡಿ ಹೆಸರನ್ನು ಬದಲಿಸಲು ಸರ್ಕಾರ ಚಿಂತನೆ ನಡೆಸಿದೆ. ಕರ್ನಾಟಕದ ಅಂಗನವಾಡಿ ಕೇಂದ್ರಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು, ಅಂಗನವಾಡಿ ಕಾರ್ಯಕರ್ತರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಇದನ್ನೂ ಓದಿ: DK Suresh: ರಾಜ್ಯದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿ; ಕೇಂದ್ರಕ್ಕೆ ಡಿ.ಕೆ. ಸುರೇಶ್ ಮನವಿ

ಈ ವೇಳೆ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಜಯಮ್ಮ, ಕಾರ್ಯದರ್ಶಿ ಬಿ. ಅಮ್ಜದ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version